ಬಾಲ್ಯದಲ್ಲಿಯ ಬಾಯಿ ಸೋಂಕು ವಯಸ್ಕರಾದಾಗ ಹೃದ್ರೋಗಗಳ ಅಪಾಯವನ್ನು ಹೆಚ್ಚಿಸಬಹುದು

Update: 2019-05-02 09:50 GMT

ಮಕ್ಕಳು ಸಿಹಿತಿಂಡಿಗಳು ಮತ್ತು ಕ್ಯಾಂಡಿಗಳನ್ನು ಹೆಚ್ಚಾಗಿ ತಿನ್ನುತ್ತಿರುವುದರಿಂದ ಅವರು ಬಾಯಿ ಸೋಂಕಿಗೆ ಸುಲಭವಾಗಿ ಗುರಿಯಾಗುತ್ತಾರೆ. ಬಾಯಿಯ ಆರೋಗ್ಯದ ಮಹತ್ವ ಅವರಿಗೆ ತಿಳಿದಿರುವುದಿಲ್ಲವಾದ್ದರಿಂದ ಅದನ್ನವರು ಕಡೆಗಣಿಸುವುದೂ ಹೆಚ್ಚು. ಇತ್ತೀಚಿನ ಅಧ್ಯಯನವೊಂದು ಬೆಳಕಿಗೆ ತಂದಿರುವಂತೆ ಬಾಯಿಯ ಅನಾರೋಗ್ಯ ಮಕ್ಕಳ ಹಲ್ಲುಗಳನ್ನು ಕೆಡಿಸುವುದು ಮಾತ್ರವಲ್ಲ,ಅವರು ದೊಡ್ಡವರಾದಾಗ ಅಪಧಮನಿ ಕಾಠಿಣ್ಯದಂತಹ ಹೃದಯನಾಳಗಳ ರೋಗಕ್ಕೆ ಗುರಿಯಾಗುವ ಅಪಾಯವನ್ನೂ ಹೆಚ್ಚಿಸುತ್ತದೆ. ಹೀಗಾಗಿ ಪೋಷಕರು ಮಕ್ಕಳ ಬಾಯಿಯ ಆರೋಗ್ಯದತ್ತ ಹೆಚ್ಚಿನ ಗಮನ ಹರಿಸುವುದು ಮುಖ್ಯವಾಗಿದೆ.

ಅಥೆರೊಸ್ಲೆರೋಸಿಸ್ ಅಥವಾ ಅಪಧಮನಿ ಕಾಠಿಣ್ಯ ರೋಗವು ಹೆಸರೇ ಸೂಚಿಸುವಂತೆ ಅಪಧಮನಿಗಳನ್ನು ಕಾಡುತ್ತದೆ. ಈ ಸ್ಥಿತಿಯಲ್ಲಿ ಅಪಧಮನಿಗಳಲ್ಲಿ ಪಾಚಿಯು ಸಂಗ್ರಹಗೊಂಡು ಅವು ಸಂಕುಚಿತಗೊಳ್ಳುತ್ತವೆ ಮತ್ತು ಅವುಗಳ ಮೂಲಕ ಸುಗಮ ರಕ್ತಸಂಚಾರಕ್ಕೆ ತಡೆಯುಂಟಾಗುತ್ತದೆ.

ಜರ್ನಲ್ ಆಫ್ ಜೆಎಎಂಎ ನೆಟ್‌ವರ್ಕ್ ಓಪನ್‌ನಲ್ಲಿ ಪ್ರಕಟಗೊಂಡಿರುವ ಇತ್ತೀಚಿನ ಅಧ್ಯಯನ ವರದಿಯು ಮಕ್ಕಳಲ್ಲಿ ಬಾಯಿ ಸೋಂಕು ಮತ್ತು ಅವರ ದೊಡ್ಡವರಾದಾಗ ಹೃದಯನಾಳೀಯ ರೋಗಗಳಿಗೆ ಗುರಿಯಾಗುವ ಸಾಧ್ಯತೆಯನ್ನು ಮೊದಲ ಬಾರಿಗೆ ಬೆಳಕಿಗೆ ತಂದಿರುವುದರಿಂದ ಮಹತ್ವ ಪಡೆದುಕೊಂಡಿದೆ. ವಯಸ್ಕರಲ್ಲಿ ತೀವ್ರ ಬಾಯಿ ಸೋಂಕುಗಳು ಮತ್ತು ಉರಿಯೂತಗಳಿಗೂ ಹೃದಯ ವಾಹಿನಿ ರೋಗಗಳಿಗೂ ಇರುವ ನಂಟನ್ನೂ ವರದಿಯು ಪ್ರಮುಖವಾಗಿ ಬಿಂಬಿಸಿದೆ.

ಸಂಶೋಧಕರು ಎಲ್ಲ ದಂತ ಸಮಸ್ಯೆಗಳ ಪೈಕಿ ನಿರ್ದಿಷ್ಟವಾಗಿ ಪೆರಿಯೊಡಾಂಟಿಟಿಸ್ ಅಥವಾ ಪರಿದಂತ(ಹಲ್ಲುಗಳ ಸುತ್ತಲಿನ ಅಂಗಾಂಶಗಳಲ್ಲಿ ಊತ) ಕುರಿತು ಆಳವಾದ ಅಧ್ಯಯನ ನಡೆಸಿ,ಅಪಧಮನಿ ಕಾಠಿಣ್ಯದ ಹೃದಯನಾಳೀಯ ರೋಗಗಳಿಗೆ ಸ್ವತಂತ್ರ ಕಾರಣವಾಗಿದೆ ಎಂದು ಘೋಷಿಸಿದ್ದಾರೆ. ಹೀಗಾಗಿ ಪೆರಿಯೊಡಾಂಟಿಟಿಸ್‌ಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಹೃದಯನಾಳೀಯ ಕಾಯಿಲೆಗಳ ಅಪಾಯವನ್ನು ತಗ್ಗಿಸಬಹುದು ಎನ್ನುವುದು ಅವರ ಅಭಿಪ್ರಾಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News