ರಾಜೀನಾಮೆ ನೀಡಲು ಶಂಷೇರ್ ಸಿಂಗ್‌ಗೆ ಕಾಂಗ್ರೆಸ್ ಸೂಚನೆ

Update: 2019-04-30 14:14 GMT

ಹೊಸದಿಲ್ಲಿ, ಎ.30: ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ಶಂಷೇರ್ ಸಿಂಗ್ ದುಲ್ಲೋ ಅವರ ಪುತ್ರ ಬಂದೀಪ್ ಸಿಂಗ್ ಪಂಜಾಬ್‌ನ ಫತೇಗಢ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಆಮ್ ಆದ್ಮಿ ಪಾರ್ಟಿ(ಆಪ್) ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹಿನ್ನೆಲೆಯಲ್ಲಿ, ರಾಜೀನಾಮೆ ನೀಡುವಂತೆ ಶಂಷೇರ್ ಸಿಂಗ್‌ಗೆ ಕಾಂಗ್ರೆಸ್ ಸೂಚಿಸಿದೆ.

 ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಪಿಸಿಸಿ) ಕಾರ್ಯದರ್ಶಿಯಾಗಿದ್ದ ಬಂದೀಪ್ ಸಿಂಗ್ ರವಿವಾರ ಆಪ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಅವರ ತಾಯಿ , ಮಾಜಿ ಶಾಸಕಿ ಹರ್ಬನ್ಸ್ ಕೌರ್ ದುಲ್ಲೊಗೆ ಫತೇಗಢ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಟಿಕೆಟ್ ನೀಡಲಾಗಿತ್ತು. ಈಗ ತಾಯಿಯ ಬದಲು ಮಗ ಸ್ಪರ್ಧಿಸಲಿದ್ದಾರೆ. ಹರ್ಬನ್ಸ್ ಕೌರ್ ಎಪ್ರಿಲ್ 16ರಂದು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಬಂದೀಪ್ ಸಿಂಗ್ ರಾಜೀನಾಮೆಯಿಂದ ಪಕ್ಷಕ್ಕೆ ಅಂಟಿದ ಕಳಂಕ ತೊಲಗಿದೆ. ಕಾಂಗ್ರೆಸ್ ಪರ ಪ್ರಚಾರ ನಡೆಸುವುದಿಲ್ಲ ಎಂದು ಬಹಿರಂಗವಾಗಿ ಘೋಷಿಸಿರುವ ಶಂಷೇರ್ ಸಿಂಗ್ ದುಲ್ಲೊಗೆ ಕಾಂಗ್ರೆಸ್‌ನಲ್ಲಿ ಜಾಗವಿಲ್ಲ. ಪಕ್ಷಕ್ಕೆ ಹಾಗೂ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಪಂಜಾಬ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಲಾಲ್‌ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News