ಮೊದಲ ಅಪಾಚೆ ಗಾರ್ಡಿಯನ್ ಅಟ್ಯಾಕ್ ಹೆಲಿಕಾಪ್ಟರ್ ಪಡೆದ ಭಾರತೀಯ ವಾಯು ಪಡೆ
ಹೊಸದಿಲ್ಲಿ, ಮೇ 11: ಬಹು ಕೋಟಿ ಡಾಲರ್ ಹೆಲಿಕಾಪ್ಟರ್ ಒಪ್ಪಂದ ನಡೆದು ಮೂರುವರೆ ವರ್ಷಗಳ ಬಳಿಕ ಅಮೇರಿಕದ ಅಂತರಿಕ್ಷ ಯಾನದ ಪ್ರಮುಖ ಸಂಸ್ಥೆಯಾಗಿರುವ ಬೋಯಿಂಗ್ ತನ್ನ ಮೊದಲ ಅಪಾಚೆ ಗಾರ್ಡಿಯನ್ ಅಟ್ಯಾಕ್ ಹೆಲಿಕಾಪ್ಟರ್‌ಗಳನ್ನು ಭಾರತೀಯ ವಾಯು ಪಡೆಗೆ ಹಸ್ತಾಂತರಿಸಿದೆ.
ವಾಯು ಪಡೆಯ ಕಾಪ್ಟರ್‌ಗಳ ಗುಂಪಿನ ಆಧುನಿಕೀಕರಣದಲ್ಲಿ ಎಚ್-6ಇ (1) ಅಪಾಚೆ ಹೆಲಿಕಾಪ್ಟರ್ ಪ್ರಮುಖ ಹೆಜ್ಜೆಯಾಗಲಿದೆ ಎಂದು ಐಎಎಫ್‌ನ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಭಾರತೀಯ ವಾಯು ಪಡೆಯ ಅಗತ್ಯಕ್ಕೆ ಸೂಕ್ತವೆನಿಸುವಂತೆ ಇದನ್ನು ಪರಿವರ್ತಿಸಲಾಗಿದೆ ಹಾಗೂ ಇದು ಪರ್ವತ ಪ್ರದೇಶದಲ್ಲಿ ಗಮನಾರ್ಹ ಸಾಮರ್ಥ್ಯ ಹೊಂದಿರುತ್ತದೆ ಎಂದು ಅವರು ಹೇಳಿದ್ದಾರೆ.
ಅರಿರೆನಾದ ಮೆಸಾದಲ್ಲಿರುವ ಬೋಯಿಂಗ್ ನಿರ್ಮಾಣ ಸಂಸ್ಥೆಯಲ್ಲಿ ಮೊದಲ ಎಎಚ್-64ಎ-ಅಪಾಚೆ ಗಾರ್ಡಿಯನ್ ಹೆಲಿಕಾಪ್ಟರ್ ಅನ್ನು ಔಪಚಾರಿಕವಾಗಿ ವರ್ಗಾಯಿಸಲಾಯಿತು ಎಂದು ಐಎಎಫ್‌ನ ವಕ್ತಾರ ಅನುಪಮ್ ಬ್ಯಾನರ್ಜಿ ಹೇಳಿದ್ದಾರೆ.
ಎಎಚ್-64 ಅಪಾಚೆ ಬಹೋದ್ದೇಶದ ದಾಳಿ ಹೆಲಿಕಾಪ್ಟರ್ ಎಂದು ಅವರು ತಿಳಿಸಿದ್ದಾರೆ.
22 ಅಪಾಚೆ ಹೆಲಿಕಾಪ್ಟರ್‌ಗಳಿಗಾಗಿ 2015 ಸೆಪ್ಟಂಬರ್‌ನಲ್ಲಿ ಅಮೆರಿಕ ಸರಕಾರ ಹಾಗೂ ಬೋಯಿಂಗ್ ಲಿಮಿಟೆಡ್‌ನೊಂದಿಗೆ ಭಾರತೀಯ ವಾಯು ಪಡೆ ಬಹುಕೋಟಿ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ಹೆಲಿಕಾಪ್ಟರ್‌ನ ಮೊದಲ ಬ್ಯಾಚ್ ಅನ್ನು ಈ ವರ್ಷ ಜುಲೈಯಲ್ಲಿ ಭಾರತಕ್ಕೆ ಹಡಗಿನಲ್ಲಿ ಕಳುಹಿಸಲು ಸಮಯ ನಿಗದಿಪಡಿಸಲಾಗಿದೆ. ಆಯ್ದ ವಿಮಾನ ಸಿಬ್ಬಂದಿ ಹಾಗೂ ಇತರ ಸಿಬ್ಬಂದಿ ಅಮೆರಿಕದ ಅಲಬಾಮಾದ ಫೋರ್ಟ್ ರಕ್ಕರ್‌ನಲ್ಲಿರುವ ಸೇನಾ ನೆಲೆಯಲ್ಲಿ ತರಬೇತಿ ಪಡೆಯಲಿದ್ದಾರೆ. ತರಬೇತಿ ಪಡೆದ ಸಿಬ್ಬಂದಿ ಭಾರತೀಯ ವಾಯು ಪಡೆಯಲ್ಲಿ ಅಪಾಚೆ ಹೆಲಿಕಾಪ್ಟರ್ ಅನ್ನು ಚಲಾಯಿಸಲಿದ್ದಾರೆ ಎಂದು ಐಎಎಫ್‌ನ ಹೇಳಿಕೆ ತಿಳಿಸಿದೆ.