ಆಪ್ ನ 7 ಶಾಸಕರಿಗೆ ಬಿಜೆಪಿ ಸೇರಲು ತಲಾ 10 ಕೋಟಿ ರೂ. ಆಮಿಷ: ದಿಲ್ಲಿ ಡಿಸಿಎಂ ಸಿಸೋಡಿಯಾ ಆರೋಪ
ಹೊಸದಿಲ್ಲಿ, ಮೇ.1: ಆಪ್ ನ 7 ಮಂದಿ ಶಾಸಕರಿಗೆ ಬಿಜೆಪಿ ಸೇರಿದರೆ ತಲಾ 10 ಕೋಟಿ ರೂ. ನೀಡುವುದಾಗಿ ಬಿಜೆಪಿ ನಾಯಕರು ಆಮಿಷವೊಡ್ಡಿರುವುದಾಗಿ ದಿಲ್ಲಿಯ ಉಪಮುಖ್ಯ ಮಂತ್ರಿ ಮನೀಷ್ ಸಿಸೋಡಿಯಾ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿಗೆ ಅಭಿವೃದ್ಧಿ ಬೇಕಾಗಿಲ್ಲ. ಕುದುರೆ ವ್ಯಾಪಾರದಲ್ಲಿ ತೊಡಗಿದೆ. ಅಧಿಕಾರ ಕಸಿದುಕೊಳ್ಳುವುದು ಅವರ ಕನಸಾಗಿದೆ, ಬಿಜೆಪಿಗೆ ಚುನಾವಣೆಯಲ್ಲಿ ಮತದಾರರು ಸರಿಯಾದ ಪಾಠ ಕಲಿಸಲಿದ್ದಾರೆ ಎಂದರು.
ಪಶ್ಚಿಮ ಬಂಗಾಳದ 40 ಟಿಎಂಸಿ ಶಾಸಕರು ತನ್ನ ಸಂಪರ್ಕದಲ್ಲಿದ್ದಾರೆ ಅವರು ಮುಂದೆ ಬಿಜೆಪಿ ಸೇರಲಿದ್ದಾರೆಂದು ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿರುವ ಅವರು ದಿಲ್ಲಿಯಲ್ಲಿ ಆಪ್ ಶಾಸಕರನ್ನು ಖರೀಸುವ ಯತ್ನದಲ್ಲಿ ಬಿಜೆಪಿ ಕೈ ಸುಟ್ಟುಕೊಂಡಿದೆ. ಇದೀಗ ಪಶ್ಚಿಮ ಬಂಗಾಳದ ಬಗ್ಗೆ ಪ್ರಧಾನಿ ಮೋದಿ ಮಾತನಾಡುತ್ತಿದ್ದಾರೆ. ಅಲ್ಲಿನ ಸರಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆಂದು ಅಪಾದಿಸಿದರು.
ಪ್ರಧಾನ ಮಂತ್ರಿಯಾದವರು ಇಂತಹ ಹೇಳಿಕೆ ನೀಡಬಾರದು.ಅವರಿಗೆ ಇಂತಹ ಮಾತುಗಳು ಭೂಷಣವಲ್ಲ. ಇದು ಪ್ರಜಾಪ್ರಭುತ್ವ ದೇಶ ಎನ್ನುವ ವಿಚಾರವನ್ನು ಅವರು ಅರಿತುಕೊಳ್ಳಬೇಕಾಗಿದೆ ಎಂದು ಹೇಳಿದರು.