×
Ad

ಮ.ಪ್ರ: ಪೊಲೀಸ್ ವಶದಲ್ಲಿದ್ದ ದಲಿತ ಯುವಕನ ಸಾವಿನ ಕುರಿತು ಸಿಬಿಐ ತನಿಖೆಗೆ ಕೇಂದ್ರ ಸಚಿವ ಗೆಹ್ಲೋಟ್ ಆಗ್ರಹ

Update: 2019-05-11 20:34 IST

ಹೊಸದಿಲ್ಲಿ,ಮೇ 11: ಕಳೆದ ತಿಂಗಳು ಮಧ್ಯಪ್ರದೇಶ ಪೊಲೀಸರ ವಶದಲ್ಲಿದ್ದ ದಲಿತ ಯುವಕನ ಸಾವಿನ ಕುರಿತು ಸಿಬಿಐ ತನಿಖೆಯನ್ನು ನಡೆಸುವಂತೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರಚಂದ್ ಗೆಹ್ಲೋಟ್ ಅವರು ಆಗ್ರಹಿಸಿದ್ದಾರೆ.

ಇಂದೋರನಲ್ಲಿ ಕಳ್ಳತನದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ಸಂಜು ಟಿಪಾನಿಯಾ (22) ಪೊಲೀಸರ ಚಿತ್ರಹಿಂಸೆಯಿಂದ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಸಂಜು ತಾನು ಅಮಾಯಕ ಎಂದು ಹೇಳಿಕೊಂಡಿದ್ದರೂ ಗಾಂಧಿನಗರ ಠಾಣೆಯ ಪೊಲೀಸರು ಕ್ರೂರ ಹಿಂಸೆ ನೀಡಿರುವುದು ತನ್ನ ಗಮನಕ್ಕೆ ಬಂದಿದೆ. ಪೊಲೀಸರು ಕ್ರೌರ್ಯದ ಎಲ್ಲ ಮಿತಿಗಳನ್ನೂ ದಾಟಿದ್ದಾರೆ. ಆತನ ಉಗುರುಗಳನ್ನು ಕೀಳಲಾಗಿತ್ತು,ಸುತ್ತಿಗೆಯಿಂದ ಕಾಲುಗಳನ್ನು ಜಜ್ಜಲಾಗಿತ್ತು ಮತ್ತು ವಿದ್ಯುತ್ ಆಘಾತವನ್ನು ನೀಡಲಾಗಿತ್ತು. ಪ್ರಜ್ಞೆ ಕಳೆದುಕೊಂಡಿದ್ದ ಆತನನ್ನು ಎಚ್ಚರಿಸಲು ಆತನ ಮೇಲೆ ನೀರು ಸುರಿದಿದ್ದು,ಎಚ್ಚೆತ್ತ ಆತನನ್ನು ಮತ್ತೆ ಥಳಿಸಿದ್ದರು. ಆತನಿಗೆ ಕುಡಿಯಲು ನೀರನ್ನೂ ನೀಡಿರಲಿಲ್ಲ. ಮೂರು ಗಂಟೆಗಳ ಕಾಲ ಆತ ಸಾವುಬದುಕಿನ ಹೋರಾಟ ನಡೆಸಿದ್ದ ಎಂದು ಗೆಹ್ಲೋಟ್ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ಅವರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

ಸಂಜುವಿನ ತಾಯಿಯನ್ನು ಠಾಣೆಗೆ ಕರೆಸಿದ್ದ ಪೊಲಿಸರು ಆಕೆಯನ್ನೂ ಥಳಿಸಿದ್ದು,ಆಕೆಯ ಕೈ ಮತ್ತು ಕಾಲಿನ ಮೂಳೆಗಳು ಮುರಿದಿವೆ. ಸಂಜುವಿನ ಸೋದರನನ್ನೂ ಗ್ರಾಮಸ್ಥರ ಎದುರೇ ಥಳಿಸಿದ್ದು,ಆತ ಗಾಯಗೊಂಡಿದ್ದಾನೆ ಎಂದಿರುವ ಗೆಹ್ಲೋಟ್,ಬಲಿಪಶುವಿನ ಕುಟುಂಬಕ್ಕೆ ನ್ಯಾಯ ದೊರಕಿಸುವುದು ಮುಖ್ಯವಾಗಿದೆ. ವಿಷಯದ ಗಂಭೀರತೆಯ ಹಿನ್ನೆಲೆಯಲ್ಲಿ ಸಿಬಿಐ ತನಿಖೆಗೆ ಆದೇಶಿಸಿ ಎಂದು ಆಗ್ರಹಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಗಾಂಧಿನಗರ ಠಾಣಾಧಿಕಾರಿ ಮತ್ತು ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ ಎಂದು ಎಸ್‌ಪಿ ಸೂರಜ್ ವರ್ಮಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News