ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಕಾಮಾಲೆ ಪೀಡಿತ ಸಿಬ್ಬಂದಿ ಆಸ್ಪತ್ರೆಯಲ್ಲಿ ಸಾವು

Update: 2019-05-11 16:39 GMT

ಮುಂಬೈ, ಮೇ 11: ಮಹಾರಾಷ್ಟ್ರ ಸರಕಾರದ ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯ ಮಹಿಳಾ ಸಿಬ್ಬಂದಿಯೋರ್ವರು ಶನಿವಾರ ನಗರದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಪ್ರೀತಿ ಧುರ್ವೆ ಕಾಮಾಲೆಯಿಂದ ಪೀಡಿತರಾಗಿದ್ದರೂ ಆಕೆಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು ಎಂದು ಕುಟುಂಬ ವರ್ಗ ಆಪಾದಿಸಿದೆ.

ಅನಾರೋಗ್ಯ ಪೀಡಿತರಾಗಿರುವ ಬಗ್ಗೆ ಧುರ್ವೆಯವರು ಅರ್ಜಿ ಸಲ್ಲಿಸಿರಲಿಲ್ಲ. ಅವರು ಕರ್ತವ್ಯ ನಿರ್ವಹಣೆ ವೇಳೆ ಮೃತಪಟ್ಟಿದ್ದರಿಂದ ಕುಟುಂಬಕ್ಕೆ 15 ಲ.ರೂ.ಗಳ ಪರಿಹಾರ ನೀಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮುಂಬೈ ಜಿಲ್ಲಾಧಿಕಾರಿ ಶಿವಾಜಿರಾವ ಜೊಂಧಾಲೆ ತಿಳಿಸಿದರು.

 ಧುರ್ವೆ ಅಸ್ವಸ್ಥಗೊಂಡಾಗ ಸ್ಥಳದಲ್ಲಿದ್ದ ಅಧಿಕಾರಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದರು. ಆದರೆ ಅವರು ಮನೆಗೆ ತೆರಳಿದ್ದರು ಎಂದರು.

ಧುರ್ವೆ ಕಾಮಾಲೆ ಪೀಡಿತರಾಗಿದ್ದಾರೆ ಎನ್ನುವುದು ಎ.18ರಂದು ಪತ್ತೆಯಾಗಿತ್ತು. ತನ್ನನ್ನು ನಿಯೋಜಿಸಲಾಗಿದ್ದ ಮತಗಟ್ಟೆ ಅಧಿಕಾರಿಗೆ ಅವರು ಈ ವಿಷಯವನ್ನು ತಿಳಿಸಿದ್ದರು. ಆದರೆ ಅವರು ಆಕೆಯ ಮನವಿಯನ್ನು ಪುರಸ್ಕರಿಸಲಿಲ್ಲ ಎಂದು ಕುಟುಂಬವು ಹೇಳಿದೆ. ಎ.29ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News