ನಟ ಅಜಯ್ ದೇವಗನ್ ಗೆ ಸಲ್ಲಿಸಿದ ಮನವಿಯಲ್ಲಿ ಕ್ಯಾನ್ಸರ್ ರೋಗಿ ಹೇಳಿದ್ದು ಹೀಗೆ…

Update: 2019-05-06 06:46 GMT

ಜೈಪುರ್, ಮೇ 6: ಸಮಾಜದ ಹಿತದೃಷ್ಟಿಯಿಂದ ತಂಬಾಕು ಉತ್ಪನ್ನಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದನ್ನು ನಿಲ್ಲಿಸುವಂತೆ ಬಾಲಿವುಡ್ ನಟ ಅಜಯ್ ದೇವಗನ್ ಅವರಿಗೆ ರಾಜಸ್ಥಾನದ 40 ವರ್ಷದ ಕ್ಯಾನ್ಸರ್ ಪೀಡಿತ ವ್ಯಕ್ತಿ ನಾನಕರಾಮ್ ಮನವಿ ಮಾಡಿದ್ದಾರೆ.

ನಾನಕರಾಮ್ ಅವರು ಅಜಯ್ ದೇವಗನ್ ಅಭಿಮಾನಿಯಾಗಿದ್ದು, ನಟ ಈಗ ಕಾಣಿಸಿಕೊಳ್ಳುತ್ತಿರುವ ಜಾಹೀರಾತಿನ ಅದೇ ಉತ್ಪನ್ನವನ್ನು ಬಳಸಿದ್ದರು ಹಾಗೂ ಅದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆಯೆಂದು ಈಗ ಅವರಿಗೆ ಅರಿವಾಗಿದೆ ಎಂದು  ಕುಟುಂಬ ಹೇಳಿದೆ.

ನಟ ಮತ್ತವರ ಕುಟುಂಬ ಎಷ್ಟು ತಂಬಾಕು ಜಗಿಯುತ್ತದೆ ಎಂಬ ಮಾಹಿತಿ ಕೇಳಿರುವ ಹಾಗೂ ನಟನನ್ನು ಉದ್ದೇಶಿಸಿರುವ ಸುಮಾರು 1000 ಕರಪತ್ರಗಳನ್ನು ನಾನಕರಾಮ್ ಕುಟುಂಬ ಹಂಚಿದೆ ಹಾಗೂ ನಗರದ ಸುತ್ತಮುತ್ತಲಿನ ಸಂಗನೇರ್, ಜಗತ್ಪುರ ಮುಂತಾದೆಡೆಗಳಲ್ಲಿ ಸಾರ್ವಜನಿಕ ಗೋಡೆಗಳ ಮೇಲೆ ಅಂಟಿಸಿದೆ.

“ನನ್ನ ತಂದೆ ನಾನಕರಾಮ್ ಮೀನಾ ಕೆಲ ವರ್ಷಗಳ ಹಿಂದೆ ತಂಬಾಕು ಜಗಿಯಲು ಆರಂಭಿಸಿದ್ದು, ಅಜಯ್ ದೇವಗನ್ ಅವರು ಕಾಣಿಸಿರುವ ಜಾಹೀರಾತಿನಲ್ಲಿನ ಅದೇ ಬ್ರ್ಯಾಂಡ್ ಉತ್ಪನ್ನವನ್ನು ತಂದೆ ಬಳಸಿದ್ದರು. ನನ್ನ ತಂದೆ ದೇವಗನ್ ಅವರಿಂದ ಪ್ರಭಾವಿತರಾಗಿದ್ದರು. ಆದರೆ  ತಾವು ಕ್ಯಾನ್ಸರ್ ನಿಂದ ಬಳಲುತ್ತಿರುವ ಬಗ್ಗೆ ತಿಳಿದಾಗ ಅಷ್ಟೊಂದು ದೊಡ್ಡ ನಟ ಇಂತಹ ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಬಾರದು ಎಂದು ಅವರಂದುಕೊಂಡರು'' ಎಂದು ನಾನಕರಾಮ್ ಪುತ್ರ ದಿನೇಶ್ ಮೀನಾ ಹೇಳಿದ್ದಾರೆ.

ಮದ್ಯ, ತಂಬಾಕು, ಸಿಗರೇಟ್ ನಂತಹ ಹಾನಿಕಾರಕ ಉತ್ಪನ್ನಗಳ ಜಾಹೀರಾತುಗಳನ್ನು ನಟರು ಒಪ್ಪಿಕೊಳ್ಳಬಾರದು ಎಂದು ಕರಪತ್ರದಲ್ಲಿ ತಿಳಿಸಲಾಗಿದೆ.

ಇಬ್ಬರು ಮಕ್ಕಳ ತಂದೆಯಾಗಿರುವ ನಾನಕರಾಮ್ ಈ ಹಿಂದೆ ಟೀ ಸ್ಟಾಲ್ ನಡೆಸುತ್ತಿದ್ದರೂ, ಈಗ ಕ್ಯಾನ್ಸರ್ ನಿಂದಾಗಿ ಮಾತನಾಡುವ ಸ್ಥಿತಿಯಲ್ಲಿಲ್ಲ ಹಾಗೂ  ಜೈಪುರ್ ನ ಸಂಗನೇರ್ ಎಂಬಲ್ಲಿ ಮನೆಯಿಂದಲೇ ಹಾಲು ಮಾರಾಟ ಮಾಡಿ ಕುಟುಂಬವನ್ನು ಸಲಹುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News