ಚಿತ್ರಗೀತೆಗಳ ಜನಪ್ರಿಯತೆಗೆ ಆಕಾಶವಾಣಿ ಕೊಡುಗೆ

Update: 2019-05-04 18:31 GMT

ಅರವತ್ತರ ದಶಕದಿಂದಾಚೆಗೆ ಚಿತ್ರಗೀತೆಗಳನ್ನು ಕೇಳುವವರ ಸಂಖ್ಯೆ ಹೆಚ್ಚತೊಡಗಿತು. ಆಕಾಶವಾಣಿ ಸಮಯ ದೊರೆತಾಗಲೆಲ್ಲ ಚಿತ್ರಗೀತೆಗಳನ್ನು ಪ್ರಸಾರ ಮಾಡತೊಡಗಿತು. ಕ್ರಮೇಣ ಬಿಡುಗಡೆಗೆ ಮುನ್ನವೇ ಚಿತ್ರದ ಹಾಡುಗಳನ್ನು ಪ್ರಸಾರ ಮಾಡುವ ಪದ್ಧತಿ ಆರಂಭವಾಯಿತು. ಆಕಾಶವಾಣಿಯ ಈ ಕ್ರಮ ಉದ್ಯಮದ ಮೇಲೆ ಹೆಚ್ಚಿನ ಸಕಾರಾತ್ಮಕ ಪರಿಣಾಮ ಬೀರಿತು. ಒಂದು, ಚಿತ್ರಗೀತೆಗಳನ್ನು ಜನರಿಗೆ ಮುಟ್ಟಿಸಿ ಚಿತ್ರಗೀತೆಗಳ ಬಗ್ಗೆ ಅಭಿರುಚಿಯನ್ನು ಬೆಳೆಸಿದ್ದು. ಎರಡು, ಬಿಡುಗಡೆಯಾದ ಚಿತ್ರಗಳ ಗೀತೆಯನ್ನು ಕೇಳಿದ ನಂತರ ಅದರ ಮಾಧುರ್ಯ ಅಥವಾ ಆಕರ್ಷಣೆಯಿಂದ ಶ್ರೋತೃವೊಬ್ಬ ಚಿತ್ರ ಪ್ರೇಕ್ಷಕನಾಗಲು ಸಿದ್ಧಗೊಳಿಸಿದ್ದು.

ಚಿತ್ರಗಳ ಅವಿಭಾಜ್ಯ ಘಟಕಗಳಾದರೂ, ಸ್ವತಂತ್ರ ಅಸ್ತಿತ್ವವಿರುವ ಚಿತ್ರಗೀತೆಗಳು ನಾಡಿನ ಮೂಲೆ ಮೂಲೆಯನ್ನು ತಲುಪಿ ಜನಪ್ರಿಯವಾಗಲು ಆಕಾಶವಾಣಿ ನೀಡಿದ ಕೊಡುಗೆಯನ್ನು ಸ್ಮರಿಸದಿರಲು ಸಾಧ್ಯವಿಲ್ಲ. ಸರಿಸುಮಾರು ಮೂರು ದಶಕಗಳವರೆಗೆ ಚಿತ್ರಗೀತೆಗಳನ್ನು ಶ್ರೋತೃಗಳಿಗೆ ಮುಟ್ಟಿಸಿದ ಆಕಾಶವಾಣಿ ಈಗ ದೂರದರ್ಶನದ ಜೊತೆ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದೆ. ಆದರೆ ಆಕಾಶವಾಣಿಯಲ್ಲಿ ಚಿತ್ರಗೀತೆಗಳ ಪ್ರಸಾರ ಪಡೆದುಕೊಂಡ ದಾರಿ ಮತ್ತು ಕ್ರಮಿಸಿದ ರೀತಿ ಅನನ್ಯ.
ಭಾರತದಲ್ಲಿ ರೇಡಿಯೋ ಪ್ರಸಾರ 1923ರಲ್ಲಿ ಖಾಸಗಿಯಾಗಿ ಆರಂಭವಾಯಿತು. ಆ ಕಾಲಕ್ಕೆ ಪೆಟ್ಟಿಗೆಯೊಂದು ಧ್ವನಿ ಹೊರಡಿಸುವ ವಿಷಯವೇ ಪ್ರಪಂಚದ ಎಂಟನೇ ಅದ್ಭುತವೆನಿಸಿತ್ತು. ಈ ಖಾಸಗಿಯಾಗಿ ಶುರುವಾದ ಚಟುವಟಿಕೆ 1926ರಲ್ಲಿ ಇಂಡಿಯನ್ ಬ್ರಾಡ್‌ಕ್ಯಾಸ್ಟಿಂಗ್ ಕಂಪೆನಿಯಾಗಿ ಜನಪ್ರಿಯಗೊಂಡ ನಂತರ 1930ರಲ್ಲಿ ಬ್ರಿಟಿಷ್ ಸರಕಾರ ಆಡಳಿತವನ್ನು ವಹಿಸಿಕೊಂಡಿತು. 1936ರಲ್ಲಿ ಈ ಕಂಪೆನಿ ‘ಆಲ್ ಇಂಡಿಯಾ ರೇಡಿಯೋ’ (AIR) ಎಂದು ಹೆಸರು ಪಡೆಯಿತು. ಅದು ಹಾಗೆಯೇ ಉಳಿದು ಬಂದಿದೆ.
ಇದಕ್ಕೂ ಮುನ್ನ ಅಂದರೆ 1935ರಲ್ಲಿ ಎನ್. ಗೋಪಾಲಸ್ವಾಮಿ ಅವರ ಪ್ರಯತ್ನದಿಂದ ಮೈಸೂರಿನಲ್ಲಿ ಈ ಪ್ರಸಾರ ಮಾಧ್ಯಮ ಆರಂಭವಾಯಿತು. ನಮ್ಮ ಕನ್ನಡಿಗರು ಅದಕ್ಕೆ ಕೊಟ್ಟ ಹೆಸರು ‘ಆಕಾಶವಾಣಿ’. ತಮಿಳು ಭಾಷೆಯಲ್ಲಿ ಇದನ್ನೇ ಆಧರಿಸಿ ವಾನುಲಿ (ಬಾನುಲಿ ಅಥವಾ ಆಕಾಶವಾಣಿ) ಎಂದು ಹೆಸರಿಸಿದರು.
ಆರಂಭದಲ್ಲಿ ಚಿತ್ರಗೀತೆ ಪ್ರಸಾರಕ್ಕೆ ಹೆಚ್ಚಿನ ಒಲವು ಕಂಡು ಬರಲಿಲ್ಲ. ಕನ್ನಡದ ಗೀತೆಗಳ ಪ್ರಸಾರ ಇಲ್ಲವೆಂದೇ ಹೇಳಬೇಕು. ದೇಶ ಸ್ವತಂತ್ರಗೊಂಡು 1955ರಲ್ಲಿ ಬೆಂಗಳೂರಿನಲ್ಲಿ ಆಕಾಶವಾಣಿ ಸ್ಥಾಪನೆಯಾದ ನಂತರ ಚಿತ್ರಗೀತೆಗಳಿಗೆ ಅವಕಾಶ ನೀಡಲಾಯಿತು. ಆದರೂ ಪ್ರಸಾರದ ಅವಧಿ ಕಡಿಮೆಯಿತ್ತು. ದಿನವೆಲ್ಲ ಯಾವುದೋ ನಾಟಕ, ಸಾಮಾನ್ಯ ಶ್ರೋತೃವಿಗೆ ಅಪರಿಚಿತವಾದ ಶಾಸ್ತ್ರೀಯ ಸಂಗೀತ, ಬಿಡುವಿಲ್ಲದ ಚರ್ಚೆಗಳು ನಡೆಯುತ್ತಿದ್ದವು. ಪುಣ್ಯಕ್ಕೆ ಇಪ್ಪತ್ತನಾಲ್ಕು ಗಂಟೆ ಪ್ರಸಾರವಿರಲಿಲ್ಲ. ದಿನಕ್ಕೆ ಮೂರು ಅವಧಿಯ ಪ್ರಸಾರ. ಜೊತೆಗೆ ರೇಡಿಯೋ ಸಿರಿವಂತರ ಪ್ರದರ್ಶನದ ವಸ್ತುವಾಗಿತ್ತು. ಅದರ ವಿರಳತೆ ಮತ್ತು ಪೆಟ್ಟಿಗೆಯೊಂದು ಧ್ವನಿ ಹೊರಡಿಸುವ ವಿಚಿತ್ರವೇ ರೇಡಿಯೋದ ಪ್ರಮುಖ ಆಕರ್ಷಣೆಯಾಗಿತ್ತು. ಜನಪ್ರಿಯತೆಯಲ್ಲಿ ಅಗ್ರ ಪಟ್ಟವಿದ್ದದ್ದು ಸುದ್ದಿವಾಚನಕ್ಕೆ ಮಾತ್ರ.


1960ರಲ್ಲಿ ಬೆಂಗಳೂರಿನ ಜೊತೆಗೆ ಭದ್ರಾವತಿ, ಧಾರವಾಡ ಮತ್ತು ಗುಲ್ಬರ್ಗಾಗಳಲ್ಲಿ ಬಾನುಲಿ ಕೇಂದ್ರಗಳು ಆರಂಭವಾದ ನಂತರ ಚಿತ್ರಗೀತೆಗಳ ಜನಪ್ರಿಯತೆಯನ್ನು ಅರ್ಥಮಾಡಿಕೊಂಡ ಆಡಳಿತವರ್ಗ ಮೂರು ಪ್ರಸಾರದಲ್ಲಿ ಚಿತ್ರಗೀತೆಗಳಿಗಾಗಿಯೇ ನಿರ್ದಿಷ್ಟ ಸಮಯ ಕಾದಿರಿಸಿತು. ಅದೇ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪಂಚಾಯತ್ ರೇಡಿಯೋಗಳು ಹಳ್ಳಿಗಳನ್ನು ತಲುಪಿದವು. ಉಳ್ಳವರ ಮನೆಯಲ್ಲಿ ರೇಡಿಯೋ ಪ್ರಸಾರಕ್ಕೆ ಕಾಯಬೇಕಿದ್ದ ಜನರಿಗೆ ಸಾಮೂಹಿಕವಾಗಿ ಕೇಳಿಸಿಕೊಳ್ಳುವ ಅವಕಾಶ ಒದಗಿ ಬಂತು. ಚಿತ್ರಗೀತೆಗಳ ಬಗ್ಗೆ ಆಕಾಶವಾಣಿ ಅನುಸರಿಸಿದ ಬಗೆ ಧೋರಣೆಯನ್ನು ರೇಡಿಯೊ ಸಿಲೋನ್ ತನ್ನ ಅನುಕೂಲಕ್ಕೆ ಬಗ್ಗಿಸಿಕೊಂಡಿತು. ರೇಡಿಯೊ ಸಿಲೋನ್ ಹಿಂದಿ ಚಿತ್ರಗೀತೆಗಳ ಪ್ರಸಾರದಿಂದ ಭಾರತದಲ್ಲಿ ಜನಪ್ರಿಯವಾಯಿತು. ಭಾರತದ ಜಾಹೀರಾತು ಹಣ ಶ್ರೀಲಂಕಾ ಮಡಿಲಿಗೆ ಬಿತ್ತು. ಇದರಿಂದ ಪಾಠ ಕಲಿತ ಆಕಾಶವಾಣಿ ಮುಖ್ಯವಾಗಿ ಚಿತ್ರಗೀತೆಗಳಿಗಾಗಿಯೇ 1957ರಲ್ಲಿ ವಿವಿಧ ಭಾರತಿ ವಾಣಿಜ್ಯ ವಿಭಾಗ ಆರಂಭಿಸಿತು. ಅದರಲ್ಲೂ ಕನ್ನಡದ ಹಾಡುಗಳ ಪ್ರಸಾರ ಅವಧಿ ಆರಂಭದಲ್ಲಿ ಕಡಿಮೆಯಿತ್ತು. ಅನಂತರ ಅದು ವಿಸ್ತರಿಸುತ್ತಾ ಬಂತು. ಎಪ್ಪತ್ತರ ದಶಕದಲ್ಲಿ ರೇಡಿಯೋ ಸಿಲೋನ್ ಕೂಡ ಮಧ್ಯಾಹ್ನ 2ರಿಂದ 2:30ರವರೆಗೆ ಕನ್ನಡ ಹಾಡುಗಳ ಪ್ರಸಾರವನ್ನು ಆರಂಭಿಸಿತು.
ಅರವತ್ತರ ದಶಕದಿಂದಾಚೆಗೆ ಚಿತ್ರಗೀತೆಗಳನ್ನು ಕೇಳುವವರ ಸಂಖ್ಯೆ ಹೆಚ್ಚತೊಡಗಿತು. ಆಕಾಶವಾಣಿ ಸಮಯ ದೊರೆತಾಗಲೆಲ್ಲ ಚಿತ್ರಗೀತೆಗಳನ್ನು ಪ್ರಸಾರ ಮಾಡತೊಡಗಿತು. ಕ್ರಮೇಣ ಬಿಡುಗಡೆಗೆ ಮುನ್ನವೇ ಚಿತ್ರದ ಹಾಡುಗಳನ್ನು ಪ್ರಸಾರ ಮಾಡುವ ಪದ್ಧತಿ ಆರಂಭವಾಯಿತು. ಆಕಾಶವಾಣಿಯ ಈ ಕ್ರಮ ಉದ್ಯಮದ ಮೇಲೆ ಹೆಚ್ಚಿನ ಸಕಾರಾತ್ಮಕ ಪರಿಣಾಮ ಬೀರಿತು. ಒಂದು, ಚಿತ್ರಗೀತೆಗಳನ್ನು ಜನರಿಗೆ ಮುಟ್ಟಿಸಿ ಚಿತ್ರಗೀತೆಗಳ ಬಗ್ಗೆ ಅಭಿರುಚಿಯನ್ನು ಬೆಳೆಸಿದ್ದು. ಎರಡು, ಬಿಡುಗಡೆಯಾದ ಚಿತ್ರಗಳ ಗೀತೆಯನ್ನು ಕೇಳಿದ ನಂತರ ಅದರ ಮಾಧುರ್ಯ ಅಥವಾ ಆಕರ್ಷಣೆಯಿಂದ ಶ್ರೋತೃವೊಬ್ಬ ಚಿತ್ರ ಪ್ರೇಕ್ಷಕನಾಗಲು ಸಿದ್ಧಗೊಳಿಸಿದ್ದು. ಹಾಡನ್ನು ಕೇಳುವ ಶ್ರೋತೃವು ಈಗಾಗಲೇ ಚಿತ್ರವನ್ನು ನೋಡಿದ್ದರೆ ಮತ್ತೆ ಆ ಚಿತ್ರದ ದೃಶ್ಯಗಳನ್ನು ಮನಃಪಟಲದ ಮೇಲೆ ಮೂಡಿಸಿಕೊಂಡು ಮರು ಆನಂದಿಸಲು (Reliving) ಚಿತ್ರಗೀತೆ ನೆರವಾಗುತ್ತಿದ್ದವು. ಚಿತ್ರ ನೋಡದ ಪ್ರೇಕ್ಷಕನ ಭಾವ ಸಮುದ್ರದಲ್ಲಿ ಆನಂದದ ತರಂಗಗಳೇಳುವಂತೆ, ಕಲ್ಪನೆಯ ಹಕ್ಕಿಯ ಗರಿಬಿಚ್ಚುವಂತೆ ಮಾಡುತ್ತಿದ್ದವು. ಬಿಡುಗಡೆಯಾದ ಚಿತ್ರದ ಹಾಡು ಚಿತ್ರವೊಂದರ ಬಗ್ಗೆ ಸಶಕ್ತ ಜಾಹೀರಾತಿನಂತೆ ಚಿತ್ರದ ಯಶಸ್ಸಿಗೆ ಕಾರಣವಾಗುತ್ತಿದ್ದವು.


ಇದಲ್ಲದೆ ಆಕಾಶವಾಣಿಯು ಆಗಾಗ್ಗೆ ಪ್ರಸಾರ ಮಾಡುತ್ತಿದ್ದ ಬಿಡುಗಡೆಯಾದ ಚಿತ್ರದ ಧ್ವನಿ ಮುದ್ರಿಕೆಗಳೂ ಅಪಾರ ಜನಪ್ರಿಯತೆ ಪಡೆದಿದ್ದವು. ಚಿತ್ರ ನೋಡಲಾಗದ ಜನರೂ ಅದನ್ನು ಕೇಳಿಸಿಕೊಂಡು ತಮ್ಮ ಕಲ್ಪನೆಯ ಚಲನಚಿತ್ರವೊಂದನ್ನು ಸೃಷ್ಟಿಸಿಕೊಂಡು ಆನಂದಿಸುವ ವಿಶಿಷ್ಟ ವಿದ್ಯಮಾನಕ್ಕೂ ಆಕಾಶವಾಣಿ ಕಾರಣವಾಯಿತು. ಮೆಚ್ಚಿನ ಚಿತ್ರಗೀತೆ ವಿಭಾಗ ಸಹ ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿ ಶ್ರೋತೃಗಳನ್ನು ತಣಿಸಿದ ಸಂಗತಿ ಈಗ ಇತಿಹಾಸ. ಇದಲ್ಲದೆ ಉದ್ಯಮಕ್ಕೆ ಸಂಬಂಧಿಸಿದ ಕಲಾವಿದರು, ನಿರ್ದೇಶಕರು, ತಂತ್ರಜ್ಞರನ್ನು ಆಗಾಗ್ಗೆ ಪರಿಚಯಿಸಿ, ಸಂದರ್ಶನ ಏರ್ಪಡಿಸಿ ಉದ್ಯಮವನ್ನು ಜನರ ಹತ್ತಿರಕ್ಕೆ ಒಯ್ಯುವಲ್ಲಿ ಆಕಾಶವಾಣಿ ವಹಿಸಿದ ಪಾತ್ರ ಬಹಳ ದೊಡ್ಡದು.
ಚಿತ್ರಗೀತೆ, ಚಿತ್ರ ಸಾಹಿತ್ಯ, ಚಿತ್ರದ ಕಲಾವಿದರ ಬಗ್ಗೆ ಸಂಪ್ರದಾಯಸ್ಥರು ಮೂಗು ಮುರಿಯುತ್ತಿದ್ದ ಕಾಲವೊಂದಿತ್ತು. ತನ್ನ ಮಡಿವಂತಿಕೆಯಿಂದ ನಲವತ್ತು ಐವತ್ತರ ದಶಕದಲ್ಲಿ ಚಿತ್ರಗೀತೆ ಪ್ರಸಾರಗೊಂಡದ್ದು ಕಡಿಮೆ. ಕರ್ನಾಟಕದಲ್ಲಿ ಆಕಾಶವಾಣಿ ಬಂದ ನಂತರವೂ ಅದೇ ಮಡಿವಂತಿಕೆ ಮುಂದುವರಿದಿತ್ತು ಕೆಲಕಾಲ. ಆದರೆ ಕ್ರಮೇಣ ಚಿತ್ರಗೀತೆಗಳ ಮಹತ್ವ ಅರಿವಾಯಿತೆಂದು ಕಾಣಿಸುತ್ತದೆ. ಈಗಂತೂ ಎಫ್.ಎಂ. ಚಾನಲ್‌ಗಳು ಚಿತ್ರಗೀತೆಗಳಿಲ್ಲದಿದ್ದರೆ ಬದುಕುವುದು ಕಷ್ಟ. ಚಿತ್ರಗಳನ್ನಾಧರಿಸಿದ, ಚಿತ್ರಗೀತೆಗಳನ್ನಾಧರಿಸಿದ, ಚಿತ್ರದ ದೃಶ್ಯಗಳನ್ನಾಧರಿಸಿದ ಕಾರ್ಯಕ್ರಮಗಳೇ ಎಲ್ಲ ಟಿ.ವಿ. ಚಾನಲ್‌ಗಳಲ್ಲಿ ಆದ್ಯತೆ ಪಡೆದಿವೆ. ತಮ್ಮ ಮಕ್ಕಳು ಚಿತ್ರಗೀತೆ ಹಾಡಿದರೆ, ತಲೆಯ ಮೇಲೆ ಮಟ್ಟಿ ಹಾಡಲು ನಿರ್ಬಂಧ ಹೇರುತ್ತಿದ್ದ ತಂದೆ ತಾಯಿಗಳೇ ಇಂದು ಮಕ್ಕಳನ್ನು ತಯಾರು ಮಾಡಿ ಅವರ ಸ್ವಚ್ಛಂದ ಬಾಲ್ಯಕ್ಕೆ ಕತ್ತರಿ ಹಾಕಿ ಚಿತ್ರಗೀತೆಗಳನ್ನು ಹಾಡುವ ಯಂತ್ರಗಳನ್ನಾಗಿ ರೂಪಿಸುತ್ತಿದ್ದಾರೆ. ಚಿತ್ರಗೀತೆಗಳು ಬೀರಿರುವ ಪ್ರಭಾವ, ಸೃಷ್ಟಿಸಿರುವ ಲೋಕ ಅಂತಹದ್ದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News