ಪುಣೆಯ ಅಂತರ್ಜಾತಿ ಜೋಡಿ ಪ್ರಕರಣ: ಕುಟುಂಬ ಸದಸ್ಯರ ವಿರುದ್ಧ ಎಫ್‌ಐಆರ್
ಪುಣೆ,ಮೇ 10: ತಮ್ಮ ಪುತ್ರಿಯು ಅಂತರ್ಜಾತೀಯ ವಿವಾಹ ಮಾಡಿಕೊಳ್ಳಲು ಮುಂದಾಗಿರುವುದನ್ನು ವಿರೋಧಿಸಿ ಆಕೆಗೆ ಜೀವಬೆದರಿಕೆಯನ್ನೊಡ್ಡಿರುವ ಇಲ್ಲಿಯ ಶೆಟೆ ಕುಟುಂಬದ ಮೂವರ ವಿರುದ್ಧ ತಾಲಿಗಾಂವ ದಭಾಡೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕೆಳಜಾತಿಯ ಯುವಕ ಅಘ್ವಾಟೆ ಜೊತೆಗೆ ಸಂಬಂಧ ಹೊಂದಿರುವುದಕ್ಕಾಗಿ ತನ್ನ ಕುಟುಂಬವು ಹಿಂಸಾತ್ಮಕ ಪ್ರತೀಕಾರವನ್ನು ತೆಗೆದುಕೊಳ್ಳಬಹುದುಎಂದು ಭೀತಿ ವ್ಯಕ್ತಪಡಿಸಿ ಪ್ರಿಯಾಂಕಾ ಶೆಟೆ(19) ರಾಷ್ಟ್ರೀಯ ಮಹಿಳಾ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದ ನಂತರ ಈ ಎಫ್‌ಐಆರ್ ದಾಖಲಾಗಿದೆ.
ತನ್ನ ಕಕ್ಷಿದಾರಳ ಲಿಖಿತ ಕೋರಿಕೆಯ ಹೊರತಾಗಿಯೂ ಪೊಲೀಸರು ಆಕೆಗೆ ರಕ್ಷಣೆಯನ್ನು ಒದಗಿಸಿರಲಿಲ್ಲ ಎಂದು ಹೇಳಿದ ಪ್ರಿಯಾಂಕಾ ಪರ ವಕೀಲ ನಿತಿನ್ ಸತ್ಪುತೆ ಅವರು,ಇದು ಲತಾ ಸಿಂಗ್ ವಿರುದ್ಧ ಉತ್ತರ ಪ್ರದೇಶ ಸರಕಾರ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಅಂತರ್ಜಾತೀಯ ಮದುವೆಯಾಗಲು ನಿರ್ಧರಿಸಿದ್ದಕ್ಕಾಗಿ ಜೋಡಿಗೆ ಬೆದರಿಕೆ ಎದುರಾದ ಯಾವುದೇ ಸ್ಥಿತಿಯಲ್ಲಿ ಅವರ ಜೀವಗಳ ರಕ್ಷಣೆ ಸರಕಾರದ ಕರ್ತವ್ಯವಾಗಿದೆ. ಅವರ ಮದುವೆಯನ್ನು ಯಾರೂ ತಡೆಯುವಂತಿಲ್ಲ. ವಾಸ್ತವದಲ್ಲಿ ಸರಕಾರವು,ವಿಶೇಷವಾಗಿ ವರ ಕೆಳಜಾತಿಗೆ ಸೇರಿದ್ದರೆ ಅಂತರ್ಜಾತೀಯ ಮದುವೆಗೆ 50,000 ರೂ.ಗಳನ್ನು ನೀಡುತ್ತದೆ. ಆದರೆ ಈ ಜೋಡಿಯ ರಕ್ಷಣೆಗೆ ಪೊಲೀಸರು ಕನಿಷ್ಠ ಕಾಳಜಿಯನ್ನೂ ಹೊಂದಿಲ್ಲ,ಹೀಗಾಗಿ ನಾವು ನ್ಯಾಯಾಲಯದ ಮೆಟ್ಟಿಲನ್ನೇರಬೇಕಾಯಿತು ಎಂದು ತಿಳಿಸಿದರು.