ಜಾರಿ ನಿರ್ದೇಶನಾಲಯದ ಆರೋಪಗಳಿಗೆ ಝಾಕಿರ್ ನಾಯ್ಕ್ ಪ್ರತಿಕ್ರಿಯೆ

Update: 2019-05-10 16:17 GMT

ಮುಂಬೈ, ಮೇ 10: ತನಗೆ ಯಾವುದೇ ಆದಾಯ ಮೂಲವಿಲ್ಲ. ಆದರೂ ಕಳೆದ 6 ವರ್ಷಗಳಲ್ಲಿ 46 ಕೋಟಿ ರೂ.ಗೂ ಅಧಿಕ ಹಣವನ್ನು ಭಾರತದ ಬ್ಯಾಂಕ್‌ಗಳಲ್ಲಿರುವ ತನ್ನ ಖಾತೆಗೆ ವರ್ಗಾವಣೆ ಮಾಡಿದ್ದೇನೆ ಎಂಬ ಜಾರಿ ನಿರ್ದೇಶನಾಲಯದ ಹೇಳಿಕೆ ಸುಳ್ಳು ಎಂದು ಧಾರ್ಮಿಕ ವಿದ್ವಾಂಸ ಝಾಕಿರ್ ನಾಯ್ಕ್ ಹೇಳಿದ್ದಾರೆ.

 “ನಾನು ಹಲವು ವ್ಯವಹಾರ ನಡೆಸುತ್ತಿರುವುದು ಹಾಗೂ ಹಲವು ಆದಾಯ ಮೂಲಗಳನ್ನು ಹೊಂದಿರುವುದು ಸರಕಾರದ ತನಿಖಾ ಏಜೆನ್ಸಿಗಳೂ ಸೇರಿದಂತೆ ಎಲ್ಲರಿಗೂ ತಿಳಿದ ವಿಚಾರವಾಗಿದೆ. ಹಾಗಿದ್ದೂ ಜಾರಿ ನಿರ್ದೇಶನಾಲಯ ಯಾಕೆ ಸುಳ್ಳು ಹೇಳಿದೆ. ನಾನು ಸಲ್ಲಿಸಿರುವ ತೆರಿಗೆ ರಿಟರ್ನ್ಸ್(ಆದಾಯ ಘೋಷಣೆ) ನನ್ನ ಆದಾಯವನ್ನು ಪ್ರತಿಬಿಂಬಿಸುತ್ತದೆ” ಎಂದು ಅವರು ಹೇಳಿದ್ದಾರೆ.

 ಜಾರಿ ನಿರ್ದೇಶನಾಲಯದ ಅಧಿಕಾರಿಗಳ ರಾಜಕೀಯ ಬಾಸ್‌ಗಳು ನಿರ್ಧರಿಸಿರುವ ಗುರಿಯನ್ನು ಈಡೇರಿಸಲು ಬಹುಷಃ ಅವರು ಸುಳ್ಳು ಹೇಳುತ್ತಿರಬಹುದು ಎಂದು ಝಾಕಿರ್ ನಾಯ್ಕ್ ಹೇಳಿದ್ದಾರೆ. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಝಾಕಿರ್ ನಾಯ್ಕಾ ವಿರುದ್ಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಶೇಷ ನ್ಯಾಯಾಲಯದಲ್ಲಿ ಆರೋಪಪಟ್ಟಿ ದಾಖಲಿಸಿದ್ದಾರೆ. ಯಾವುದೇ ಆದಾಯ ಮೂಲಗಳಿಲ್ಲದಿದ್ದರೂ ಝಾಕಿರ್ ನಾಯ್ಕ್ ವಿಶ್ವದಾದ್ಯಂತ ಪ್ರಯಾಣಿಸುತ್ತಿದ್ದಾರೆ ಮತ್ತು ಭಾರತದ ಬ್ಯಾಂಕ್‌ನಲ್ಲಿರುವ ತನ್ನ ಖಾತೆಗೆ 49.20 ಕೋಟಿ ರೂ. ವರ್ಗಾಯಿಸಿದ್ದಾರೆ ಮತ್ತು ಅಕ್ರಮ ವ್ಯವಹಾರದ ಒಟ್ಟು ಆದಾಯ ಸುಮಾರು 193 ಕೋಟಿ ರೂ.ಗಳಾಗಿವೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News