ಗಂಭೀರ್‌ರಿಂದ ಅಶ್ಲೀಲ ಕರಪತ್ರ ವಿತರಣೆ ಆರೋಪ: ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ಆಪ್ ಅಭ್ಯರ್ಥಿ

Update: 2019-05-09 14:31 GMT

ಹೊಸದಿಲ್ಲಿ, ಮೇ 9: ಪತ್ರಿಕಾಗೋಷ್ಠಿಯಲ್ಲಿ ತನ್ನ ವಿರುದ್ಧದ ‘‘ಅಶ್ಲೀಲ ಹಾಗೂ ಅವಹೇಳನಕಾರಿ’’ ಟೀಕೆಯನ್ನು ಒಳಗೊಂಡ ಕರಪತ್ರವನ್ನು ಓದಿದ ಸಂದರ್ಭ ಪೂರ್ವ ದಿಲ್ಲಿಯ ಆಪ್ ಅಭ್ಯರ್ಥಿ ಆಟಿಶಿ ಅತ್ತ ಘಟನೆ ಗುರುವಾರ ನಡೆದಿದೆ.

ತನ್ನ ಪ್ರತಿಸ್ಪರ್ಧಿ ಹಾಗೂ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಈ ಕರಪತ್ರವನ್ನು ವಿತರಣೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

‘‘ನಾನು ಒಂದೇ ಒಂದು ಪ್ರಶ್ನೆಯನ್ನು ಗೌತಮ್ ಗಂಭೀರ್ ಅವರ ಮುಂದಿರಿಸಲು ಬಯಸುತ್ತೇನೆ. ಓರ್ವ ಮಹಿಳೆಯ ವಿರುದ್ಧ ಅವರು ಹೀಗೆ ಮಾಡುವುದಾದರೆ, ಪೂರ್ವ ದಿಲ್ಲಿಯಲ್ಲಿರುವ ಲಕ್ಷಾಂತರ ಮಹಿಳೆಯ ಸ್ಥಿತಿ ಏನು’’ ಎಂದರು.

ಗೌತಮ್ ಗಂಭೀರ್ ಕಳೆದ ತಿಂಗಳು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಮೇ 12ರಂದು ನಡೆಯಲಿರುವ ದಿಲ್ಲಿ ಲೋಕಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ನ ಅರ್ವಿಂದರ್ ಸಿಂಗ್ ಲವ್ಲಿ ಅವರನ್ನು ಎದುರಿಸಲಿದ್ದಾರೆ.

ದಿಲ್ಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಆಟಿಶಿ ಕರಪತ್ರವನ್ನು ಓದುತ್ತಿದ್ದಂತೆ ಅತ್ತರು.

ಮಾಜಿ ಕ್ರಿಕೆಟಿಗರಾಗಿರುವ ಗಂಭೀರ್ ಅವರು ರಾಜಕೀಯ ಪ್ರವೇಶಿಸಿದ ಸಂದರ್ಭ ನಾನು ಸ್ವಾಗತಿಸಿದ್ದೆ ಎಂದು ಆಟಿಶಿ ಹೇಳಿದ್ದಾರೆ.

ಆರೋಪ ನಿರಾಕರಿಸಿದ ಗಂಭೀರ್

ತನ್ನ ರಾಜಕೀಯ ಪ್ರತಿಸ್ಪರ್ಧಿ ಆಟಿಶಿ ವಿರುದ್ಧ ‘‘ಅಶ್ಲೀಲ ಹಾಗೂ ಅವಹೇಳನಕಾರಿ’’ ಅಂಶಗಳನ್ನು ಒಳಗೊಂಡ ಕರಪತ್ರವನ್ನು ವಿತರಣೆ ಮಾಡಿದ್ದೇನೆ ಎಂಬ ಆಪ್‌ನ ಆರೋಪ ಅಸಂಬದ್ಧ ಎಂದು ಪೂರ್ವ ದಿಲ್ಲಿಯ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಹೇಳಿದ್ದಾರೆ. ‘‘ನಾನು ಈ ರೀತಿ ಮಾಡಿದ್ದೇನೆ ಎಂಬುದನ್ನು ಆಪ್ ಸಾಬೀತು ಮಾಡಿದರೆ, ಅಭ್ಯರ್ಥಿತನವನ್ನು ಹಿಂದೆ ತೆಗೆಯುತ್ತೇನೆ. ಇಲ್ಲದೇ ಇದ್ದರೆ ನೀವು ರಾಜಕೀಯದಿಂದ ನಿವೃತ್ತಿ ಪಡೆಯುತ್ತೀರಾ ?’’ ಎಂದು ಗಂಭೀರ್ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News