ಐದು ವರ್ಷಗಳಲ್ಲಿ ಪ್ರಧಾನಿ ಮೋದಿ ಮತ್ತು ಸಚಿವರ ದೇಶ-ವಿದೇಶಗಳ ಪ್ರವಾಸಕ್ಕೆ 393 ಕೋ.ರೂ ವೆಚ್ಚ

Update: 2019-05-11 15:10 GMT

ಮುಂಬೈ, ಮೇ 11: ಕಳೆದ ಐದು ಹಣಕಾಸು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಂಪುಟದ ಸಚಿವರು ದೇಶದಲ್ಲಿ ಮತ್ತು ವಿದೇಶ ಪ್ರವಾಸಗಳಿಗಾಗಿ 393 ಕೋ.ರೂ.ಗಳನ್ನು ವ್ಯಯಿಸಿದ್ದಾರೆ ಎನ್ನುವುದನ್ನು ಆರ್‌ಟಿಐ ಉತ್ತರವೊಂದು ಬಹಿರಂಗಗೊಳಿಸಿದೆ.

ಮೇ,2014ರಿಂದ ಮೋದಿ ಮತ್ತು ಅವರ ಸಚಿವರು ದೇಶ ಮತ್ತು ವಿದೇಶ ಪ್ರವಾಸಗಳಿಗೆ ಮಾಡಿರುವ ವೆಚ್ಚಗಳ ವಿವರ ಕೋರಿ ನಗರದ ಆರ್‌ಟಿಐ ಕಾರ್ಯಕರ್ತ ಅನಿಲ ಗಲಗಲಿ ಅವರು ಪ್ರಧಾನಿ ಕಚೇರಿಗೆ ಆರ್‌ಟಿಐ ಅರ್ಜಿಯನ್ನು ಸಲ್ಲಿಸಿದ್ದರು.

2018,ಡಿಸೆಂಬರ್‌ನಲ್ಲಿ ರಾಜ್ಯಸಭೆಯಲ್ಲಿ ವಿದೇಶ ಪ್ರವಾಸ ವೆಚ್ಚಗಳ ಕುರಿತು ಪ್ರಶ್ನೆಗಳಿಗೆ ಉತ್ತರಿಸಿದ್ದ ಮೋದಿ ಸರಕಾರವು,2014,ಜೂನ್‌ನಿಂದ ವಿದೇಶಗಳಿಗೆ ಮೋದಿಯವರ ಭೇಟಿ ಸಂದರ್ಭಗಳಲ್ಲಿ ಬಾಡಿಗೆ ವಿಮಾನಗಳು,ಅವುಗಳ ನಿರ್ವಹಣೆ ಮತ್ತು ಹಾಟ್‌ಲೈನ್ ಸೌಲಭ್ಯಗಳಿಗಾಗಿ 2021 ಕೋ.ರೂ.ಗೂ ಅಧಿಕ ವೆಚ್ಚವಾಗಿದೆ ಎಂದು ತಿಳಿಸಿತ್ತು.

 ಗಲಗಲಿಯವರು ಸ್ವೀಕರಿಸಿರುವ ಆರ್‌ಟಿಐ ಉತ್ತರದಲ್ಲಿ ಪ್ರಧಾನಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳ ವಿದೇಶ ಪ್ರಯಾಣಗಳಿಗೆ 263 ಕೋ.ರೂ. ಮತ್ತು ದೇಶದಲ್ಲಿ ಪ್ರವಾಸಗಳಿಗೆ 48 ಕೋ.ರೂ.ಗಳನ್ನು ವ್ಯಯಿಸಲಾಗಿದೆ ಎಂದು ತಿಳಿಸಲಾಗಿದೆ. ಸಹಾಯಕ ಸಚಿವರ ವಿದೇಶ ಪ್ರವಾಸಗಳಿಗೆ 29 ಕೋ.ರೂ. ಮತ್ತು ದೇಶಿಯ ಪ್ರವಾಸಗಳಿಗೆ 53 ಕೋ.ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದೂ ಅದು ಹೇಳಿದೆ.

ಈ ಪೈಕಿ ಹೆಚ್ಚಿನ ವೆಚ್ಚ (88 ಕೋ.ರೂ.)ವನ್ನು 2014-15ನೇ ಸಾಲಿನಲ್ಲಿ ಮಾಡಲಾಗಿದೆ.

ಪ್ರಧಾನಿ ಕಚೇರಿಯು ನೀಡಿರುವ ಮಾಹಿತಿಯು ಪೂರ್ಣ ಚಿತ್ರಣವನ್ನು ನೀಡುವುದಿಲ್ಲ ಮತ್ತು ಪಾರದರ್ಶಕತೆಯ ಕೊರತೆಯಿದೆ. ಸರಕಾರವು ಪ್ರತಿಯೊಬ್ಬ ಸಚಿವರ ಎಲ್ಲ ದಾಖಲೆಗಳು,ಅವರ ಪ್ರಯಾಣಗಳ ಸಂಖ್ಯೆ ಮತ್ತು ಅವರ ವೆಚ್ಚಗಳ ವಿವರಗಳನ್ನು ಇಡಬೇಕು ಮತ್ತು ಈ ಮಾಹಿತಿಗಳು ಸಾರ್ವಜನಿಕರಿಗೆ ಲಭ್ಯವಾಗಬೇಕು ಎಂದು ಗಲಗಲಿ ಹೇಳಿದರು.

ಪ್ರಧಾನಿ ಕಚೆರಿಯ ವೆಬ್‌ಸೈಟ್‌ನಲ್ಲಿರುವ ಮಾಹಿತಿಯಂತೆ ಮೋದಿ ಅವರು ಮೇ 2014ರಿಂದ ಫೆ.22,2019ರವರೆಗೆ 49 ವಿದೇಶ ಪ್ರಯಾಣಗಳನ್ನು ಕೈಗೊಂಡಿದ್ದಾರೆ. ಈ ಪ್ರಯಾಣಗಳಿಗೆ ಸಂಬಂಧಿಸಿದಂತೆ ಬಾಡಿಗೆ ವಿಮಾನಗಳ ವೆಚ್ಚಗಳನ್ನೂ ಪಟ್ಟಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News