ಮೋದಿ, ಅಮಿತ್ ಶಾ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಚು.ಆಯೋಗಕ್ಕೆ ಸುಪ್ರೀಂ ನೋಟಿಸ್

Update: 2019-04-30 14:28 GMT

ಹೊಸದಿಲ್ಲಿ,ಎ.30: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ದ್ವೇಷ ಭಾಷಣಗಳನ್ನು ಮಾಡುವ ಮತ್ತು ರಾಜಕೀಯ ಪ್ರಚಾರಕ್ಕಾಗಿ ಸಶಸ್ತ್ರ ಪಡೆಗಳನ್ನು ಬಳಸಿಕೊಳ್ಳುವ ಮೂಲಕ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಗೆ ಉತ್ತರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

ಅಸ್ಸಾಮಿನ ಸಿಲ್ಚಾರ್‌ನ ಕಾಂಗ್ರೆಸ್ ಸಂಸದೆ ಹಾಗೂ ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಸುಷ್ಮಿತಾ ದೇವ್ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ.

ದೇವ್ ಅವರ ದೂರಿಗೆ ಸಂಬಂಧಿಸಿದಂತೆ ಆದೇಶಗಳನ್ನು ಹೊರಡಿಸಲು ಚುನಾವಣಾ ಆಯೋಗವು ಮುಕ್ತ ಸ್ವಾತಂತ್ರ್ಯ ಹೊಂದಿದೆ ಎಂದು ಹೇಳಿದ ಮು.ನ್ಯಾ.ರಂಜನ ಗೊಗೊಯಿ ನೇತೃತ್ವದ ಪೀಠವು,ದೇವ್ ಅರ್ಜಿಯ ವಿಚಾರಣೆಯನ್ನು ಗುರುವಾರಕ್ಕೆ ನಿಗದಿಗೊಳಿಸಿತು.

ಉನ್ನತ ಬಿಜೆಪಿ ನಾಯಕರ ವಿರುದ್ಧ ತಾನು ಆಯೋಗಕ್ಕೆ ದೂರುಗಳನ್ನು ಸಲ್ಲಿಸಿದ್ದರೂ ಅದು ಯಾವುದೇ ಕ್ರಮಗಳನ್ನು ಕೈಗೊಳ್ಳದೆ ನಿಷ್ಕ್ರಿಯವಾಗಿದೆ ಎಂದು ದೇವ್ ತನ್ನ ಅರ್ಜಿಯಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News