ಮುಸ್ಲಿಮರು ಬರಡು ಆಕಳುಗಳಿದ್ದಂತೆ ಎಂದ ಬಿಜೆಪಿ ಶಾಸಕ
ದಿಬ್ರುಗಡ,ಮೇ 4: ಮುಸ್ಲಿಂ ಸಮುದಾಯವನ್ನು ಹಾಲು ನೀಡದ ಆಕಳುಗಳಿಗೆ ಹೋಲಿಸುವ ಮೂಲಕ ದಿಬ್ರುಗಡದ ಬಿಜೆಪಿ ಶಾಸಕ ಪ್ರಶಾಂತ ಫುಕಾನ್ ಅವರು ವಿವಾದವೊಂದನ್ನು ಸೃಷ್ಟಿಸಿದ್ದಾರೆ.
ಸ್ಥಳೀಯ ಟಿವಿ ವಾಹಿನಿಯೊಂದಿಗೆ ಮಾತನಾಡಿದ ಸಂದರ್ಭ ಫುಕಾನ್, “ಮುಸ್ಲಿಮರು ಬಿಜೆಪಿಗೆ ಮತ ಹಾಕುವುದಿಲ್ಲ,ಹೀಗಾಗಿ ರಾಜ್ಯ ಸರಕಾರವು ಅವರಿಗೆ ಸೌಲಭ್ಯಗಳನ್ನು ಒದಗಿಸಬಾರದು. ಶೇ.90ರಷ್ಟು ಹಿಂದುಗಳು ಬಿಜೆಪಿಗೆ ಮತ ನೀಡಿದ್ದಾರೆ ಮತ್ತು ಶೇ.90ರಷ್ಟು ಮುಸ್ಲಿಮರು ನಮಗೆ ಮತ ನೀಡಿಲ್ಲ. ಆಕಳು ಹಾಲು ನೀಡದಿದ್ದರೆ ಅದಕ್ಕೆ ಮೇವು ಹಾಕುವುದರಲ್ಲಿ ಅರ್ಥವಿಲ್ಲ” ಎಂದು ಹೇಳಿದ್ದರು.
ತನ್ನ ಹೇಳಿಕೆಯು ವಿವಾದವನ್ನು ಸೃಷ್ಟಿಸುತ್ತಿದ್ದಂತೆ ಶುಕ್ರವಾರ ಸಮಜಾಯಿಷಿ ನೀಡಿರುವ ಫುಕಾನ್,ಮುಸ್ಲಿಮ್ ಸಮುದಾಯದ ಮತಗಳನ್ನು ಕೋರುವುದರಿಂದ ಯಾವುದೇ ಉಪಯೋಗವಿಲ್ಲ ಎಂದಷ್ಟೇ ತನ್ನ ಮಾತಿನ ಅರ್ಥವಾಗಿತ್ತು. ಆಕಳು ಹಾಲು ನೀಡದಿದ್ದರೆ ಅದಕ್ಕೆ ಮೇವು ಹಾಕುವುದರಲ್ಲಿ ಅರ್ಥವಿಲ್ಲ ಎಂಬ ಅಸ್ಸಾಮಿ ಗಾದೆಯನ್ನು ತಾನು ಬಳಸಿದ್ದೆ. ಮುಸ್ಲಿಂ ಸಮುದಾಯವನ್ನು ‘ಆಕಳು ’ಎಂದು ಕರೆಯುವುದು ಎಂದೂ ತನ್ನ ಉದ್ದೇಶವಾಗಿರಲಿಲ್ಲ ಎಂದಿದ್ದಾರೆ.