ಸೂಜಿದಾರ: ಬದುಕು ಸೂಜಿ; ಮನಸು ದಾರ

Update: 2019-05-11 18:31 GMT

ರಂಗಭೂಮಿ ಕಲಾವಿದರೇ ಹೆಚ್ಚು ಪಾಲ್ಗೊಂಡಿರುವ ಚಿತ್ರ ಎನ್ನುವುದರ ಜೊತೆಗೆ ಯಶಸ್ವಿ ನಾಯಕಿ ಹರಿಪ್ರಿಯಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ ಎಂಬ ಕಾರಣಗಳಿಂದ ಗಮನ ಸೆಳೆದಂತಹ ಚಿತ್ರ ಸೂಜಿದಾರ. ಸಿನೆಮಾದಲ್ಲಿ ಕೂಡ ರಂಗಭೂಮಿ ಶೈಲಿಯನ್ನು ಉಳಿಸಿಕೊಂಡೇ ಪ್ರಯೋಗಾತ್ಮಕ ಎನ್ನಬಹುದಾದ ಚಿತ್ರ ಮಾಡಿದ್ದಾರೆ ನಿರ್ದೇಶಕ ಮೌನೇಶ್ ಬಡಿಗೇರ್.

ಚಿತ್ರದ ನಾಯಕ ಶಂಕರ ಓಡುತ್ತಲೇ ಇರುತ್ತಾನೆ. ಅದು ಭಯದ ಓಟ. ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾದೀತೇನೋ ಎನ್ನುವ ಓಟ. ಆದರೆ ಆತನ ಓಟಕ್ಕೆ ಕಾರಣವಾದ ಘಟನೆ ರೋಚಕ. ಕರಾವಳಿಯಲ್ಲಿ ನಡೆದಂತಹ ಘಟನೆ. ಶಂಕರನ ನಿಜವಾದ ಹೆಸರು ಶಬೀರ್. ಆತ ಹಿಂದೂ ಹುಡುಗಿಯೊಬ್ಬಳನ್ನು ಪ್ರೀತಿಸಿರುತ್ತಾನೆ. ಆಕೆಯೂ ಆತನನ್ನು ಪ್ರೇಮಿಸಿರುತ್ತಾಳೆ. ಆದರೆ ಇದರ ನಡುವೆ ಬೇರೊಂದು ಹುಡುಗಿಗೆ ಮಾನ ಹಾನಿ ಮಾಡಿದ ಘಟನೆಯಲ್ಲಿ ಶಬೀರ್ ಸಿಕ್ಕಿಕೊಳ್ಳುತ್ತಾನೆ. ಆದರೆ ಅದು ಸುಳ್ಳು ಆರೋಪ ಎನ್ನುವುದನ್ನು ಸಾಬೀತು ಪಡಿಸಲಾಗದ ಶಬೀರ್ ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ. ಹಾಗೆ ಶುರುವಾದ ಓಟಕ್ಕೆ ಕ್ಲೈಮ್ಯಾಕ್ಸ್ ನಲ್ಲಿ ಒಂದು ಅರ್ಥ ಸಿಗುತ್ತದೆ. ಆದರೆ ಅಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರಕುತ್ತದೆ ಎಂದು ಹೇಳಲಾಗದು. ಆದರೆ ತಾರ್ಕಿಕವಾದ ಅಂತ್ಯ ಖಂಡಿತವಾಗಿಯೂ ಇದೆ.

ಕರಾವಳಿಗೆ ಸಂಬಂಧಿಸಿದಂತೆ ನೈಜವೆನಿಸುವ ಘಟನೆಗಳ ಹಿನ್ನೆಲೆಯಲ್ಲಿ ಮೂಡಿ ಬಂದಿರುವ ಚಿತ್ರ ಇದು. ಶಂಕರ್ ಮತ್ತು ಶಬೀರ್ ಎಂಬ ಎರಡು ಹೆಸರುಗಳಲ್ಲಿ ಚಿತ್ರದ ಕೇಂದ್ರ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿರುವವರು ಯಶ್ ಶೆಟ್ಟಿ. ಇದುವರೆಗೆ ಸೈಕೋ ಮಾದರಿಯ ಖಳನಾಗಿ ಗಮನ ಸೆಳೆದಿದ್ದ ಅವರು, ಚಿತ್ರದ ಮೂಲಕ ಒಬ್ಬ ಅಮಾಯಕ ಯುವಕನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹರಿಪ್ರಿಯಾ ಸಿನೆಮಾ ಎಂದು ಸುದ್ದಿಯಾಗಿದ್ದರೂ ಕೂಡ, ಚಿತ್ರದ ಕತೆ ನಾಯಕನ ಬದುಕನ್ನೇ ಪ್ರಮುಖವಾಗಿ ಹೇಳಿರುವುದು ನಿಜ. ಆದರೆ ಆತನ ಒಟ್ಟು ಸಮಸ್ಯೆಗಳ ಪರಿಹಾರವನ್ನು ಪದ್ಮಾ ಎನ್ನುವ ಪಾತ್ರದ ಮೂಲಕ ಹರಿಪ್ರಿಯಾ ಕೈಗಳಲ್ಲಿ ಇರಿಸಲಾಗಿದೆ. ನಿನ್ನೆಗಳ ನೆನಪಿರದ ಪದ್ಮಾ ನಾಳೆಗಳ ಕನಸುಗಳ ಮೂಲಕ ಹೇಗೆ ಇಂದಿನವರ ಕಣ್ಣಲ್ಲಿ ಕೆಟ್ಟವಳಾಗುತ್ತಾಳೆ ಎನ್ನುವುದನ್ನು ನಿರ್ದೇಶಕರು ಸೊಗಸಾಗಿ ತೋರಿಸಿದ್ದಾರೆ.

ಪದ್ಮಾಳ ಪತಿಯಾಗಿ ಸುಚೇಂದ್ರ ಪ್ರಸಾದ್ ನಟಿಸಿದ್ದಾರೆ. ಅವರು ಮತ್ತು ಚೈತ್ರಾ ಕೋಟೂರ್ ರಂಗಭೂಮಿ ಕಲಾವಿದರಾಗಿ ಪರದೆಯ ಮೇಲೆ ಹೆಚ್ಚು ಹೊತ್ತು ಕಾಣಿಸಿಕೊಳ್ಳಲು ಬಹುಶಃ ಬಡಿಗೇರ್ ಅವರ ರಂಗಪ್ರೀತಿಯೇ ಕಾರಣವಿರಬಹುದು. ರಂಗ ಮತ್ತು ಜೀವನದ ರಂಗುಗಳನ್ನು ಸಮನ್ವಯಗೊಳಿಸುವಂತೆ ಕೆಲವು ದೃಶ್ಯಗಳನ್ನು ಹೊಂದಿಸಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಚೈತ್ರಾ ಅವರ ನಿರ್ವಹಣೆಯ ರಾಜಿ ಮತ್ತು ಆಕೆಯ ಜೋಡಿಯ ಪಾತ್ರದ ಅನಗತ್ಯ ವೆನಿಸುವ ಕೆಲವೊಂದು ದೀರ್ಘಾವಧಿಯ ದೃಶ್ಯಗಳಿಗೆ ಕಡಿವಾಣ ಹಾಕಿದ್ದರೆ ಮುಖ್ಯ ಕತೆ ಇನ್ನಷ್ಟು ಆಸಕ್ತಿಯಿಂದ ನೋಡಿಸಿಕೊಂಡು ಹೋಗುತ್ತಿತ್ತು. ಇನ್ನು ಉಳಿದ ಹಾಗೆ ಪ್ರೊಫೆಸರ್ ಪಾತ್ರದಲ್ಲಿ ಅಚ್ಯುತ್ ಕುಮಾರ್ ಎಂದಿನಂತೆ ಅಮೋಘ ಅಭಿನಯ ನೀಡಿದ್ದಾರೆ.

ಭಾಸ್ಕರ ಮಣಿಪಾಲ, ‘ಒಂದಲ್ಲ ಎರಡಲ್ಲ’ ಖ್ಯಾತಿಯ ಆನಂದ್ ಸೇರಿದಂತೆ ಒಂದೆರಡು ದೃಶ್ಯಗಳಲ್ಲಿ ಕಾಣಿಸಿಕೊಂಡ ರಂಗಭೂಮಿ ಕಲಾವಿದರು ಕೂಡ ನೆನಪಲ್ಲಿ ಉಳಿಯುವಂತೆ ನಟಿಸಿದ್ದಾರೆ. ಖುದ್ದು ನಿರ್ಮಾಪಕ ಅಭಿಜಿತ್ ಕೋಟೆಗಾರ್ ಕೂಡ ಈ ಪ್ರಶಂಸೆಗೆ ಪಾತ್ರರಾಗುತ್ತಾರೆ. ಚಿತ್ರಕ್ಕೆ ಪ್ರತ್ಯೇಕವಾಗಿ ಕಾಸ್ಟ್ಯೂಮ್ ಡಿಸೈನರ್ ಇಲ್ಲ ಎಂದು ಹೇಳಿಕೊಂಡಿದ್ದರೂ ಒಟ್ಟು ವಸ್ತ್ರ ವಿನ್ಯಾಸ ಗಮನ ಸೆಳೆಯುತ್ತದೆ.

ಶಿಸ್ತು, ನಿಯಮಗಳ ಹೆಸರಿನಲ್ಲಿ ಮನೆಯ ಮಾನ ಕಾಪಾಡಲಾ ಗದೆ ಊರಿಗೆ ನಿಯಮ ಹೇರಲು ಪ್ರಯತ್ನಿಸುವ ಅಚ್ಯುತ್ ಕುಮಾರ್ ಅವರ ಪಾತ್ರ ಮತ್ತು ರಂಗಭೂಮಿಯ ರಾಮ ಹೇಗೆ ನಿಜ ಬದುಕಿನ ರಾವಣನಾಗಿದ್ದಾನೆ ಎಂದು ಸಾರುವ ಸುಚೇಂದ್ರ ಪ್ರಸಾದ್ ಪಾತ್ರಗಳು ಒಟ್ಟು ಚಿತ್ರದ ಭಾವವನ್ನು ಹಿಡಿದಿಡುವಲ್ಲಿ ಯಸ್ವಿಯಾಗಿದೆ. ಸಾಮಾನ್ಯ ಪ್ರೇಕ್ಷಕರಿಗೆ ಚಿತ್ರದ ಅಂತ್ಯ ಮತ್ತೊಂದು ಭಾಗಕ್ಕೆ ಮುನ್ನುಡಿಯಾಗಿ ಕಾಣಬಹುದು. ಆದರೆ ಬದುಕಿನ ಓಟ ನಿರಂತರ ಎಂದು ಅರ್ಥ ಮಾಡಿಕೊಂಡವರಿಗೆ ಸೂಜಿದಾರದಲ್ಲೇ ಹರಿದ ಮನಸ್ಸು ಹೊಲಿಸಿಕೊಂಡ ತೃಪ್ತಿಯನ್ನು ಚಿತ್ರ ನೀಡಬಲ್ಲದು.

ತಾರಾಗಣ: ಯಶ್ ಶೆಟ್ಟಿ, ಹರಿಪ್ರಿಯಾ
ನಿರ್ದೇಶನ: ಮೌನೇಶ್ ಬಡಿಗೇರ್
ನಿರ್ಮಾಣ: ಅಭಿಜಿತ್ ಮತ್ತು ಸಚೀಂದ್ರನಾಥ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News