ಮತದಾನ ಮಾಡದ ಬಗ್ಗೆ ಕೇಳಿದ್ದಕ್ಕೆ ಕಿಲಾಡಿ ಅಕ್ಷಯ್ ಕುಮಾರ್ ಹೇಳಿದ್ದೇನು ?

Update: 2019-05-01 09:50 GMT

ಮುಂಬೈ : ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಜತೆ ರಾಜಕೀಯೇತರ ಸಂವಾದ ನಡೆಸಿ ಸುದ್ದಿಯಾಗಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್, ಸೋಮವಾರ ಮುಂಬೈಯಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿಲ್ಲ ಎಂದು ತಿಳಿದು ಸಾಮಾಜಿಕ ಜಾಲತಾಣಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಜುಹುವಿನ ಮತಗಟ್ಟೆಯೊಂದರಲ್ಲಿ ಮತ ಚಲಾಯಿಸಲು ಅವರ ಪತ್ನಿ, ನಟಿ ಟ್ವಿಂಕಲ್ ಖನ್ನಾ ಮಾತ್ರ ಬಂದಿದ್ದರು.

ಮಂಗಳವಾರ ಈ ಕುರಿತಂತೆ ಪತ್ರಕರ್ತರು ‘ಬ್ಲ್ಯಾಂಕ್' ಚಲನಚಿತ್ರದ ವಿಶೇಷ ಪ್ರದರ್ಶನದ ವೇಳೆ  ಅಕ್ಷಯ್ ಅವರನ್ನು ಪ್ರಶ್ನಿಸಿದಾಗ  ಹಾಗೂ ಮತ ಚಲಾಯಿಸದೇ ಇರುವುದಕ್ಕೆ ಕೇಳಿ ಬಂದ ಟೀಕೆಗೆ ಪ್ರತಿಕ್ರಿಯೆ ಬಯಸಿದಾಗ ನಟ ಸುಮ್ಮನೆ ನಕ್ಕು “ಚಲಿಯೆ ಬೇಟಾ” ಎಂದು ಹೇಳಿ ಅಲ್ಲಿಂದ ಹೊರ ನಡೆದಿದ್ದರು.

ಅಕ್ಷಯ್ ಕುಮಾರ್ ಅವರ ಪೌರತ್ವದ ಬಗ್ಗೆ ಬಹಳ ಸಮಯದಿಂದ ಊಹಾಪೋಹಗಳಿದ್ದು ಅವರು ಕೆನಡಾ ಪೌರತ್ವ ಹೊಂದಿದ್ದಾರೆಂದು ಹಲವರು ಹೇಳುತ್ತಿದ್ದಾರೆ. ಕಳೆದ ತಿಂಗಳಷ್ಟೇ ಪ್ರಧಾನಿ ನರೇಂದ್ರ ಮೋದಿ ಅಕ್ಷಯ್ ಅವರನ್ನು ಟ್ವೀಟ್ ನಲ್ಲಿ ಟ್ಯಾಗ್ ಮಾಡಿ  ಜನರಿಗೆ ಮತದಾನ ಮಾಡಲು ಪ್ರೇರೇಪಿಸುವಂತೆ ಕೇಳಿಕೊಂಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಅಕ್ಷಯ್ “ಮತದಾನ ಪ್ರಕ್ರಿಯೆಯಲ್ಲಿ ಜನರ ಭಾಗವಹಿಸುವಿಕೆಯೇ ಪ್ರಜಾಪ್ರಭುತ್ವದ ನಿಜವಾದ ಗುರುತು. ಮತದಾನ ನಮ್ಮ ದೇಶ ಮತ್ತದರ ಮತದಾರರ ನಡುವಿನ ಸೂಪರ್ ಹಿಟ್ ಪ್ರೇಮ್ ಕಥಾ ಆಗಬೇಕು,'' ಎಂದು ಟ್ವೀಟ್ ಮಾಡಿದ್ದರು.

ಆದರೆ ಸೋಮವಾರ ಅವರು ಮತದಾನ ಮಾಡಿಲ್ಲ ಎಂದು ತಿಳಿದ ಒಬ್ಬರು ಟ್ವಿಟ್ಟರಿಗರು “ಯಾರಾದರೂ ದೇಶಭಕ್ತ ಅಕ್ಷಯ್ ಕುಮಾರ್ ಮತದಾನ ಮಾಡಿದ್ದನ್ನು ನೋಡಿದ್ದಾರಾ?,'' ಎಂದು ಪ್ರಶ್ನಿಸಿದ್ದರೆ, “ನೈಜ ರಾಷ್ಟ್ರೀಯವಾದಿ ಅಕ್ಷಯ್ ಕುಮಾರ್ ಯಾವಾಗ ಮತ ಚಲಾಯಿಸುತ್ತಾರೆ?,” ಎಂದು ಇನ್ನೊಬ್ಬರು ಕೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News