×
Ad

ದಿಲ್ಲಿ ಸಚಿವ ಕೈಲಾಶ್ ಗೆಹ್ಲೋಟ್ ಸಹೋದರನ ಮನೆ, ಜಮೀನು ಜಪ್ತಿ ಮಾಡಿದ ಇಡಿ

Update: 2019-05-07 22:11 IST

ಹೊಸದಿಲ್ಲಿ,ಮೇ.7: ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ (ಎಫ್‌ಇಎಂಎ) ಮತ್ತು ಹವಾಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಹರೀಶ್ ಗೆಹ್ಲೋಟ್‌ಗೆ ಸೇರಿದ ದಿಲ್ಲಿಯ ವಸಂತ್ ಕುಂಜ್‌ನಲ್ಲಿರುವ ಮನೆ ಮತ್ತು ಹರ್ಯಾಣದಲ್ಲಿರುವ 1.48 ಕೋ.ರೂ ವೌಲ್ಯದ ಜಮೀನನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.

ಹರೀಶ್ ಗೆಹ್ಲೋಟ್ ದಿಲ್ಲಿ ಸಚಿವ ಕೈಲಾಶ್ ಗೆಹ್ಲೋಟ್ ಅವರ ಸಹೋದರನಾಗಿದ್ದಾರೆ. ಮನೆ ಮತ್ತು ಜಮೀನನ್ನು ಜಪ್ತಿ ಮಾಡಲು ಎಫ್‌ಇಎಂಎಯ 37ಎ ವಿಧಿಯಡಿಯಲ್ಲಿ ನೋಟಿಸ್ ಜಾರಿ ಮಾಡಿರುವುದಾಗಿ ಇಡಿ ತಿಳಿಸಿದೆ. ಹರೀಶ್ ಗೆಹ್ಲೋಟ್ ಹವಾಲಾ ಮೂಲಕ ಭಾರತದಿಂದ ದುಬೈಗೆ ಒಂದು ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ನೀಡಿದ ಮಾಹಿತಿ ಆಧಾರದಲ್ಲಿ ಗೆಹ್ಲೋಟ್ ವಿರುದ್ಧ ಎಫ್‌ಇಎಂಎದಡಿ ತನಿಖೆ ಆರಂಭಿಸಲಾಯಿತು.

ದುಬೈಯಲ್ಲಿ ಎರಡು ಫ್ಲಾಟ್‌ಗಳನ್ನು ಖರೀದಿಸಲು 2018ರಲ್ಲಿ ದಿಲ್ಲಿ ಮೂಲದ ಹವಾಲಾ ಮಧ್ಯವರ್ತಿಯ ಮೂಲಕ ಹಣ ವರ್ಗಾಯಿಸಲಾಗಿತ್ತು ಎಂದು ಇಡಿ ತಿಳಿಸಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಆದಾಯ ತೆರಿಗೆ ಇಲಾಖೆ ಆಪ್ ನಾಯಕ ಮತ್ತು ದಿಲ್ಲಿಯ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಅವರ ಕುಟುಂಬ ಮತ್ತು ಸಹವರ್ತಿಗಳಿಗೆ ಸಂಬಂಧಿಸಿದ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಹರೀಶ್ ಗೆಹ್ಲೋಟ್‌ಗೆ ಸೇರಿದ ಆಸ್ತಿಗಳ ಮೇಲೂ ದಾಳಿ ನಡೆಸಲಾಗಿತ್ತು. ಯಾವುದೇ ಅವ್ಯವಹಾರ ನಡೆಸಿರುವುದನ್ನು ಸಚಿವ ಕೈಲಾಶ್ ಗೆಹ್ಲೋಟ್ ನಿರಾಕರಿಸಿದ್ದರೆ, ಇದರ ಹಿಂದೆ ರಾಜಕೀಯ ವೈಷಮ್ಯ ಕೆಲಸ ಮಾಡಿದೆ ಎಂದು ಆಮ್ ಆದ್ಮಿ ಪಕ್ಷ ದೂರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News