ಹಿಮಾಲಯದ ಯೇತಿಯ ಜೊತೆಗೆ ಮೋದಿ ಮಾತನಾಡಿದ್ದರು....!!

Update: 2019-05-04 18:31 GMT

ಹಿಮಾಲಯದಲ್ಲಿ ಯೇತಿಯ ಹೆಜ್ಜೆಗುರುತನ್ನು ಭಾರತೀಯ ಸೇನೆ ಪತ್ತೆ ಹಚ್ಚಿರುವುದು ಪತ್ರಕರ್ತ ಎಂಜಲು ಕಾಸಿಗೆ ಭಾರೀ ಕುತೂಹಲ ಸೃಷ್ಟಿಸಿತು. ಅಂದರೆ ಹಿಮಾಲಯದಲ್ಲಿ ಯೇತಿ ಇರುವುದು ನಿಜ ಎಂದಾಯಿತು. ನರೇಂದ್ರ ಮೋದಿಯವರು ತಮ್ಮ ಬಾಲ್ಯದಲ್ಲಿ ಸನ್ಯಾಸಿಯಾಗಿ ಹಿಮಾಲಯಕ್ಕೆ ತೆರಳಿದಾಗ ಅವರು ಈ ಯೇತಿಯನ್ನು ನೋಡಿದ್ದಿರಬಹುದೆ? ಎನ್ನುವ ಸಣ್ಣ ಅನುಮಾನ ಅವನಿಗೆ ಎದುರಾಯಿತು. ಮೋದಿಯವರಂತೂ ಪತ್ರಕರ್ತರ ಬಳಿ ಮಾತನಾಡುವುದಿಲ್ಲ. ಸಮಸ್ಯೆಯನ್ನು ಪರಿಹರಿಸುವುದು ಹೇಗೆ? ತಕ್ಷಣ ಎಂಜಲು ಕಾಸಿಗೆ ನಟ ಅಕ್ಷಯ್ ಕುಮಾರ್ ಅವರು ನೆನಪಾದರು. ನೇರವಾಗಿ ಅಕ್ಷಯ್ ಕುಮಾರ್ ನಂಬರಿಗೆ ಕಾಸಿ ಫೋನಾಯಿಸಿದ.
‘‘ಸಾರ್...ಮೋದೀಜಿ....’’ ಎಂದು ಕಾಸಿ ಬಾಯಿ ತೆರೆಯುವಷ್ಟ ರಲ್ಲಿ ಅಕ್ಷಯ್ ಗಳಗಳನೆ ಅಳುವಂತೆ ನಗುತ್ತಾ ‘‘ಮೋದಿಜಿ ನಮಷ್ಕಾರ್...ಔರ್ ಏಕ್ ಇಂಟರ್ಯ್ಯೂ ಚಾಹ್ತಾ ಹೇ ಆಪ್....ಏಕ್ ಮೈನೇ ಪಹ್‌ಲೆ ಸ್ಕ್ರಿಪ್ಟ್ ದೇನಾ ಚಾಯಿಯೆ(ಮತ್ತೆ ಸಂದರ್ಶನ ಮಾಡಬೇಕೆ....ಒಂದು ತಿಂಗಳ ಮೊದಲೇ ನನಗೆ ಸ್ಕ್ರಿಪ್ಟ್ ಕೊಡಬೇಕು....)’’ ಎಂದು ಮಾತನಾಡತೊಡಗಿದರು.
‘‘ಸಾರ್...ಜೀ. ನಾನು ಪತ್ರಕರ್ತ ಕಾಸಿ....ಮೋದಿ ಸಂದರ್ಶನದ ಕುರಿತಂತೆ ನಿಮ್ಮನ್ನು ಸಂದರ್ಶನ ಮಾಡಬೇಕಾಗಿತ್ತು....’’ ಕಾಸಿ ಜೋರಾಗಿ ಹೇಳಿದ.
‘‘ಕನ್ನಡದೋರಾ....ನಾನು ವಿಷ್ಣುವರ್ಧನ್ ಜೊತೆಗೆ ಸಿನೆಮಾ ಮಾಡಿದಾಗ ಸ್ವಲ್ಪ ಕನ್ನಡ ಕಲಿತಿದ್ದೆ. ಕೇಳಿ ಕೇಳಿ....’’
‘‘ಸಾರ್...ನಿಮ್ಮ ಆ್ಯಕ್ಟಿಂಗ್ ತುಂಬಾ ಚೆನ್ನಾಗಿತ್ತು ಸಾರ್...’’ ಕಾಸಿ ಪೂಸಿ ಹೊಡೆಯತೊಡಗಿದ.
‘‘ಟಾಯ್ಲೆಟ್ ಚಿತ್ರದ ಬಗ್ಗೆನಾ? ಮೋದಿಯವರೂ ಅದನ್ನೇ ಹೇಳಿದರು. ಆದರೆ ಅದರಲ್ಲಿ ಟಾಯ್ಲೆಟ್‌ನೊಳಗೆ ನಡೆಯುವ ಕೆಲವು ಸೀನ್‌ಗಳಿಗೆ ಕತ್ತರಿ ಹಾಕಿದ್ದಾರೆ. ಡ್ಯೂಪ್ ಬಳಸದೆ ಸ್ವತಃ ನಾನೇ ಟಾಯ್ಲೆಟ್‌ನೊಳಗೆ ಸಹಜವಾಗಿ ನಟಿಸಿದ್ದೆ. ಅದಕ್ಕೆ ಕತ್ತರಿ ಹಾಕದೇ ಇದ್ದಿದ್ದರೆ ಆಸ್ಕರ್ ಅವಾರ್ಡ್ ಸಿಗುತ್ತಿತ್ತು....’’ ಅಕ್ಷಯ್ ಹೇಳಿದರು.
‘‘ಅದಲ್ಲ ಸಾರ್ ಮೋದಿಯವರ ಜೊತೆ ನಟಿಸಿದ ಚಿತ್ರ ಸಾರ್...’’
‘‘ಅದು ವಿವೇಕ್ ಒಬೆರಾಯ್ ನಟಿಸಿದ್ದಾರೆ...ನಾನು ನಟಿಸಬೇಕಾಗಿತ್ತು ಎನ್ನುವುದು ಮೋದಿಯವರ...’’
‘‘ಸಾರ್ ಅದಲ್ಲ ಸಾರ್....ಮೋದಿಯವರ ರಾಜಕೀಯೇತರ ಸಂದರ್ಶನದಲ್ಲಿ ನೀವು ತುಂಬಾ ಚೆನ್ನಾಗಿ ನಟಿಸಿದ್ದೀರಿ....’’
‘‘ಹೌದಲ್ಲ...ಹೌದಲ್ಲ...ಮಾವು ತಿನ್ನುವ ಸೀನ್ ತುಂಬಾ ಚೆನ್ನಾಗಿತ್ತಲ್ಲ?’’ ಅಕ್ಷಯ್ ಸಂಭ್ರಮದಿಂದ ಕೇಳಿದರು.
‘‘ಆದರೆ ಮೋದಿಯವರ ನಟನೆಯ ಮುಂದೆ ನಿಮ್ಮ ನಟನೆ ತುಂಬಾ ಡಲ್ ಆಗಿತ್ತು....ಸಾರ್...’’ ಕಾಸಿ ಬೇಜಾರಿನಲ್ಲಿ ಹೇಳಿದ.
‘‘ಅದು ಸಹಜ. ಅವರು ಈಗಾಗಲೇ ನೂರಾರು ಸಿನೆಮಾದಲ್ಲಿ ಸಾರ್ವಜನಿಕವಾಗಿ ಡ್ಯೂಪ್ ಇಲ್ಲದೆಯೇ ನಟಿಸಿದ ಮಹಾ ಅನುಭವಿ ನಟ. ಅಂತಹ ಮಹಾನ್ ಕಲಾವಿದರ ಜೊತೆಗೆ ಒಂದು ಅತಿಥಿ ಪಾತ್ರ ಸಿಕ್ಕಿದ್ದು ನನ್ನ ಸಿನೆಮಾ ಬದುಕಿನ ದೊಡ್ಡ ಭಾಗ್ಯ....’’ ಅಕ್ಷಯ್ ಗದ್ಗದರಾಗಿ ಹೇಳಿದರು.
‘‘ಸಾರ್...ಹಿಮಾಲಯದಲ್ಲಿ ಅವರದೊಂದು ಸಾಂಗ್ ಚಿತ್ರೀಕರಣ ಮಾಡಿದ್ದಿದ್ರೆ ಚೆನ್ನಾಗಿತ್ತು....ಇನ್ನೂ ಪರಿಣಾಮಕಾರಿಯಾಗಿ ಬರುತ್ತಿತ್ತು...’’ ಕಾಸಿ ಸಲಹೆ ನೀಡಿದ.
‘‘ಅವರು ಹಿಮಾಲಯದಲ್ಲಿ ಸನ್ಯಾಸಿಯಾಗಿ ತಂಬೂರಿ ಮೀಟುತ್ತಾ ಹಾಡುವ ಒಂದು ಸನ್ನಿವೇಶ ಇತ್ತು. ಆದರೆ ಚುನಾವಣಾ ಆಯೋಗ ಅದಕ್ಕೆ ಕತ್ತರಿ ಹಾಕಿದೆ....ಈ ಬಗ್ಗೆ ಚುನಾವಣಾ ಆಯೋಗ ಬಹಳಷ್ಟು ನೊಂದುಕೊಂಡು ಮೋದಿಯವರಿಗೆ ಪತ್ರ ಬರೆದಿದೆ....’’ ಅಕ್ಷಯ್ ವಿಷಾದದಿಂದ ಹೇಳಿದರು.
‘‘ಸಾರ್....ಹಿಮಾಲಯದಲ್ಲಿ ಯೇತಿ ಓಡಾಡಿರುವ ಹೆಜ್ಜೆಗುರುತುಗಳನ್ನು ಸೈನಿಕರು ಕಂಡು ಹಿಡಿದಿದ್ದಾರೆ....ಯೇತಿಗಳು ಮೋದಿಯವರಿಗೆ ಏನೂ ಮಾಡಿರಲಿಲ್ಲವೇ?’’
‘‘ಅದು ಯೇತಿ ಓಡಾಡಿದ್ದು ಅಲ್ಲ ಎಂದು ಮೋದಿಯವರೇ ನನಗೆ ಹೇಳಿದ್ದರು. ಅದು ಅವರೇ ಓಡಾಡಿದ ಹೆಜ್ಜೆಗುರುತುಗಳಂತೆ. ಮೋದಿಯವರು ಅದನ್ನು ಚುನಾವಣೆಯ ಫಲಿತಾಂಶ ಬಂದ ಬಳಿಕ ಬಹಿರಂಗಪಡಿಸಲಿದ್ದಾರೆ...’’ ಅಕ್ಷಯ್ ರಹಸ್ಯವನ್ನು ಸ್ಫೋಟಿಸಿದರು.
‘‘ಹೌದಾ ಸಾರ್....ಹಾಗಾದರೆ ಯೇತಿಗಳು ಇರುವುದು ಸುಳ್ಳೇ?’’ ಕಾಸಿ ಕೇಳಿದ.
‘‘ಯೇತಿಗಳನ್ನು ಸ್ವತಃ ಮೋದಿಯವರು ನೋಡಿದ್ದಾರೆ. ಸನ್ಯಾಸಿಯಾಗಿ ಅವರು ಹಿಮಾಲಯದಲ್ಲಿ ಓಡಾಡುತ್ತಿರುವಾಗ ಯೇತಿಗಳೇ ಅವರಿಗೆ ಹಣ್ಣು ಹಂಪಲುಗಳನ್ನು ತಂದು ಸೇವೆ ಮಾಡುತ್ತಿತ್ತಂತೆ....ತ್ರೇತಾಯುಗದ ಯೇತಿಗಳು ಕೂಡ ಇದ್ದವಂತೆ. ರಾಮಾಯಣದಲ್ಲಿ ಸೇತುವೆ ಕಟ್ಟಿದ ಯೇತಿಯೊಂದು ಅಂದಿನ ಎಲ್ಲ ವಿವರಗಳನ್ನು ಮೋದಿಯವರಿಗೆ ತಿಳಿಸಿತಂತೆ....ರಾಮಾಯಣ ಕಾಲದ ಈ ಯೇತಿಗೆ ಅಂದು ಶ್ರೀರಾಮನು ‘ಕಲಿಯುಗದಲ್ಲಿ ಮೋದಿ ಹುಟ್ಟಿ ಹಿಮಾಲಯಕ್ಕೆ ಬರುತ್ತಾರೆ. ಆಗ ನೀನು ಅವರ ದರ್ಶನ ಪಡೆದು ಮೋಕ್ಷವನ್ನು ಪಡೆ’ ಎಂದು ಹೇಳಿದನಂತೆ. ಮೋದಿಯವರಿಂದಾಗಿಯೇ ಆ ಯೇತಿಗೆ ಮೋಕ್ಷ ಸಿಗುವ ಅವಕಾಶವಿತ್ತಂತೆ....’’
‘‘ಹೌದಾ ಸಾರ್....ಇದು ನಿಜಕ್ಕೂ ಗ್ರೇಟ್ ಸಾರ್....ಅದಕ್ಕೆ ಮೋಕ್ಷ ಸಿಗಲಿಲ್ಲವೇ?’’
‘‘ಹೂಂ...ನನಗೆ ನಿಮ್ಮ ರಾಜಕೀಯ ಜೀವನದಲ್ಲಿ ಸಹಾಯ ಮಾಡುವ ಆಸೆಯಿದೆ. ಆದುದರಿಂದ ಮುಂದಿನ ಜನ್ಮದಲ್ಲಿ ನಿಮ್ಮ ಜೊತೆಗೆ ರಾಜಕೀಯ ನಡೆಸುವ ಅವಕಾಶ ನೀಡಿ ಎಂದು ಅದು ಕೇಳಿತಂತೆ. ಆಗ ಮೋದಿಯವರು ಹಸನ್ಮುಖರಾಗಿ ‘ಸರಿ ಆಗಲಿ’ ಎಂದು ವರ ನೀಡಿದರಂತೆ....’’
‘‘ಅಂದರೆ ಅದು ಪುನರ್‌ಜನ್ಮ ಪಡೆಯಿತೆ ಸಾರ್?’’
‘‘ಅದೇ ಯೇತಿ ಮುಂದೆ ಅಮಿತ್ ಶಾ ಅವರಾಗಿ ಹುಟ್ಟಿ ಇದೀಗ ಮೋದಿಯವರ ಸೇವೆ ಮಾಡುತ್ತಿದೆ...ಇದನ್ನು ಸಂದರ್ಶನದಲ್ಲಿ ನನಗೆ ಮೋದಿಯವರೇ ಹೇಳಿದ್ದರು....’’
‘‘ಸಾರ್...ಈ ಪುಣ್ಯ ಕಥಾಭಾಗ ತುಂಬಾ ಅದ್ಭುತವಾಗಿದೆ ಸಾರ್...ಇದನ್ನು ಸಿನೆಮಾ ಮಾಡಬೇಕು ಸಾರ್....’’ ಕಾಸಿ ಗೋಗರೆದ.
‘‘ಮೋದಿಯವರೂ ಅದೇ ಉದ್ದೇಶವನ್ನು ಹೊಂದಿದ್ದಾರೆ. ಅದಕ್ಕಾಗಿಯೇ ಈ ಕಥೆಯನ್ನು ಯಾರಿಗೂ ಈವರೆಗೆ ಹೇಳಿಲ್ಲ, ಗುಟ್ಟಾಗಿಟ್ಟಿದ್ದಾರೆ. ಈ ಕಥೆ ಹೇಳಿದರೆ ಅದನ್ನು ಹಾಲಿವುಡ್‌ನವರು ರಿಮೇಕ್ ಮಾಡುವ ಸಾಧ್ಯತೆಗಳಿವೆ....’’
‘‘ಹಾಗಾದರೆ ಈ ಕತೆ ಸಿನೆಮಾ ಆಗಿ ಬರುತ್ತದೆಯೇ...?’’ ಕಾಸಿ ಸಂಭ್ರಮದಿಂದ ಕೇಳಿದ.
‘‘ಇದನ್ನು ಟಿವಿಯಲ್ಲಿ ಧಾರಾವಾಹಿಯಾಗಿ ಮಾಡಲು ಅವರು ಆಸಕ್ತಿ ಹೊಂದಿದ್ದಾರೆ. ಆಗ ಮೋದಿಯ ಪಾತ್ರದಲ್ಲಿ ನಾನೇ ನಟಿಸಲಿದ್ದೇನೆ. ಮೊನ್ನೆಯ ಸಂದರ್ಶನದಲ್ಲಿ ಮೋದಿಯವರು ನನ್ನ ಕಾಲ್‌ಶೀಟ್ ಕೇಳಿದ್ದಾರೆ’’ ಅಕ್ಷಯ್ ಸ್ಕೂಪ್ ವಿವರಗಳನ್ನು ನೀಡಿದರು.
‘‘ಸಾರ್...ಚಿತ್ರದಲ್ಲಿ ಯೇತಿಯ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ?’’
‘‘ನೈಜವಾಗಿರಲಿ ಎಂದು ಅಮಿತ್ ಶಾ ಅವರನ್ನೇ ನಟಿಸಲು ಹೇಳಿದ್ದೇವೆ....ಆದರೆ ಅವರು ಮೋದಿಯವರ ಎದುರು ನಟಿಸಲು ಹಿಂದೇಟು ಹಾಕುತ್ತಿದ್ದಾರೆ. ಆದುದರಿಂದ ಬೇರೆ ಇತರ ಖ್ಯಾತ ನಟರನ್ನು ನಾವು ಸಂಪರ್ಕಿಸುತ್ತಿದ್ದೇವೆ....ಬೇರೆ ಬೇರೆ ಪಕ್ಷಗಳಲ್ಲಿ ರಾಜಕಾರಣಿಗಳಲ್ಲಿ ಯೇತಿಯನ್ನು ಹೋಲುವ ವ್ಯಕ್ತಿತ್ವವನ್ನು ಹುಡುಕುತ್ತಿದ್ದೇವೆ....’’
‘‘ಸಾರ್...ಮೋದಿಯವರ ಪತ್ನಿ ಜಶೋದಾಮಾತಾ ಅವರ ಪಾತ್ರದಲ್ಲಿ ತಮ್ಮ ಪತ್ನಿ ಟ್ವಿಂಕಲ್ ಖನ್ನಾ ನಟಿಸಲಿದ್ದಾರಂತೆ ಹೌದೇ?’’ ಕಾಸಿ ಕೊನೆಯ ಪ್ರಶ್ನೆಯನ್ನು ಒಗೆದ.
‘‘ಹಲೋ...ಹಲೋ....’’ ಫೋನ್ ಕಟ್ಟಾಯಿತು.

 

Writer - *ಚೇಳಯ್ಯ chelayya@gmail.com

contributor

Editor - *ಚೇಳಯ್ಯ chelayya@gmail.com

contributor

Similar News