ಲೋಕಸಭಾ ಚುನಾವಣೆ: ನಾಲ್ಕನೇ ಹಂತದಲ್ಲಿ ಶೇ.64 ಮತದಾನ

Update: 2019-04-29 17:20 GMT

ಹೊಸದಿಲ್ಲಿ,ಎ.29: ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಸೋಮವಾರ ನಡೆದಿದ್ದು,ಪಶ್ಚಿಮ ಬಂಗಾಳದ ಅಲ್ಲಲ್ಲಿ ಹಿಂಸಾಚಾರದ ಪ್ರಕರಣಗಳು ವರದಿಯಾಗಿವೆ. ಒಂಭತ್ತು ರಾಜ್ಯಗಳ 72 ಲೋಕಸಭಾ ಕ್ಷೇತ್ರಗಳಲ್ಲಿ ಸರಾಸರಿ ಶೇ.64ರಷ್ಟು ಮತದಾನ ದಾಖಲಾಗಿದೆ.

ಈ ಸುತ್ತಿನಲ್ಲಿ ದೇಶದ ಆರ್ಥಿಕ ರಾಜಧಾನಿ ಮುಂಬೈ ಎಲ್ಲರ ಗಮನ ಸೆಳೆದಿದ್ದು,ಅದು ಹಾಲಿ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದೆ. ಕಳೆದ ವರ್ಷದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದುಕೊಂಡಿದ್ದ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿಯೂ ಸೋಮವಾರದಿಂದ ಮತದಾನ ಆರಂಭಗೊಂಡಿದ್ದು,ಆಡಳಿತ ಬಿಜೆಪಿಯ ಪಾಲಿಗೆ ಇದು ನಿರ್ಣಾಯಕ ಸುತ್ತು ಆಗಿದೆ. ಏಳು ಹಂತಗಳ ಚುನಾವಣೆ ಮೇ 19ರಂದು ಅಂತ್ಯಗೊಳ್ಳಲಿದ್ದು,ಮೇ 23ರಂದು ಫಲಿತಾಂಶಗಳು ಪ್ರಕಟಗೊಳ್ಳಲಿವೆ.

ಪ.ಬಂಗಾಳ,ಮುಂಬೈ ಮತ್ತು ಉತ್ತರ ಪ್ರದೇಶದ ಕೆಲವೆಡೆಗಳಲ್ಲಿ ವಿದುನ್ಯಾನ ಮತದಾನ ಯಂತ್ರ(ಇವಿಎಂ)ಗಳಲ್ಲಿ ತಾಂತ್ರಿಕ ದೋಷಗಳ ಕುರಿತು ದೂರುಗಳು ದಾಖಲಾಗಿವೆ. ಎಂಟು ಕ್ಷೇತ್ರಗಳಲ್ಲಿ ಮತದಾನ ನಡೆದ ಪ.ಬಂಗಾಳದ ವಿವಿಧೆಡೆಗಳಲ್ಲಿ ಘರ್ಷಣೆಗಳು ವರದಿಯಾಗಿವೆ.

ಪ.ಬಂಗಾಳದ ಬೀರ್‌ಭೂಮ್‌ನ ನಾನೂರ್ ಎಂಬಲ್ಲಿ ನಡೆದ ಘರ್ಷಣೆಗಳಲ್ಲಿ ಓರ್ವ ಗಾಯಗೊಂಡಿದ್ದಾನೆ. ಅಸನ್ಸೋಲ್‌ನಲ್ಲಿ ಮತಗಟ್ಟೆಯೊಂದರ ಹೊರಗೆ ಬಿಜೆಪಿ ಮತ್ತು ತೃಣಮೂಲ ಕಾರ್ಯಕರ್ತರ ನಡುವೆ ಘರ್ಷಣೆಗಳ ವೇಳೆ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಅವರ ಕಾರಿಗೆ ಹಾನಿಯನ್ನುಂಟು ಮಾಡಲಾಗಿದೆ.

ಪ.ಬಂಗಾಳದಲ್ಲಿಯ ಹಿಂಸಾಚಾರಗಳ ಕುರಿತು ಚುನಾವಣಾ ಆಯೊಗಕ್ಕೆ ದೂರು ಸಲ್ಲಿಸಿರುವ ಬಿಜೆಪಿಯು ಮತಗಟ್ಟೆಗಳನ್ನು ವಶಪಡಿಸಿಕೊಂಡ ಹಲವಾರು ಘಟನೆಗಳ ಬಗ್ಗೆ ಆರೋಪಿಸಿದೆ. ಕೇಂದ್ರಿಯ ಪಡೆಗಳಿಂದ ಕಾನೂನು ಬಾಹಿರ ಕ್ರಮ ಮತ್ತು ಬಿಜೆಪಿ ಅಭ್ಯರ್ಥಿಗಳಿಂದ ನೀತಿ ಸಂಹಿತೆ ಉಲ್ಲಂಘನೆಗಳ ಬಗ್ಗೆ ತೃಣಮೂಲ ಕೂಡ ದೂರುಗಳನ್ನು ದಾಖಲಿಸಿದೆ.

ಮುಂಬೈನಲ್ಲಿ ಬಾಲಿವುಡ್ ತಾರೆಯರು,ಸೆಲೆಬ್ರಿಟಿಗಳು,ಉದ್ಯಮಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದರು. ಇಲ್ಲಿ ಕಾಂಗ್ರೆಸ್-ಎನ್‌ಸಿಪಿ ಕೂಟ ಮತ್ತು ಬಿಜೆಪಿ-ಶಿವಸೇನೆ ಮೈತ್ರಿಯ ನಡುವೆ ಭಾರೀ ಹಣಾಹಣಿ ನಡೆದಿದೆ. ಹಿಂದಿನ ಚುನಾವಣೆಯಲ್ಲಿ ಮಹಾನರದ ಆರು ಕ್ಷೇತ್ರಗಳ ಪೈಕಿ ತಲಾ ಮೂರನ್ನು ಬಿಜೆಪಿ ಮತ್ತು ಶಿವಸೇನೆ ಗೆದ್ದುಕೊಂಡಿದ್ದವು.

ಸೋಮವಾರ ಮಹಾರಾಷ್ಟ್ರದ 17,ರಾಜಸ್ಥಾನ ಮತ್ತು ಉತ್ತರ ಪ್ರದೇಶದ ತಲಾ 13,ಪ.ಬಂಗಾಳದ 8,ಮಧ್ಯಪ್ರದೇಶ ಮತ್ತು ಒಡಿಶಾದ ತಲಾ 6,ಬಿಹಾರದ 5 ಮತ್ತು ಜಾರ್ಖಂಡ್‌ನ ಮೂರು ಕ್ಷೇತ್ರಗಳಲ್ಲಿ ಹಾಗೂ ಜಮ್ಮು-ಕಾಶ್ಮೀರದ ಅನಂತನಾಗ್ ಕ್ಷೇತ್ರದ ಒಂದು ಭಾಗದಲ್ಲಿ ಮತದಾನ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News