ಫನಿ ಚಂಡಮಾರುತಕ್ಕೆ 12 ಬಲಿ, 10 ಲಕ್ಷಕ್ಕೂ ಅಧಿಕ ಜನರು ಸಂತ್ರಸ್ತರು

Update: 2019-05-04 15:16 GMT

ಪುರಿ/ಭುವನೇಶ್ವರ, ಮೇ 4: ಫನಿ ಚಂಡಮಾರುತ ಒಡಿಶಾದ 12 ಜಿಲ್ಲೆಗಳಲ್ಲಿ ಸೃಷ್ಟಿಸಿದ ಅವಾಂತರದಿಂದ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ. ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಚಂಡಮಾರುತ ಪೀಡಿತ ಪ್ರದೇಶಗಳಿಗೆ ಸೋಮವಾರ ಬೆಳಗ್ಗೆ ಭೇಟಿ ನೀಡಲಿದ್ದೇನೆ ಎಂದು ಹೇಳಿದ್ದಾರೆ.

ಕೇವಲ ಮೂವರು ಮಾತ್ರ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ವಿಶೇಷ ಪರಿಹಾರ ಆಯುಕ್ತ ಬಿಷ್ಣುಪಾದ ಸೇಥಿ ತಿಳಿಸಿದ್ದಾರೆ. ಆದರೆ, ಮರಗಳು, ಗೋಡೆ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿ ಸುಮಾರು 12ಕ್ಕೂ ಅಧಿಕ ಸಾವು ಸಂಭವಿಸಿದೆ ಎಂದು ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. 11 ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಗೊಳಿಸಿರುವುದರಿಂದ ಹೆಚ್ಚು ಸಾವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫನಿ ಚಂಡಮಾರುತ ಒಡಿಶಾ ಕರಾವಳಿಯ ಪುರಿ ಪಟ್ಟಣಕ್ಕೆ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಅಪ್ಪಳಿಸಿತ್ತು. ಅನಂತರ ಭುವನೇಶ್ವರ, ಬಾಲಸೂರೆ, ಜೈಪುರ, ಖುದ್ರಾ ಹಾಗೂ ಖುದ್ರಾ ಹಾಗೂ ನಯಾಗಢ ಜಿಲ್ಲೆಗಳ ಮೂಲಕ ಹಾದು ಹೋಯಿತು. ಇದರಿಂದ ನೂರಾರು ಕಿ.ಮೀ. ವಿದ್ಯುತ್ ತಂತಿಗಳು ಧ್ವಂಸವಾದವು. ಅಸಂಖ್ಯಾತ ಮೊಬೈಲ್ ಟವರ್‌ಗಳು ಬುಡಮೇಲಾದವು. ಸಂವಹನ ಸ್ಥಗಿತಗೊಂಡಿತ್ತು. ಶನಿವಾರ ಬೆಳಗ್ಗೆ ಫನಿ ಚಂಡಮಾರುತ ದುರ್ಬಲಗೊಂಡಿತು ಹಾಗೂ ಅದು ಬೆಳಗ್ಗೆ 5.30ಕ್ಕೆ ಕೊಲ್ಕತ್ತಾದ 60 ಕಿ.ಮೀ. ವಾಯುವ್ಯದಲ್ಲಿ ಕೇಂದ್ರವನ್ನು ಹೊಂದಿತ್ತು ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಎಚ್.ಆರ್. ಬಿಸ್ವಾಸ್ ತಿಳಿಸಿದ್ದಾರೆ.

ಪುರಿ ಹಾಗೂ ಭುವನೇಶ್ವರದಲ್ಲಿ ಟೆಲಿಕಾಂ ಸಂಪರ್ಕ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇದನ್ನು ಮರು ಸ್ಥಾಪಿಸಲು ಸ್ಪಲ್ಪ ಕಾಲಾವಕಾಶ ಬೇಕಾಗಬಹುದು. ಹೆಚ್ಚು ಹಾನಿಗೊಳಗಾದ ಪ್ರದೇಶಗಳನ್ನು ಗುರುತಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುರೇಶ್ ಮೋಹಪಾತ್ರ ತಿಳಿಸಿದ್ದಾರೆ. ಭುವನೇಶ್ವರದಲ್ಲಿ 10 ಸಾವಿರ ವಿದ್ಯುತ್ ಕಂಬಗಳು ಧರೆಗುರುಳಿವೆ. ಇದರಿಂದ 30 ಲಕ್ಷ ಗ್ರಾಹಕರು ತೊಂದರೆಗೊಳಗಾಗಿದ್ದಾರೆ. ಶೇ. 30ರಷ್ಟು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸರಿಪಡಿಸಲಾಗಿದೆ. ವಿದ್ಯುತ್ ಕಂಬಗಳು ಹಾಗೂ ಮರಗಳು ಉರುಳಿದ ಪರಿಣಾಮ ಹಲವು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ ಎಂದು ಒಡಿಶಾ ಇಂಧನ ಕಾರ್ಯದರ್ಶಿ ಹೇಮಂತ್ ಶರ್ಮಾ ಹೇಳಿದ್ದಾರೆ.

ಮೇ 2ರ ಮಧ್ಯರಾತ್ರಿಯಿಂದ ಭುವನೇಶ್ವರಕ್ಕೆ ಆಗಮಿಸುವ ಹಾಗೂ ನಿರ್ಗಮಿಸುವ ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು. ವಿಮಾನಗಳ ಸಂಚಾರವನ್ನು ಶನಿವಾರ ಬೆಳಗ್ಗೆ ಮರು ಆರಂಭಿಸಲಾಗಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News