ಸೈಬರ್ ಕ್ರಿಮಿನಲ್‌ಗಳು ಬಚ್ಚಿಟ್ಟುಕೊಳ್ಳುವ ನಿಗೂಢ ಲೋಕ ‘ಡಾರ್ಕ್ ವೆಬ್’

Update: 2019-05-04 16:09 GMT

ನಮ್ಮ ನಿಮ್ಮಂತಹ ಸಾಮಾನ್ಯರು ಬಳಸುವ ಅಂತರ್ಜಾಲಕ್ಕಿಂತ ಭಿನ್ನವಾದ ನಿಗೂಢ ಲೋಕವೊಂದಿದೆ ಎನ್ನುವುದು ನಿಮಗೆ ಗೊತ್ತೇ?, ಇದುವೇ ‘ಡಾರ್ಕ್ ವೆಬ್’. ಇದು ಅಂತರ್ಜಾಲದ ಎನ್‌ಕ್ರಿಪ್ಟ್ ಮಾಡಲಾದ ಅಥವಾ ಗೂಢಲಿಪಿಯಲ್ಲಿರುವ ಭಾಗವಾಗಿದ್ದು,ಇದರ ಜಾಡು ಹಿಡಿಯಲು ಸಾಧ್ಯವಿಲ್ಲ. ಸೈಬರ್ ಅಪರಾಧಗಳನ್ನು ನಡೆಸುವಾಗ ಅನಾಮಿಕರಾಗುಳಿಯಲು ತಮಗೆ ನೆರವಾಗುವ ಸಾಫ್ಟ್‌ವೇರ್‌ಗಳ ಖರೀದಿಗಾಗಿ ಹೆಚ್ಚೆಚ್ಚು ಸೈಬರ್ ಕ್ರಿಮಿನಲ್‌ಗಳು ಈ ಡಾರ್ಕ್ ವೆಬ್‌ನ್ನು ಬಳಸುತ್ತಿದ್ದಾರೆ. ಡಾರ್ಕ್ ವೆಬ್ ವರ್ಲ್ಡ್ ವೈಡ್ ವೆಬ್(WWW)ನ ಸೂಚಿಯೇತರ ಭಾಗವಾಗಿರುವ ಡೀಪ್ ವೆಬ್‌ನ ಅಂಗವಾಗಿದ್ದು,ಗೂಗಲ್‌ನಂತಹ ಸ್ಟಾಂಡರ್ಡ್ ಸರ್ಚ್ ಇಂಜಿನ್‌ಗಳ ಮೂಲ ಇದನ್ನು ಪ್ರವೇಶಿಸಲು ಸಾಧ್ಯವಿಲ್ಲ. ಡಾರ್ಕ್ ವೆಬ್‌ನ್ನು ಪ್ರವೇಶಿಸಲು ಟಾರ್ ಬ್ರೌಸರ್‌ನಂತಹ ಎನ್‌ಕ್ರಿಪ್ಟೆಡ್ ನೆಟ್‌ವರ್ಕ್ ಗಳು ಅಗತ್ಯವಾಗುತ್ತವೆ.

ಈ ನಿಗೂಢ ಲೋಕದ ಅತ್ಯಂತ ಮುಖ್ಯವಾದ ವೈಶಿಷ್ಟವೆಂದರೆ ಅದರ ಬಳಕೆದಾರರ ಗುರುತುಗಳು ರಹಸ್ಯವಾಗಿರುತ್ತವೆ ಮತ್ತು ಭೇದಿಸಲು ಸಾಧ್ಯವಿಲ್ಲ. ಇದೇ ಕಾರಣದಿಂದ ಶಸ್ತ್ರಾಸ್ತ್ರಗಳು ಮತ್ತು ಮಾದಕದ್ರವ್ಯಗಳಂತಹ ಹಲವಾರು ಅಕ್ರಮ ಉತ್ಪನ್ನಗಳು ಇಲ್ಲಿ ಲಭ್ಯವಿರುತ್ತವೆ. ಸೈಬರ್ ಕ್ರಿಮಿನಲ್‌ಗಳು ಇಲ್ಲಿಯೇ ‘ಶಾಪಿಂಗ್’ ಮಾಡುತ್ತಾರೆ.

ಡೀಪ್ ವೆಬ್ ವರ್ಲ್ಡ್ ವೈಡ್ ವೆಬ್‌ನ ಶೇ.65-70 ರಷ್ಟು ಗಾತ್ರವನ್ನು ಹೊಂದಿದೆ. ಸೈಬರ್ ಅಪರಾಧಗಳನ್ನು ನಡೆಸಲು ಬಳಕೆಯಾಗುವ ಹಲವಾರು ಟೂಲ್‌ಗಳು ಅಥವಾ ಸಾಧನಗಳು ಡಾರ್ಕ್ ವೆಬ್‌ನಲ್ಲಿ ಲಭ್ಯವಿವೆ. ಕ್ರಿಮಿನಲ್‌ಗಳಿಂದ ಇಂತಹ ಅಪ್ಲಿಕೇಷನ್‌ಗಳ ಬಳಕೆಯ ಫ್ರೀಕ್ವೆನ್ಸಿಯನ್ನು ತಿಳಿದುಕೊಳ್ಳುವುದು ಕಷ್ಟವಾಗಿದೆ ಎನ್ನುತ್ತಾರೆ ತಜ್ಞರು.

ಹೆಚ್ಚಿನ ಪ್ರಕರಣಗಳು ಪತ್ತೆಯಾಗಿಲ್ಲವಾದ್ದರಿಂದ ಹೆಚ್ಚೆಚ್ಚು ಕ್ರಿಮಿನಲ್‌ಗಳು ಡಾರ್ಕ್ ವೆಬ್‌ನ್ನು ಬಳಸುತ್ತಿರುವ ಸಾಧ್ಯತೆಗಳಿವೆ. ಬೆಂಗಳೂರು ಸೈಬರ್ ಘಟಕವು ಇತ್ತೀಚಿಗೆ ಪ್ರಕರಣವೊಂದರ ತನಿಖೆ ನಡೆಸುತ್ತಿದ್ದಾಗ ಡಾರ್ಕ್‌ವೆಬ್‌ನಿಂದ ಸಾಫ್ಟ್‌ವೇರ್‌ವೊಂದನ್ನು ಡೌನ್‌ಲೋಡ್ ಮಾಡಿಕೊಂಡಿದ್ದನ್ನು ಶಂಕಿತ ಆರೋಪಿಯು ಒಪ್ಪಿಕೊಂಡಿದ್ದ. ಈ ಸಾಫ್ಟ್‌ವೇರ್‌ನಿಂದಾಗಿ ತನ್ನ ನಂಬರ್‌ನ್ನು ಮರೆಮಾಚಲು ಮತ್ತು ಅದರ ಜಾಡು ಹಿಡಿಯುವುದನ್ನು ತಡೆಯಲು ಆತನಿಗೆ ಸಾಧ್ಯವಾಗಿತ್ತು.

ವ್ಯಕ್ತಿಯೋರ್ವ ತನ್ನ ನಂಬರ್‌ನ್ನು ಮರೆಮಾಚಲು ಡಾರ್ಕ್‌ವೆಬ್‌ನಿಂದ ಟೂಲ್‌ಗಳನ್ನು ಬಳಸಿಕೊಂಡರೆ ಅಂತಹ ವ್ಯಕ್ತಿಯನ್ನು ಪತ್ತೆ ಹಚ್ಚಲು ನಮ್ಮ ಬಳಿ ಅಗತ್ಯ ಟೂಲ್‌ಗಳು ಮತ್ತು ಸಾಫ್ಟ್‌ವೇರ್ ಇಲ್ಲದಿರುವುದರಿಂದ ನಮ್ಮ ತನಿಖೆಯು ಅಲ್ಲಿಗೇ ಅಂತ್ಯಗೊಳ್ಳುತ್ತದೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.

ಡಾರ್ಕ್ ವೆಬ್‌ನಲ್ಲಿಯ ಚಟುವಟಿಕೆಗಳನ್ನು ಪತ್ತೆ ಹಚ್ಚಲು ಸಾಧ್ಯವಿದೆಯಾದರೂ ಇದಕ್ಕಾಗಿ ಪೊಲೀಸರಿಗೆ ವಿಶೇಷ ತರಬೇತಿ ಮತ್ತು ಅಂತಹ ಚಟುವಟಿಕೆಗಳ ಕುರಿತು ಮಾಹಿತಿ ಅಗತ್ಯವಾಗುತ್ತದೆ.

ಅಸಾಂಪ್ರದಾಯಿಕ ಆನ್‌ಲೈನ್ ಚಟುವಟಿಕೆಯ ಜಾಡು ಹಿಡಿಯಲು ಪ್ರಯತ್ನಿಸುವುದು ಹೊಸ ಪದ್ಧತಿಳನ್ನು ಅಭಿವೃದ್ಧಿಗೊಳಿಸುವುದನ್ನು ಅಗತ್ಯವಾಗಿಸುತ್ತದೆ. ಜೊತೆಗೆ ಈ ಕಾರ್ಯದಲ್ಲಿ ಸೈಬರ್ ಪಾತಕಿಗಳು ತಮ್ಮ ಅಕ್ರಮ ಚಟುವಟಿಕೆಗಳನ್ನು ನಡೆಸಲು ಟಾರ್ ನೆಟ್‌ವರ್ಕ್‌ನ್ನು ಬಳಸುತ್ತಿದ್ದರೆ ಅದನ್ನು ಭೇದಿಸಲು ವಿಶೇಷ ತರಬೇತಿಯೂ ಅಗತ್ಯವಾಗುತ್ತದೆ ಎನ್ನುತ್ತಾರೆ ತಜ್ಞರು.

ಎಫ್‌ಬಿಐನಂತಹ ಕೆಲವು ಗುಪ್ತಚರ ಸಂಸ್ಥೆಗಳು ಡಾರ್ಕ್‌ವೆಬ್‌ನಲ್ಲಿಯ ನಿರ್ದಿಷ್ಟ ವೆಬ್‌ಸೈಟ್‌ಗಳ ಜಾಡು ಹಿಡಿಯಲು ನೈತಿಕ ಹ್ಯಾಕರ್‌ಗಳನ್ನು ನಿಯೋಜಿಸುತ್ತಿವೆ,ಆದರೆ ಅವರಿಗೂ ನಿರ್ದಿಷ್ಟ ಮಾಹಿತಿಯು ಅಗತ್ಯವಾಗುತ್ತದೆ.

ಡಾರ್ಕ್‌ವೆಬ್‌ನಲ್ಲಿ ಖರೀದಿಗಳಿಗೆ ಹಣ ಪಾವತಿಸಲು ಬಿಟ್‌ಕಾಯ್ನ ವಹಿವಾಟುಗಳಿಗೆ ಆದ್ಯತೆ ನೀಡಲಾಗುತ್ತದೆ. ಇಂತಹ ವಹಿವಾಟುಗಳನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News