×
Ad

ಬಾಲಕೋಟ್ ದಾಳಿ ಆಗಿರದಿದ್ದರೆ ಬಿಜೆಪಿ 160 ಸ್ಥಾನಗಳಿಗೆ ಬಂದು ನಿಲ್ಲುತ್ತಿತ್ತು : ಸುಬ್ರಮಣ್ಯನ್ ಸ್ವಾಮಿ

Update: 2019-05-01 13:13 IST

ಬಾಲಕೋಟ್ ನಲ್ಲಿ ಉಗ್ರರ ನೆಲೆಗಳ ಮೇಲೆ ಭಾರತ ವಾಯುದಾಳಿ ನಡೆಸಿರದೆ ಇದ್ದಿದ್ದರೆ ಬಿಜೆಪಿ ಈ ಬಾರಿ 160 ಸ್ಥಾನಗಳಿಗೆ ಬಂದು ನಿಲ್ಲುತ್ತಿತ್ತು ಎಂದು ಹಿರಿಯ ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ಹೇಳಿದ್ದಾರೆ. huffpost india ಗೆ ನೀಡಿದ ಸಂದರ್ಶನದಲ್ಲಿ ಮೋದಿ ಸರಕಾರದ ಕಾರ್ಯವೈಖರಿ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿರುವ ಸ್ವಾಮಿ ಮತ್ತೆ ಎನ್ ಡಿ ಎ ಸರಕಾರ ಬಂದರೆ ನನ್ನನ್ನು ವಿತ್ತ ಸಚಿವ ಮಾಡಬೇಕು, ಇಲ್ಲದಿದ್ದರೆ ಏನು ಮಾಡಬೇಕು ಎಂದು ನನಗೆ ಗೊತ್ತಿದೆ ಎಂದು ನೇರವಾಗಿ ಹೇಳಿದ್ದಾರೆ. 

ಮೋದಿ ಸರಕಾರದಲ್ಲಿ ಅಧಿಕಾರದ ಅತಿ ಕೇಂದ್ರೀಕರಣ ಇದೆ ಎಂದು ದೂರಿರುವ ಸ್ವಾಮಿ ಮೋದಿ ಅವರು ಅಧಿಕಾರಿಗಳ ಮಾತು ಕೇಳಿ ಹಿರಿಯರನ್ನು ದೂರ ಮಾಡಬಾರದು. ಅವರಿಗೆ ಸುಲಭವಾಗಿ ಸಿಗಬೇಕು. ಈಗ ಪ್ರಮುಖ ನಿರ್ಧಾರಗಳು ಮೋದಿ ಮತ್ತು ಅವರ ಅತ್ಯಾಪ್ತ ಎರಡು ಮೂರು ಜನರೊಳಗೇ ಆಗುತ್ತವೆ. ಇದು ಸರಿಯಲ್ಲ. ಭಾರತದಂತಹ ಬೃಹತ್ ದೇಶದಲ್ಲಿ ಪ್ರಮುಖ ನಿರ್ಧಾರಗಳು ಸಂಪುಟದಲ್ಲಿ ವಿವರವಾಗಿ ಚರ್ಚೆಯಾಗಿ ಆಗಬೇಕು ಎಂದು ಅವರು ಹೇಳಿದ್ದಾರೆ. 

ಈ ಹಿಂದೆ ಹೇಳಿದಂತೆ ಮತ್ತೆ ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ಹರಿಹಾಯ್ದಿರುವ ಸ್ವಾಮಿ ಅವರಿಗೆ ಆರ್ಥಿಕತೆ ಬಗ್ಗೆ ಏನೂ ಗೊತ್ತಿಲ್ಲ. ಹಾಗಾಗಿ ಆ ಕ್ಷೇತ್ರದಲ್ಲಿ ವೈಫಲ್ಯ ಆಗಿದೆ. ಬಾಲಕೋಟ್ ದಾಳಿ, ಜಮ್ಮು ಕಾಶ್ಮೀರದಲ್ಲಿ ಸರಕಾರ ವಜಾ ದಂತಹ ಬೆಳವಣಿಗೆಗಳು ಆಗದೇ ಇರುತ್ತಿದ್ದರೆ ಬಿಜೆಪಿ 160 ಸ್ಥಾನಕ್ಕೆ ಬಂದು ನಿಲ್ಲುತ್ತಿತ್ತು ಎಂದು ಸ್ವಾಮಿ ಹೇಳಿದ್ದಾರೆ. ಈ ಬಾರಿಯೂ 50-60 ಸ್ಥಾನ ಕಳೆದ ಬಾರಿಗಿಂತ ಕಡಿಮೆ ಬಿಜೆಪಿ ಗೆ ಬರಲಿವೆ ಎಂದಿರುವ ಸ್ವಾಮಿ ಬಿಜೆಪಿ 220 - 230 ಸ್ಥಾನ ಪಡೆದರೆ ಎನ್ ಡಿ ಎ ಮೈತ್ರಿಕೂಟದ ಉಳಿದ ಪಕ್ಷಗಳ ಸ್ಥಾನ ಸೇರಿ ಒಟ್ಟು 250 ತಲುಪಬಹುದು. ಮತ್ತೆ ೩೦ ಸ್ಥಾನ ಎಲ್ಲಿಂದಾದರೂ ಹೊಂದಿಸುವುದು ಕಷ್ಟವಾಗದು. ಮಾಯಾವತಿ, ಮುಲಾಯಂ ಕೂಡ ಬಿಜೆಪಿ ಬೆಂಬಲಕ್ಕೆ ಬರುತ್ತಾರೆ ಎಂದು ನನಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ. 

ನಿತಿನ್ ಗಡ್ಕರಿ ಮೋದಿಯಷ್ಟೇ ಸಾಮರ್ಥ್ಯ ಇರುವವರು. ಅರ್ಹತೆ ಇರುವವರು. ನನಗೆ ಆಪ್ತರು. ಅವರು ಮೋದಿಗೆ ಪರ್ಯಾಯ ಆದರೆ ಬಹಳ ಒಳ್ಳೆಯದು ಎಂದು ಮೋದಿಗೆ ಗಡ್ಕರಿ ಪರ್ಯಾಯವಾಗಬಲ್ಲರೇ ಎಂಬ  ಬಗ್ಗೆ ಕೇಳಿದ್ದಕ್ಕೆ ಸ್ವಾಮಿ ಹೇಳಿದ್ದಾರೆ. ಮೋದಿಗೆ ಮತ್ತೆ ಪ್ರಧಾನಿ ಪಟ್ಟ ಸಿಗುವುದೇ ಎಂದು ಕೇಳಿದ್ದಕ್ಕೆ ನೇರವಾಗಿ ಉತ್ತರಿಸದ ಸ್ವಾಮಿ ಅದನ್ನು ನಾನು ಹೇಗೆ ಹೇಳುವುದು ಎಂದು ಮರುಪ್ರಶ್ನಿಸಿದ್ದಾರೆ. ನೆಹರೂಗೆ 17 ವರ್ಷದ ಅಧಿಕಾರ ಸಿಕ್ಕಿತು. ಅವರಿಗೆ ಒಂದು ವರ್ಷವೂ ಅಧಿಕಾರದಲ್ಲಿರುವ ಅರ್ಹತೆ ಇರಲಿಲ್ಲ.  ಇಂದಿರಾಗೆ 16 ವರ್ಷ ಸಿಕ್ಕಿತು. ನರಸಿಂಹರಾವ್ ಗೆ ಐದು ವರ್ಷ ಮಾತ್ರ ಸಿಕ್ಕಿತು. ಹಾಗಾಗಿ ಈ ಬಗ್ಗೆ ಸರಿಯಾಗಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News