ಝಾಕಿರ್ ನಾಯ್ಕ್ ಜೊತೆಗಿರುವ ವ್ಯಕ್ತಿ ಶ್ರೀಲಂಕಾ ಆತ್ಮಹತ್ಯಾ ಬಾಂಬರ್ ಎನ್ನುವುದು ನಿಜವೇ?

Update: 2019-04-30 09:42 GMT

ಧಾರ್ಮಿಕ ವಿದ್ವಾಂಸ ಝಾಕಿರ್ ನಾಯ್ಕ್ ಜತೆಗೆ ಒಬ್ಬ ವ್ಯಕ್ತಿ ಇರುವ ಹಲವಾರು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಈ ವ್ಯಕ್ತಿ ಶ್ರೀಲಂಕಾ ಆತ್ಮಹತ್ಯಾ ಬಾಂಬರ್ ಎಂಬ ವಿವರಣೆಯನ್ನೂ ನೀಡಲಾಗಿದೆ. ಈ ಫೋಟೋಗಳನ್ನು ಶೇರ್ ಮಾಡಿದವರಲ್ಲಿ ಭಾರತೀಯ ಸೇನೆಯ ಮಾಜಿ ಅಧಿಕಾರಿ ಹಾಗೂ ಬಿಜೆಪಿಗೆ ಹೊಸದಾಗಿ ಸೇರ್ಪಡೆಗೊಂಡ ಮೇಜರ್ ಸುರೇಂದ್ರ ಪೂನಿಯಾ ಕೂಡ ಸೇರಿದ್ದಾರೆ.

ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಝಾಕಿರ್ ನಾಯ್ಕ್ ಜತೆಗಿರುವ ಚಿತ್ರವೊಂದನ್ನೂ  ಅವರು ಶೇರ್ ಮಾಡಿದ್ದು ಈ ಮೂಲಕ ಝಾಕಿರ್ ನಾಯ್ಕ್ ರಿಗೆ ಕಾಂಗ್ರೆಸ್ ಜತೆ ನಂಟಿದೆ ಎಂದು ಬಿಂಬಿಸುವ ಯತ್ನ ನಡೆಸಲಾಗಿದೆ.

ಟ್ವಿಟರ್ ಹ್ಯಾಂಡಲ್ ಚೌಕೀದಾರ್ ದಿ ಆ್ಯಕ್ಟಿವಿಸ್ಟ್ ಎನ್ನುವ ಖಾತೆಯ ಪೋಸ್ಟ್ ಗೆ 4,000 ರಿಟ್ವೀಟ್ ಗಳು ದೊರಕಿದ್ದು, ಧಾರ್ಮಿಕ ವಿದ್ವಾಂಸ ಝಾಕೀರ್ ನಾಯ್ಕ್ ರನ್ನು ‘ಕಾಂಗ್ರೆಸ್ ಪಕ್ಷದ ಮಾವ'' ಎಂದು ಬಣ್ಣಿಸಲಾಗಿದೆ. “ಶ್ರೀಲಂಕಾದ ಆತ್ಮಹತ್ಯಾ ಬಾಂಬರ್ ಕಾಂಗ್ರೆಸ್ ಪಕ್ಷದ ಮಾವನೊಂದಿಗೆ” ಎಂದು ಫೋಟೋಗೆ ವಿವರಣೆ ನೀಡಲಾಗಿದೆ. ಫೇಸ್ ಬುಕ್ ನಲ್ಲೂ ಈ ಫೋಟೋಗಳು ವೈರಲ್ ಆಗಿವೆ.

ವಾಸ್ತವವೇನು?

ಆತ್ಮಹತ್ಯಾ ಬಾಂಬರ್ ಅಲ್ಲ: ವಾಸ್ತವದಲ್ಲಿ ಝಾಕಿರ್ ನಾಯ್ಕ್ ಜತೆ ಕಾಣಿಸಿಕೊಂಡಿರುವ ವ್ಯಕ್ತಿ ಶ್ರೀಲಂಕಾದ ಆತ್ಮಹತ್ಯಾ ಬಾಂಬರ್ ಅಲ್ಲ. ಅವರು ಝಾಕಿರ್ ನಾಯ್ಕ್ ಶಿಷ್ಯ. ಈ ಚಿತ್ರಗಳನ್ನು ಗೂಗಲ್ ರಿವರ್ಸ್ ಸರ್ಚ್ ಮಾಡಿದಾಗ ಮಲೇಷ್ಯಾ ಮೂಲದ ಮಲಯ್ ಮೇಲ್ ಪತ್ರಿಕೆಯ ಎಪ್ರಿಲ್ 28ರ ಆವೃತ್ತಿಗೆ ಕರೆದೊಯ್ಯುತ್ತದೆ. ಹಿಂದು ಧರ್ಮವನ್ನು ನಿಂದಿಸುವ ಹೇಳಿಕೆಗಳಿಗಾಗಿ ರವಿವಾರ ಮಲೇಷ್ಯಾದ ಪರ್ಲಿಸ್ ಎಂಬಲ್ಲಿ ಬಂಧಿತನಾದ ಮುಹಮ್ಮದ್ ಝಮ್ರಿ ವಿನೋತ್ ಕಾಳಿಮುತ್ತು ಎಂಬ ಹೆಸರಿನ ವ್ಯಕ್ತಿ ಈತನಾಗಿದ್ದಾನೆ.

ಆತನನ್ನು ವಶಕ್ಕೆ ಪಡೆದುಕೊಳ್ಳುವ ದೃಶ್ಯ ಹೊಂದಿರುವ ಕಿರು ವೀಡಿಯೋವನ್ನು ಸೆಬೆರಾಂಗ್ ಪೆರಾಯ್ ಮುನಿಸಿಪಲ್ ಕೌನ್ಸಿಲರ್ ಡೇವಿಡ್ ಮಾರ್ಷೆಲ್ ಇಂದು ಬೆಳಿಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆಂದು ಮಲಯ್ ಮೈಲ್ ವರದಿ ಮಾಡಿದೆ.

ಝಾಕಿರ್ ನಾಯ್ಕ್ ಜೊತೆ ತಾನು ಇರುವ ಹಲವು ಫೋಟೋಗಳನ್ನೂ ಝುಮ್ರಿ ತನ್ನ ಟ್ವಿಟ್ಟರ್ ಹ್ಯಾಂಡಲ್ ಮುಖಾಂತರ ಪೋಸ್ಟ್ ಮಾಡಿದ್ದಾನೆ. ಶ್ರೀಲಂಕಾ ಸ್ಫೋಟಗಳಿಗೆ ಕಾರಣರಾದ ಎಲ್ಲಾ ಆತ್ಮಹತ್ಯಾ ಬಾಂಬರ್ ಗಳು ಶ್ರೀಲಂಕಾದ ನಾಗರಿಕರೆಂದು ಹೇಳಲಾಗಿದೆ. ಆದರೆ ಝಮ್ರಿ ಮಲೇಷ್ಯಾ ನಾಗರಿಕ.

ಕೃಪೆ: altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News