×
Ad

ದಲಿತ ವ್ಯಕ್ತಿಗೆ ಬಲವಂತದಿಂದ ಮಲ ತಿನ್ನಿಸಿದ ದುಷ್ಕರ್ಮಿಗಳು

Update: 2019-05-08 21:22 IST

ಮದುರೈ,ಮೇ 8: ದಲಿತ ವ್ಯಕ್ತಿಯೋರ್ವನಿಗೆ ಬಲವಂತದಿಂದ ಮಲ ತಿನ್ನಿಸಿದ ಮತ್ತು ಆತನ ಮೈಮೇಲೆ ಮೂತ್ರ ವಿಸರ್ಜಿಸಿದ ಇನ್ನೊಂದು ಅಮಾನವೀಯ ಘಟನೆ ತಮಿಳುನಾಡಿನಲ್ಲಿ ನಡೆದಿರುವುದು ವರದಿಯಾಗಿದೆ. ಎ.28ರಂದು ಈ ಘಟನೆ ನಡೆದಿದ್ದು,ತಿರುವಾವೂರು ಜಿಲ್ಲೆಯ ಮನ್ನಾರಗುಡಿ ಸಮೀಪದ ತಿರುವಂದುತುರೈ ಗ್ರಾಮದ ನಿವಾಸಿ ಕೊಳ್ಳಿಮಲೈ(45) ದೌರ್ಜನ್ಯಕ್ಕೆ ಒಳಗಾಗಿರುವ ವ್ಯಕ್ತಿಯಾಗಿದ್ದಾರೆ.

ಪೊಲೀಸರು ಆರೋಪಿಗಳ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಕಠಿಣ ಕಲಮುಗಳ ಬದಲು ದುರ್ಬಲ ಕಲಮ್‌ಗಳಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಎಂದು ಕೊಳ್ಳಿಮಲೈ ಈಗ ಡಿಜಿಪಿ,ಮುಖ್ಯ ಕಾರ್ಯದರ್ಶಿ ಮತ್ತು ಹಿರಿಯ ಜಿಲ್ಲಾ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಆರೋಪಿಗಳ ಪೈಕಿ ಇಬ್ಬರನ್ನು ಸೋಮವಾರ ಬಂಧಿಸಿರುವುದಾಗಿ ತಿರುವಾವೂರು ಎಸ್‌ಪಿ ಎಂ.ದುರೈ ಅವರು ಹೇಳಿದ್ದಾರೆ. ಆದರೆ ಒಬ್ಬನೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಕೊಳ್ಳಿಮಲೈ ತಿಳಿಸಿದ್ದಾರೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಳ್ಳಿಮಲೈ, ಎ.28ರಂದು ಬೆಳಗಿನ ಜಾವ ತಾನು ತನ್ನ ಇಟ್ಟಿಗೆ ಭಟ್ಟಿಯಿಂದ ದ್ವಿಚಕ್ರ ವಾಹನದಲ್ಲಿ ಮನೆಗೆ ಮರಳುತ್ತಿದ್ದಾಗ ತನ್ನನ್ನು ತಡೆದ ಮೇಲ್ವರ್ಗದ ಕಲ್ಲಾರ್ ಸಮುದಾಯಕ್ಕೆ ಸೇರಿದ ಶಕ್ತಿವೇಲ್,ರಾಜೇಶ ಮತ್ತು ರಾಜಕುಮಾರ್ ದೊಣ್ಣೆಗಳಿಂದ ತನ್ನನ್ನು ಥಳಿಸಿದ್ದರು. ತನ್ನ ಕೈಗಳನ್ನು ಕಟ್ಟಿದ್ದ ಆರೋಪಿಗಳು ತನ್ನ ಜಾತಿಯನ್ನು ಉಲ್ಲೇಖಿಸಿ ನಿಂದಿಸಿದ್ದರು ಮತ್ತು ಮಾನವ ಮಲವನ್ನು ತನ್ನ ಬಾಯಿಯಲ್ಲಿ ತುರುಕಿದ್ದರು. ಅಲ್ಲದೆ ತನ್ನ ಮುಖದ ಮೇಲೆ ಮೂತ್ರ ವಿಸರ್ಜಿಸಿದ್ದರು ಎಂದು ತನ್ನ ಮೇಲಿನ ದೌರ್ಜನ್ಯವನ್ನು ಎಳೆಎಳೆಯಾಗಿ ವಿವರಿಸಿದರು.

ಅದೇ ದಿನ ತಾನು ತನ್ನ ಬಂಧುಗಳೊಂದಿಗೆ ಪೊಲೀಸ್ ಠಾಣೆಗೆ ತೆರಳಿದ್ದೆ. ಆದರೆ ಪೊಲೀಸರು ತನ್ನ ದೂರನ್ನು ಸ್ವೀಕರಿಸಲು ಒಪ್ಪಿರಲಿಲ್ಲ,ತಾವೆಲ್ಲ ಪ್ರತಿಭಟನೆ ನಡೆಸಿದ ನಂತರವಷ್ಟೇ ಪೊಲಿಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು ಎಂದು ಅವರು ಆರೋಪಿಸಿದರು.

ಮೂರು ವರ್ಷಗಳ ಹಿಂದೆ ದೇವಸ್ಥಾನದ ಉತ್ಸವದ ಸಂದರ್ಭ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿದ್ದಾಗ ತಾನು ಮಧ್ಯೆ ಪ್ರವೇಶಿಸಿದ್ದರಿಂದ ಆರೋಪಿಗಳು ತನ್ನ ವಿರುದ್ಧ ದ್ವೇಷ ಸಾಧಿಸುತ್ತಿದ್ದರು. ತಾನು ಅವರ ವಿರುದ್ಧ ದೂರು ದಾಖಲಿಸಿದ್ದೆ, ಬಳಿಕ ಅವರು ತನ್ನನ್ನು ಮತ್ತು ತನ್ನ ಕುಟುಂಬವನ್ನು ಗುರಿಯಾಗಿಸಿಕೊಂಡಿದ್ದರು ಎಂದರು. ಗ್ರಾಮಸ್ಥರು ಮೂವರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರಾದರೂ, ಓರ್ವನನ್ನು ಮಾತ್ರ ಬಂಧಿಸಲಾಗಿದೆ ಎಂದು ಕೊಳ್ಳಿಮಲೈ ತಿಳಿಸಿದರು.

ಕೊಳ್ಳಿಮಲೈ ಬೆನ್ನಿಗೆ ನಿಂತಿರುವ ಎನ್‌ಜಿಒ ಎವಿಡೆನ್ಸ್ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ದೂರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News