ಮೋದಿಯನ್ನು ಮುಖ್ಯ ವಿಭಜಕ ಎಂದು ಕರೆದ ಲೇಖಕ ಓರ್ವ ಪಾಕಿಸ್ತಾನಿ: ಬಿಜೆಪಿ

Update: 2019-05-11 14:53 GMT

ಹೊಸದಿಲ್ಲಿ,ಮೇ.11: ಪ್ರಧಾನಿ ನರೇಂದ್ರ ಮೋದಿಯನ್ನು ಮುಖ್ಯ ವಿಭಜಕ ಎಂದು ವ್ಯಾಖ್ಯಾನಿಸಿರುವ ಟೈಮ್ಸ್ ಮ್ಯಾಗಝೀನ್ ವಿರುದ್ಧ ಹರಿಹಾಯ್ದಿರುವ ಬಿಜೆಪಿ ಈ ಲೇಖನವನ್ನು ಬರೆದ ಆತಿಶ್ ತಸೀರ್ ಓರ್ವ ಪಾಕಿಸ್ತಾನಿಯಾಗಿದ್ದಾರೆ ಮತ್ತು ಅವರ ಉದ್ದೇಶ ಮೋದಿಯ ಘನತೆಗೆ ಧಕ್ಕೆ ತರುವುದಾಗಿದೆ ಎಂದು ಕಿಡಿಕಾರಿದೆ.

ಆತಿಶ್ ತಸೀರ್ ಭಾರತೀಯ ಪತ್ರಕರ್ತೆ ತವ್ಲೀನ್ ಸಿಂಗ್ ಮತ್ತು ಪಾಕಿಸ್ತಾನಿ ರಾಜಕಾರಣಿ ಮತ್ತು ಉದ್ಯಮಿ ಸಲ್ಮಾನ್ ತಸೀರ್ ಅವರ ಪುತ್ರರಾಗಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ಈ ಲೇಖನದ ಲೇಖನ ಓರ್ವ ಪಾಕಿಸ್ತಾನಿಯಾಗಿದ್ದು ಓರ್ವ ಪಾಕಿಸ್ತಾನಿಯಿಂದ ಇದಕ್ಕಿಂತ ಹೆಚ್ಚಿನದೇನನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಈ ಲೇಖನವನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧವೂ ಪಾತ್ರ ಕಿಡಿಕಾರಿದ್ದಾರೆ. ಮೋದಿಯನ್ನು ಏಕೀಕರಣಕಾರಕ ಎಂದು ವ್ಯಾಖ್ಯಾನಿಸಿರುವ ಪಾತ್ರ, ಮೋದಿ ಸರಕಾರದ ಅನೇಕ ಕಲ್ಯಾಣ ಯೋಜನೆಗಳನ್ನು ಉಲ್ಲೇಖಿಸಿದ್ದು, ಮೋದಿಯವರ ಸುಧಾರಣಾ, ನಿರ್ವಹಣಾ ಮತ್ತು ಪರಿವರ್ತನಾ ಸಿದ್ಧಾಂತದಿಂದ ಹೊಸ ಭಾರತದತ್ತ ದೇಶ ಸಾಗುತ್ತಿದೆ ಎಂದು ತಿಳಿಸಿದ್ದಾರೆ. ತನ್ನ ಅಂತರ್‌ರಾಷ್ಟ್ರೀಯ ಆವೃತಿಯ ಮುಖಪುಟದಲ್ಲಿ ವಿವಾದಾತ್ಮಕ ತಲೆಬರಹದೊಂದಿಗೆ ನರೇಂದ್ರ ಮೋದಿಯವರ ಭಾವಚಿತ್ರವನ್ನು ಹಾಕಿರುವ ಟೈಮ್ಸ್ ಮ್ಯಾಗಝೀನ್ ಅದರ ಕೆಳಗೆಯೇ ಮೋದಿ ದ ರಿಫಾರ್ಮರ್ (ಸುಧಾರಕರಾಗಿ ಮೋದಿ) ಎಂಬ ಲೇಖನದ ತಲೆಬರಹವನ್ನೂ ಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News