ಕಾರಿನಲ್ಲಿ ಬಂದು ಟೋಲ್ ಬೂತ್ ನಿಂದ ರೂ. 5000 ಕಸಿದು ಪರಾರಿಯಾದ ಕೋತಿ !

Update: 2019-05-02 11:12 GMT

ಲಕ್ನೋ: ಹೆದ್ದಾರಿ ಟೋಲ್ ಬೂತುಗಳಲ್ಲಿ ಹಲವಾರು ದರೋಡೆ ಪ್ರಕರಣಗಳು ಈ ಹಿಂದೆ ನಡೆದಿರುಬಹುದು. ಆದರೆ ಕಾನ್ಪುರದ ದೇಹತ್ ಪ್ರದೇಶದಲ್ಲಿರುವ ಬರಾ ಟೋಲ್ ಪ್ಲಾಝಾದಲ್ಲಿ ನಡೆದ ದರೋಡೆ ಪ್ರಕರಣ  ಮಾತ್ರ  ವಿಚಿತ್ರ. ಈ ಟೋಲ್ ಪ್ಲಾಝಾಗೆ ಕಾರಿನಲ್ಲಿ ಬಂದು ರೂ. 5,000 ನಗದು ಕಸಿದು ಪರಾರಿಯಾದ ದರೋಡೆಕೋರನಿಗೆ ಪೊಲೀಸರು ಹುಡುಕುತ್ತಿದ್ದಾರೆ. ಅಷ್ಟಕ್ಕೂ ಈ ದರೋಡೆಕೋರ ಯಾರಂತೀರಾ ? ಒಂದು ಕೋತಿ. ಈ  ಕಳ್ಳತನ ಪ್ರಕರಣ ಎಪ್ರಿಲ್ 25ರಂದು ನಡೆದಿದ್ದು ಟೋಲ್ ಪ್ಲಾಝಾದಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಟೋಲ್ ಪ್ಲಾಝಾದ ಸಹಾಯಕ ಜನರಲ್ ಮ್ಯಾನೇಜರ್ ಮನೋಜ್ ಶರ್ಮ ಅವರ ಪ್ರಕಾರ ಒಂದು ಬಿಳಿ ಬಣ್ಣದ ಕಾರು ಟೋಲ್ ಬೂತ್ ಸಮೀಪ  ಬಂದು ನಿಂತ ಕೂಡಲೇ ಅದರ ಕಿಟಿಕಿಯಿಂದ ಛಂಗನೆ ಹೊರ ಹಾರಿದ ಕೋತಿಯೊಂದು ನೇರ ಟೋಲ್ ಬೂತ್ ಗೆ ಹೊಕ್ಕಿತ್ತು. ಕ್ಯಾಶ್ ಡ್ರಾವರಿನಲ್ಲಿದ್ದ ರೂ. 5,000 ಮೌಲ್ಯದ ಒಂದು ನೋಟಿನ ಕಂತೆಯನ್ನು ಕೈಯ್ಯಲ್ಲಿ ಹಿಡಿದಿದ್ದೇ ತಡ ಕೋತಿ ಅಲ್ಲಿಂದ ತಪ್ಪಿಸಿಕೊಂಡಿತ್ತು.

ಇಲ್ಲಿ ಈ ಹಿಂದೆ ಕೂಡ ಎರಡು ಇಂತಹುದೇ ಪ್ರಕರಣಗಳು ನಡೆದಿವೆ ಎಂದು ಶರ್ಮ ಹೇಳಿದ್ದು ಪೊಲೀಸ್ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಕಳ್ಳ ಕೋತಿಯಿಂದ ಇದೀಗ ಟೋಲ್ ಬೂತ್ ಸಿಬ್ಬಂದಿ ಭಯಭೀತರಾಗಿದ್ದು  ಕೆಲಸಕ್ಕೆ ಬರಲು ಹೆದರುತ್ತಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News