ಅಯೋಧ್ಯೆ ಪ್ರಕರಣ: ನಾಳೆ ಮಧ್ಯಸ್ಥಿಕೆ ಸಮಿತಿ ವರದಿ ಕೈಗೆತ್ತಿಕೊಳ್ಳಲಿರುವ ಸುಪ್ರೀಂ

Update: 2019-05-09 17:33 GMT

ಹೊಸದಿಲ್ಲಿ, ಮೇ 9: ಅಯೋಧ್ಯೆಯಲ್ಲಿ ಮಂದಿರ-ಮಸೀದಿ ವಿವಾದದ ಪರಿಹಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನದಂತೆ ರಚನೆಯಾಗಿದ್ದ ಮೂವರು ಸದಸ್ಯರ ಮಧ್ಯಸ್ಥಿಕೆ ಸಮಿತಿ ಸಲ್ಲಿಸಿರುವ ವರದಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ಕೈಗೆತ್ತಿಕೊಳ್ಳಲಿದೆ.

ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಾಧೀಶ ಎಫ್‌ಎಂ ಇಬ್ರಾಹಿಂ ಕಲೀಫುಲ್ಲಾ, ಆಧ್ಯಾತ್ಮಿಕ ಮುಖಂಡ ರವಿಶಂಕರ್ ಹಾಗೂ ಹಿರಿಯ ನ್ಯಾಯವಾದಿ ಶ್ರೀರಾಮ್ ಪಂಚು ಅವರು ಮಧ್ಯಸ್ಥಿಕೆ ಸಮಿತಿಯ ಸದಸ್ಯರಾಗಿದ್ದಾರೆ. ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದ ಎಲ್ಲಾ ಪಕ್ಷಗಳನ್ನು ಹಾಗೂ ಸಮಿತಿಯ ಸದಸ್ಯರನ್ನು ಭೇಟಿ ಮಾಡಿ ವಿವಾದಕ್ಕೆ ಪರಿಹಾರ ಹುಡುಕುವ ಜವಾಬ್ದಾರಿಯನ್ನು ಈ ಸಮಿತಿಗೆ ವಹಿಸಿದ್ದು ಎಂಟು ವಾರಗಳ ಕಾಲಾವಕಾಶ ನೀಡಲಾಗಿತ್ತು. ಮೇ 3ರಂದು ಗಡುವು ಮುಗಿದಿದ್ದು ಸಮಿತಿ ತನ್ನ ವರದಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದೆ. ಮೇ 10ರಂದು (ಶುಕ್ರವಾರ) ಉತ್ತರಪ್ರದೇಶದ ಅಯೋಧ್ಯ ಪಟ್ಟಣದ ಬಳಿಯ ಫೈಝಾಬಾದ್‌ನಲ್ಲಿ ಕ್ಯಾಮೆರಾ ಅಳವಡಿಸಿದ ಕೋಣೆಯಲ್ಲಿ ನ್ಯಾಯಾಲಯದ ಅಧಿವೇಶನ ನಡೆಯಲಿದೆ.

ಅಯೋಧ್ಯೆ ವಿವಾದಕ್ಕೆ ಮಾತುಕತೆಯ ಮೂಲಕ ಮಾತ್ರ ಪರಿಹಾರ ಸಾಧ್ಯ ಎಂದು ಕಳೆದ ಎರಡು ವರ್ಷದಿಂದ ಸುಪ್ರೀಂಕೋರ್ಟ್ ಹೇಳುತ್ತಾ ಬಂದಿದೆ. ಆದರೆ ಉತ್ತರಪ್ರದೇಶ ಸರಕಾರ ಸೇರಿದಂತೆ ಹಲವರು ಮಾತುಕತೆಗೆ ವಿರೋಧ ಸೂಚಿಸಿದ್ದಾರೆ. ಸುನ್ನಿ ವಕ್ಫ್ ಬೋರ್ಡ್ ಮತ್ತು ನಿರ್ಮೋಹಿ ಅಖಾಡಾ ಮಾತುಕತೆ ಮೂಲಕ ವಿವಾದ ಪರಿಹಾರಕ್ಕೆ ಒಲವು ತೋರಿದೆ. ಮಧ್ಯಸ್ಥಿಕೆಯ ಮೂಲಕ ಪರಿಹಾರ ಕಂಡುಕೊಳ್ಳುವ ಸೂತ್ರಕ್ಕೆ ಹಿಂದು ಸಮುದಾಯದ ಬಹುತೇಕ ಜನರು ವಿರೋಧ ವ್ಯಕ್ತಪಡಿಸುತ್ತಿದ್ದು ಈ ನಿರ್ಧಾರವನ್ನು ಜನತೆ ಒಪ್ಪುವುದಿಲ್ಲ ಎಂದು ಹಿಂದು ತಂಡಗಳು ಹೇಳುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News