×
Ad

ರಾಹುಲ್ ಹುಟ್ಟಿದಾಗ ಹೆತ್ತವರಿಗಿಂತ ಮೊದಲು ನಾನೇ ಎತ್ತಿಕೊಂಡಿದ್ದೆ

Update: 2019-04-30 23:26 IST

ವಯನಾಡ್,ಎ.30: ಬದುಕು ಕೆಲವೊಮ್ಮೆ ಮನಸ್ಸಿಗೆ ಮುದ ನೀಡುವ ಅಚ್ಚರಿಗಳನ್ನು ಸೃಷ್ಟಿಸುತ್ತದೆ. ವಯನಾಡ್ ನಿವಾಸಿ ರಾಜಮ್ಮಾ ವಿವತಿಲ್(72) ಇದನ್ನು ಪ್ರಮಾಣ ಮಾಡಿ ಹೇಳುತ್ತಾರೆ.

ದಿಲ್ಲಿಯ ಆಸ್ಪತ್ರೆಯಲ್ಲಿ ಜನಿಸಿದಾಗ ತನ್ನ ತೋಳುಗಳಲ್ಲಿ ಬೆಚ್ಚಗೆ ಹುದುಗಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು 48 ವರ್ಷಗಳ ನಂತರ ಚುನಾವಣಾ ಅಭ್ಯರ್ಥಿಯಾಗಿ ತನ್ನೂರಿಗೆ ಮರಳುತ್ತಾರೆ ಎಂದು ವಯನಾಡ್ ನಿವಾಸಿ,ನಿವೃತ್ತ ಸ್ಟಾಫ್‌ನರ್ಸ್ ರಾಜಮ್ಮ ಕನಸುಮನಸಿನಲ್ಲಿಯೂ ಎಣಿಸಿರಲಿಲ್ಲ.

‘‘ನನ್ನ ನೆನಪು ಸರಿಯಾಗಿದ್ದರೆ ಅಂದು 1970ನೇ ಜೂನ್ 19 ಆಗಿತ್ತು. ದಿಲ್ಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯ ಪ್ರಸೂತಿ ಕೋಣೆಯಲ್ಲಿ ವೈದ್ಯರು ಮತ್ತು ನರ್ಸ್‌ಗಳ ತಂಡದಲ್ಲಿ ನಾನಿದ್ದೆ. ಗಾಂಧಿ ಕುಟುಂಬದ ನೂತನ ಅತಿಥಿಯನ್ನು ಭೇಟಿಯಾಗಲು ನಾವೆಲ್ಲರೂ ಕಾತುರದಿಂದ ಕಾಯುತ್ತಿದ್ದೆವು’’ ಎಂದು ಆಗಿನ್ನೂ 23ರ ಹರೆಯದವರಾಗಿದ್ದ ರಾಜಮ್ಮ ಹೇಳಿದರು.

ಪ್ರಧಾನಿಯ ಮೊಮ್ಮಗುವಿನ ಬಗ್ಗೆ ನಮ್ಮ ಭಾವೋದ್ವೇಗವನ್ನು ನೀವು ಊಹಿಸಬಹುದು,ನಾವೆಲ್ಲರೂ ತುಂಬ ಪುಳಕಗೊಂಡಿದ್ದೆವು. ತುಂಬ ಚೂಟಿ ಮಗುವಾಗಿದ್ದ ರಾಹುಲ್ ಪ್ರಧಾನಿಯ ಮೊಮ್ಮಗುವಾಗಿದ್ದರಿಂದ ನಾವೆಲ್ಲ ಸರದಿಯಲ್ಲಿ ನಮ್ಮ ತೋಳುಗಳಲ್ಲಿ ಎತಿಕೊಂಡಿದ್ದೆವು. ಹೆತ್ತವರಿಗಿಂತ ಮೊದಲೇ ನವಜಾತ ಶಿಶುವನ್ನು ನಾವು ಎತ್ತಿಕೊಂಡು ಮುದ್ದಾಡಿದ್ದೆವು ಎಂದು ಅವರು ನೆನಪಿಸಿಕೊಂಡರು. ಈ ವೇಳೆ ಅವರ ಮುಖದಲ್ಲಿ ಹೆಮ್ಮೆಯಿತ್ತು. ನರ್ಸಿಂಗ್ ಪದವಿ ಮುಗಿಸಿದ ಬೆನ್ನಿಗೇ ರಾಜಮ್ಮಾ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇರಿದ್ದರು.

ಸೋನಿಯಾ ಗಾಂಧಿ ಸೆಲೆಬ್ರೆಟಿ ಪೇಷಂಟ್ ಆಗಿದ್ದರೂ ಭದ್ರತಾ ವ್ಯವಸ್ಥೆಗಳಿಂದಾಗಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಯಾವುದೇ ಸಮಸ್ಯೆಯಾಗಿರಲಿಲ್ಲ ಮತ್ತು ಗಾಂಧಿ ಕುಟುಂಬವೂ ಆಸ್ಪತ್ರೆಯ ನಿಯಮಗಳಿಗೆ ಅಂಟಿಕೊಂಡಿತ್ತು. ಸೋನಿಯಾರಿಗೆ ಹೆಚ್ಚಿನ ಭದ್ರತೆಯೇನೂ ಇರಲಿಲ್ಲ. ನಾನು ಮಧ್ಯಾಹ್ನ ಅವರನ್ನು ಪ್ರಸೂತಿ ಕೋಣೆಯಲ್ಲಿ ಭೇಟಿಯಾಗಿದ್ದೆ. ಅವರು ಸಂಪೂರ್ಣವಾಗಿ ಸಹಕರಿಸಿದ್ದರು ಮತ್ತು ಅದು ಸಹಜ ಹೆರಿಗೆಯಾಗಿತ್ತು ಎಂದು ರಾಜಮ್ಮ ಹೇಳಿದರು.

ಅಹ್ಮದಾಬಾದ್‌ನಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿದ ಬಳಿಕ ಅವರು ಕೇರಳಕ್ಕೆ ಮರಳಿದ್ದರು. ಆಸ್ಪತ್ರೆಯು ಪ್ರಸೂತಿ ಕೋಣೆಯನ್ನು ಪ್ರವೇಶಿಸಲು ಅನುಮತಿ ನೀಡಿದ್ದರೂ ರಾಜೀವ ಗಾಂಧಿ ಮತ್ತು ಸಂಜಯ ಗಾಂಧಿ ಹೊರಗೆಯೇ ಕಾದು ನಿಂತಿದ್ದರು ಎಂದೂ ರಾಜಮ್ಮಾ ನೆನಪಿಸಿಕೊಂಡರು. ಪಾಟ್ನಾ ಪ್ರವಾಸದಲ್ಲಿದ್ದ ಇಂದಿರಾ ಗಾಂಧಿ ಮೂರು ದಿನಗಳ ಬಳಿಕ ಆಸ್ಪತೆಗೆ ಆಗಮಿಸಿ ಮೊಮ್ಮಗನನ್ನು ಭೇಟಿಯಾಗಿದ್ದರು. ನರ್ಸರಿಯಲ್ಲಿರಿಸಿದ್ದ ಮಗುವನ್ನು ನೋಡಲು ಅವರು ಆಸ್ಪತ್ರೆಯ ಯಾವುದೇ ನಿಯಮವನ್ನು ಉಲ್ಲಂಘಿಸಿರಲಿಲ್ಲ ಎಂದರು. ರಾಹುಲ್ ವಯನಾಡಿನಿಂದ ಸ್ಪರ್ಧಿಸಿರುವುದು ರಾಜಮ್ಮಾಗೆ ಖುಷಿ ನೀಡಿದೆಯಾದರೂ ಸುಲ್ತಾನ್ ಬತೇರಿಯಲ್ಲಿ ಚುನಾವಣಾ ಪ್ರಚಾರದ ಸಂದರ್ಭ ತನ್ನ ಮೊಮ್ಮಗ(ಅವರು ರಾಹುಲ್‌ರನ್ನು ಕರೆಯುವುದು ಹೀಗೆಯೇ)ನನ್ನು ಭೇಟಿಯಾಗಲು ಸಾಧ್ಯವಾಗದ ಬಗ್ಗೆ ವಿಷಾದವೂ ಇದೆ.

ಸಾಧ್ಯವಾದಷ್ಟು ಶೀಘ್ರ ನನ್ನ ಮೊಮ್ಮಗನ ಭೇಟಿಯನ್ನು ಎದುರು ನೋಡುತ್ತಿದ್ದೇನೆ. ಅವರೊಂದಿಗೆ ನಾನು ಹಂಚಿಕೊಳ್ಳುವ ವಿಷಯಗಳು ತುಂಬ ಇವೆ ಎಂದ ರಾಜಮ್ಮಾ,ನೀವು ಅವರಿಗೆ ಮತ ಹಾಕುತ್ತೀರಾ ಎಂಬ ಪ್ರಶ್ನೆಗೆ, ನನ್ನ ಮೊಮ್ಮಗನಿಗಲ್ಲದೆ ಇನ್ಯಾರಿಗೆ ನಾನು ಮತ ಹಾಕಲಿ ಎಂದು ಮರುಪ್ರಶ್ನಿಸಿದರು. ರಾಹುಲ್ ವಯನಾಡಿನಿಂದ ಗೆಲ್ಲುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಆಕೆ,ಅವರನ್ನು ಪ್ರಧಾನಿಯಾಗಿ ನೋಡುವ ಬಯಕೆಯನ್ನೂ ಹೊರಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News