ಸೆಲೆಬ್ರಿಟಿಗಳ ವಿವಾಹಗಳಲ್ಲಿ ಭಾಗವಹಿಸುವ ಬದಲು ಪ್ರಧಾನಿ ರೈತರನ್ನು ಭೇಟಿಯಾಗಬೇಕು: ತೇಜಸ್ವಿ ಯಾದವ್ ಸಲಹೆ

Update: 2019-05-01 10:11 GMT

ಪಾಟ್ನಾ,ಮೇ1: “ಪ್ರಿಯಾಂಕ ಚೋಪ್ರಾರಂತಹ ಸೆಲೆಬ್ರಿಟಿಗಳ ವಿವಾಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಬದಲು ಪ್ರಧಾನಿ ನರೇಂದ್ರ ಮೋದಿ ರೈತರನ್ನು ಭೇಟಿಯಾಗಬೇಕು,'' ಎಂದು ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಸಲಹೆ ನೀಡಿದ್ದಾರೆ.

ಪ್ರಧಾನಿ ಹುದ್ದೆಯ ಘನತೆಯನ್ನು ಕಾಪಾಡಲು ಮೋದಿ ವಿಫಲರಾಗಿರುವುದರಿಂದ ಆವರು ಪ್ರಧಾನಿ ಹುದ್ದೆಗೆ ಅರ್ಹರಲ್ಲ ಎಂದೂ ಯಾದವ್ ಹೇಳಿದ್ದಾರೆ. “ಪ್ರಧಾನಿಯಿಂದ ನಮಗೆ ಬಹಳಷ್ಟು ನಿರೀಕ್ಷೆಗಳಿವೆ ಹಾಗೂ ಅವರು ಏನಾದರೂ ಉಪಯುಕ್ತವಾದುದನ್ನು ಮಾತನಾಡಬೇಕು ಎಂದು ನಾನು ಪ್ರಧಾನಿಗೆ ಹೇಳ ಬಯಸುತ್ತೇನೆ. ಬಿಹಾರಕ್ಕೆ ವಿಶೇಷ ಪ್ಯಾಕೇಜ್, ನಿರುದ್ಯೋಗ, ರೈತರ ಸಮಸ್ಯೆ ಮತ್ತು ಬಡತನದಂತಹ ನಿಜವಾದ ವಿಚಾರಗಳ ಬಗ್ಗೆ ಮಾತನಾಡಬೇಕು. ಆದರೆ ಅವರು ನಮ್ಮ ಕುಟುಂಬವನ್ನು ನಿಂದಿಸುವುದರಲ್ಲೇ ವ್ಯಸ್ತರಾಗಿರುವುದರಿಂದ ನನಗೆ ನಿರಾಸೆಯಾಗಿದೆ,'' ಎಂದು ತೇಜಸ್ವಿ ಯದವ್ ತಿಳಿಸಿದ್ದಾರೆ.

“ಜನರು ಅವರ ಮನೆಗಳಲ್ಲೇ ಇರುವಂತಾಗಿದೆ, ಡಬಲ್ ಇಂಜಿನ್ ಸರಕಾರದ ಆಡಳಿತದಲ್ಲಿ ಯಾರೂ ಹೊರ ಹೋಗುವುದಿಲ್ಲ. ಪ್ರಧಾನಿಗೆ ಮುಝಫ್ಫರನಗರ ಆಶ್ರಯತಾಣ ಪ್ರಕರಣ ಮರೆತು ಹೋಗಿದೆಯೇ? ಹೆಚ್ಚಿನ ಅತ್ಯಾಚಾರ ಪ್ರಕರಣಗಳು ಅವರ ಸರಕಾರದ ಆಡಳಿತದ ಅವಧಿಯಲ್ಲಿಯೇ ದೇಶದಲ್ಲಿ ನಡೆದಿದೆ. ಸತ್ಯವನ್ನು ಅವರಿಗೆ ತಿಳಿಸುವ ಅಗತ್ಯವಿದೆ,'' ಎಂದರು.

ತಮಗೆ ತಮ್ಮ ತಂದೆ ಲಾಲು ಪ್ರಸಾದ್ ಯಾದವ್ ಅವರನ್ನು ಜೈಲಿನಲ್ಲಿ ಭೇಟಿಯಾಗಲು ಅನುಮತಿ ನೀಡಲಾಗುತ್ತಿಲ್ಲ ಎಂದು ಕಳೆದ ತಿಂಗಳು ಆರೋಪಿಸಿದ್ದ ತೇಜಸ್ವಿ ಯಾದವ್ ಇದರ ಹಿಂದೆ ಷಡ್ಯಂತ್ರದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು.

``ಇದು ನರೇಂದ್ರ ಮೋದಿಯ ಅಣತಿಯಂತೆ ನಡೆಯುತ್ತಿದೆ. ಈ ರೀತಿ ಆಗಿರುವುದು ಎಲ್ಲಿಯಾದರೂ ನೋಡಿದ್ದೀರಾ?,'' ಎಂದು ತೇಜಸ್ವಿ ಆಗ ಪ್ರಶ್ನಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News