ಚುನಾವಣಾ ಖರ್ಚಿನ ಲೆಕ್ಕದಲ್ಲಿ ವ್ಯತ್ಯಾಸ: ದಿಗ್ವಿಜಯ್, ಪ್ರಜ್ಞಾ ಠಾಕೂರ್‌ಗೆ ಚುನಾವಣಾ ಆಯೋಗ ನೋಟಿಸ್

Update: 2019-05-04 15:07 GMT

 ಹೊಸದಿಲ್ಲಿ, ಮೇ 4: ಚುನಾವಣಾ ವೆಚ್ಚದ ವಿವರದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಕಾಂಗ್ರೆಸ್‌ನ ದಿಗ್ವಿಜಯ್ ಸಿಂಗ್ ಹಾಗೂ ಬಿಜೆಪಿಯ ಪ್ರಜ್ಞಾ ಠಾಕೂರ್‌ಗೆ ನೋಟಿಸ್ ಜಾರಿಗೊಳಿಸಿದೆ.

ಮಧ್ಯಪ್ರದೇಶದ ಮಥುರಾ ಸಂಸದೀಯ ಕ್ಷೇತ್ರದಿಂದ ಇವರಿಬ್ಬರೂ ಸ್ಪರ್ಧಿಸುತ್ತಿದ್ದಾರೆ. ಮೇ 3ರವರೆಗೆ ಚುನಾವಣಾ ಪ್ರಚಾರಕ್ಕೆ ತಾನು 21,30,136 ರೂ. ಖರ್ಚು ಮಾಡಿರುವುದಾಗಿ ದಿಗ್ವಿಜಯ್ ಸಿಂಗ್ ಲೆಕ್ಕ ನೀಡಿದ್ದರು. ಆದರೆ ಚುನಾವಣಾ ಆಯೋಗದ ವಿಶೇಷ ಖರ್ಚುವೆಚ್ಚ ಪರಿವೀಕ್ಷಕರು ನಡೆಸಿದ ಪರಿಶೀಲನೆಯಲ್ಲಿ ಸಿಂಗ್ 39,47,674 ರೂ. ವೆಚ್ಚ ಮಾಡಿರುವುದಾಗಿ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದೆಡೆ, ಪ್ರಜ್ಞಾ ಸಿಂಗ್ 6,27,663 ರೂ. ಚುನಾವಣಾ ವೆಚ್ಚವನ್ನು ತೋರಿಸಿದ್ದು ಆಯೋಗದ ಪರಿಶೀಲನೆಯಲ್ಲಿ ಈ ಮೊತ್ತ 13,51,756 ರೂ. ಎಂದು ತಿಳಿದು ಬಂದಿದೆ. ಚುನಾವಣಾ ಆಯೋಗದ ಮಾರ್ಗದರ್ಶಿ ಸೂತ್ರದಂತೆ, ಎಲ್ಲಾ ನೋಂದಾಯಿತ ರಾಜಕೀಯ ಪಕ್ಷಗಳು ಚುನಾವಣಾ ಖರ್ಚಿನ ಲೆಕ್ಕವನ್ನು ಚುನಾವಣಾ ಪ್ರಕ್ರಿಯೆ ಮುಗಿದ 90 ದಿನಗಳೊಳಗೆ ಸಲ್ಲಿಸಬೇಕು.

ಇದೇ ವೇಳೆ, ಚುನಾವಣಾ ಪ್ರಚಾರ ಖರ್ಚಿನ ಲೆಕ್ಕ ಒದಗಿಸುವಂತೆ ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್‌ಎಸ್)ಯ ಅಧ್ಯಕ್ಷ ರಾಜ್ ಠಾಕ್ರೆಗೂ ಆಯೋಗ ಸೂಚಿಸಿದೆ. ಎಂಎನ್‌ಎಸ್ ನೋಂದಾಯಿತ ರಾಜಕೀಯ ಪಕ್ಷವಾದ ಕಾರಣ ಚುನಾವಣಾ ಪ್ರಚಾರಕ್ಕೆ ನಡೆಸಿದ ವೆಚ್ಚದ ವಿವರ ಒದಗಿಸಬೇಕು ಎಂಬ ಅರ್ಜಿಯ ಹಿನ್ನೆಲೆಯಲ್ಲಿ ಎಂಎನ್‌ಎಸ್ ಅಧ್ಯಕ್ಷ ಠಾಕ್ರೆಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News