ಮಾಸ್ಟರ್ ಹಿರಣ್ಣಯ್ಯ

Update: 2019-05-12 07:12 GMT

ಒಂದು ಕಾಲಕ್ಕೆ ಮಾಸ್ಟರ್ ಹಿರಣ್ಣಯ್ಯನವರ ನಾಟಕಗಳೇ ವಿರೋಧ ಪಕ್ಷದ ಕಾರ್ಯವನ್ನು ನಿರ್ವಹಿಸುತ್ತಿದ್ದವು ಎಂದು ಹೇಳಲಾಗುತ್ತಿತ್ತು. ಲಂಚ,ರುಷುವತ್ತು ಮತ್ತು ಭ್ರಷ್ಟಾಚಾರಗಳು, ರಾಜಕೀಯ ಅನಾಚಾರಗಳು ಇವಿಷ್ಟೇ ಮಾಸ್ಟರ್ ಹಿರಣ್ಣಯ್ಯನವರ ರಂಗಭೂಮಿಯ ಕಾಳಜಿಯಾಗಿದ್ದು, ತಮ್ಮ ಕಾಲದ ಇತರ ಸಾಮಾಜಿಕ ಚಳವಳಿಗಳು ಅವರನ್ನು ಕಾಡಿದಂತಿಲ್ಲ ಎಂಬ ಟೀಕೆಗಳೂ ಕೇಳಿ ಬಂದಿರುವುದುಂಟು. ಇದರಲ್ಲಿ ಹುರುಳಿಲ್ಲದೇ ಇಲ್ಲ. ಆದರೆ ಸಾಮಾನ್ಯ ಪ್ರೇಕ್ಷಕರೇ ಅವರ ಗಮನಬಿಂದುವಾಗಿದ್ದುದರಿಂದ ಆ ಪ್ರೇಕ್ಷಕವರ್ಗವನ್ನು ತೃಪ್ತಿಪಡಿಸುವುದಕ್ಕೇ ಅವರ ಪ್ರತಿಭೆ-ಸಾಮರ್ಥ್ಯಗಳು ಮುಡಿಪಾಗಿದ್ದವು.


ಕನ್ನಡ ವೃತ್ತಿರಂಗಭೂಮಿಯ ಝಗಮಗಿಸುವ ವೈಭವ ಜನಮಾನಸದಲ್ಲಿ ಚಿರಸ್ಥಾಯಿಯಾಗಿ, ಅದು ‘ರಂಗ’ದಿಂದ ನಿಷ್ಕ್ರಮಿಸುತ್ತಿದ್ದ ಕಾಲಘಟ್ಟದಲ್ಲಿ(1960-1970) ನಾವು ಕಂಡ ವೃತ್ತಿ ರಂಗಭೂಮಿಯ ಪ್ರಚಂಡ ಪ್ರತಿಭೆ, ಇದೇ 2ರಂದು ನಮ್ಮನ್ನು ಅಗಲಿದ ಮಾಸ್ಟರ್ ಹಿರಣ್ಣಯ್ಯನವರು. ಹಿರಣ್ಣಯ್ಯನವರ ತಂದೆ ಕೆ. ಹಿರಣ್ಣಯ್ಯನವರು ವೃತ್ತಿರಂಗಭೂಮಿಯ ಅತಿರಥ ಮಹಾರಥರಾದ ಗುಬ್ಬಿ ವೀರಣ್ಣ, ಪೀರ್ ಸಾಬ್, ಗಂಗಾಧರ ರಾವ್, ಸುಬ್ಬಯ್ಯ ನಾಯಿಡು ಇಂಥವರ ಸಾಲಿನಲ್ಲಿ ನಿಲ್ಲುವ ಮೇರು ನಟ. ಹಾಸ್ಯ ಚಕ್ರವರ್ತಿ, ಕಲ್ಚರ್ಡ್ ಕಮೆಡಿಯನ್, ಅಭಿನಯ ಚತುರ ಇತ್ಯಾದಿ ಬಿರುದಾಂಕಿತರಾಗಿದ್ದರು ಕೆ. ಹಿರಣ್ಣಯ್ಯನವರು. ಇಂಥವರ ಹೊಟ್ಟ್ಟೆಯಲ್ಲಿ ಮತ್ತೊಬ್ಬ ಅಭಿನಯ ಚತುರ ಜನ್ಮ ತಾಳಿದ್ದರಲ್ಲಿ ಆಶ್ಚರ್ಯವೇನಿಲ್ಲ.

ಕೆ.ಹಿರಣ್ಣಯ್ಯ-ಶಾರದಮ್ಮ ದಂಪತಿಗೆ ಜನಿಸಿದ ಮಾಸ್ಟರ್ ಹಿರಣ್ಣಯ್ಯನವರ ಜನನ ನಾಮಧೇಯ ನರಸಿಂಹ ಮೂರ್ತಿ. ಹುಟ್ಟಿದ್ದು ಮೈಸೂರಿನಲ್ಲಿ, 1934ರ ಫೆಬ್ರುವರಿ 15ರಂದು. ನರಸಿಂಹ ಮೂರ್ತಿ ಮಾಸ್ಟರ್ ಹಿರಣ್ಣಯ್ಯನಾದುದರ ಹಿನ್ನೆಲೆ ಹೃದಯಸ್ಪರ್ಶಿಯಾದುದು. ಕೆ.ಹಿರಣ್ಣಯ್ಯನವರ ಕೊನೆಯ ದಿನಗಳು. ಒಂದು ದಿನ ಸಂಜೆ ನಾಟಕದ ಕಂಪೆನಿಗೆ ಹೊರಟಿದ್ದ ಮಗ ನರಸಿಂಹ ಮೂರ್ತಿಯನ್ನು ತಡೆದು ನಿಲ್ಲಿಸಿ ತಂದೆ ಕೇಳುತ್ತಾರೆ:
‘‘ನಿನ್ನಲ್ಲಿ ನನಗೆ ಜಾಗ ಕೊಡ್ತೀಯ?’’
ಈ ವಿಚಿತ್ರ ಪ್ರಶ್ನೆಗೆ ಹದಿನೆಂಟರ ಹರೆಯದ ಮಗ ಏನು ಉತ್ತರ ಕೊಟ್ಟಾನು? ‘‘ಆಗಲಿ’’ ಎಂದುಬಿಟ್ಟ.
‘‘ದುಡುಕ ಬೇಡ ಅಣ್ಣಾ...ಯೋಚನೆ ಮಾಡು ನಾನು ನಿನ್ನಲ್ಲಿಗೆ ಬಂದರೆ ಆಮೇಲೆ ನೀನು ಇರೋದೇ ಇಲ್ಲ’’
ಮಗನಿಗೆ ಮತ್ತಷ್ಟು ಗೋಜಲಾಯಿತು.
‘‘ಪರವಾಗಿಲ್ಲ ನಾನು ಹೋದರೇನಂತೆ, ನಿಮ್ಮಲ್ಲೇ ನಾನು ಇರೋಲ್ವೇ.ಅಷ್ಟೇ ಸಾಕು’’
(ನಟ ಶ್ರೇಷ್ಠ ಕೆ.ಹಿರಣ್ಣಯ್ಯ ಪುಟ 61)

ಹೀಗೆ ಮೇರು ನಟ ಕೆ.ಹಿರಣ್ಣಯ್ಯನವರು ಮಗನೊಳಗೆ ಪರಕಾಯ ಪ್ರವೇಶ ಮಾಡಿದ್ದರು. ಅಂದಿನಿಂದ ನರಸಿಂಹ ಮೂರ್ತಿ ಮಾಸ್ಟರ್ ಹಿರಣ್ಣಯ್ಯ ಆದರು. ಅದು ತಂದೆ ಮಗನಿಗೆ ಹೇಳಿದ ಕೊನೆಯ ಮಾತಾಗಿತ್ತು. ತಂದೆಯೊಡನೆ ಈ ಮಾತುಕತೆ ನಡೆದ ನಂತರ ಮಗ ಬಣ್ಣ ಹಚ್ಚಿಕೊಳ್ಳಲು ಕಂಪೆನಿಗೆ ಹೋದ. ಆಗ ‘ಮಕ್ಮಲ್ ಟೋಪಿ’ ನಡೆಯುತ್ತಿತ್ತು. ರಾತ್ರಿ 11 ಘಂಟೆ ವೇಳೆಗೆ ನಾಟಕದ ಮಧ್ಯೆ ಸಿಡಿಲಿನಂತೆ ಬಂದೆರಗಿತು ಕೆ.ಹಿರಣ್ಣಯ್ಯನವರ ನಿಧನ ವಾರ್ತೆ. ಪ್ರೇಕ್ಷಕರು ಇಚ್ಛಿಸುವುದಾದರೆ ನಾಟಕ ಪ್ರದರ್ಶನವನ್ನು ಮುಂದುವರಿಸುವುದಾಗಿ ಮ್ಯಾನೇಜರ್ ಅಚ್ಯುತರಾಯರು ಪ್ರಕಟಿಸುತ್ತಾರೆ. ಆದರೆ ಪ್ರೇಕ್ಷಕರು ‘ಬೇಡ’ ಎಂದು ಒಕ್ಕೊರಲಿನಿಂದ ಸಾರಿ ಮೇರು ನಟನ ಅಂತಿಮ ದರ್ಶನ ಪಡೆಯಲು ಧಾವಿಸುತ್ತಾರೆ.

 ಮಗನನ್ನು ಇಂಜಿನಿಯರ್ ಮಾಡಿಸ ಬೇಕೆಂಬುದು ಕೆ.ಹಿರಣ್ಣಯ್ಯನವರ ಮಹದಾಸೆಯಾಗಿತ್ತು. ಬೆಂಗಳೂರಿನಲ್ಲಿ ಬಿ.ಎಂ.ಎಸ್. ಇಂಜಿನಿಯರಿಂಗ್ ಕಾಲೇಜಿನ ಸಂಸ್ಥಾಪಕ ಬಿ.ಎಂ.ಶ್ರೀನಿವಾಸಯ್ಯನವರನ್ನು ಕಂಡು ಸೀಟನ್ನು ಖಾತ್ರಿಮಾಡಿಸಿಕೊಂಡು ಬಂದಿದ್ದರು. ಇದಕ್ಕೆ ಪ್ರತಿಯಾಗಿ ತಮ್ಮ ಕಾಣಿಕೆಯಾಗಿ ತಮ್ಮ ನಾಟಕದ ಒಂದು ಪ್ರದರ್ಶನವನ್ನು ಕೊಡುವುದಾಗಿ ಹೇಳಿದ್ದರಂತೆ. ಸೀನಿಯರ್ ಇಂಟರ್ ಮೀಡಿಯಟ್ ಪರೀಕ್ಷೆಯಲ್ಲಿ ಕನ್ನಡದಲ್ಲಿ ಫೇಲಾಗಿ, ಸಪ್ಲಿಮೆಂಟರಿ ಪರೀಕ್ಷೆ ಬರೆದು ಪಾಸಾದ ನರಸಿಂಹ ಮೂರ್ತಿ ಬಿ.ಎಂ.ಎಸ್. ಇಂಜಿನಿಯರಿಂಗ್ ಕಾಲೇಜು ಸೇರಲು ಮುಂದಿನ ಜೂನ್‌ವರೆಗೆ ಕಾಯಬೇಕಾಗಿತ್ತು. ಮೈಸೂರಿನಲ್ಲಿದ್ದ ಮಗನನ್ನು ತಮ್ಮ ಬಳಿಗೆ ಕರೆಸಿಕೊಂಡರು. ಆ ವೇಳೆಗಾಗಲೇ ಕೆ.ಹಿರಣ್ಣಯ್ಯನವರ ಆರೋಗ್ಯ ಹದಗೆಟ್ಟಿತ್ತು. ಹತ್ತು ತಿಂಗಳ ಈ ಬಿಡುವಿನಲ್ಲಿ ತಾವು ವಹಿಸುತ್ತಿದ್ದ ಪಾತ್ರಗಳನ್ನು ಮಾಡಲು ಮಗನಿಗೆ ತರಬೇತಿ ನೀಡಿದರು. ಕಂಪೆನಿ ಆಗ ಬೆಂಗಳೂರಿನಲ್ಲಿ ಮೊಕ್ಕಾಂ ಮಾಡಿತ್ತು. ಅಪ್ಪನ ಮಗನೇ ಅಪ್ಪನ ಪಾತ್ರಗಳನ್ನು ಮಾಡುತ್ತಾನೆಂದು ಪ್ರಚಾರ ಕೊಟ್ಟರು. ಮಗ ಮಾಸ್ಟರ್ ಹಿರಣ್ಣಯ್ಯನ ಅಭಿನಯ ನೋಡಲು ಜನ ಉತ್ಸಾಹ ತೋರಿದರು. ಕಂಪೆನಿಯ ಗೇಟ್ ಕಲೆಕ್ಷನ್ ಹೆಚ್ಚಿತು. ಮಾಸ್ಟರ್ ಹಿರಣ್ಣಯ್ಯ ತಂದೆ ಮಾಡುತ್ತಿದ್ದ ‘ದೇವದಾಸಿ’ಯ ನಾಜೂಕಯ್ಯ, ‘ಮಕ್ಮಲ್ ಟೋಪಿ’ಯ ನಾಣಿ, ‘ಸದಾರಮೆ’ಯ ಆದಿಮೂರ್ತಿ, ‘ಪಂಗನಾಮ’ದ ಪ್ರಾಣೇಶ ಪಾತ್ರಗಳಲ್ಲಿ ಮಿಂಚಿದರು.

ಮಗನೊಳಗೆ ತಮ್ಮ ಪ್ರತಿಭೆಯ ಪರಕಾಯ ಪ್ರವೇಶ ಮಾಡಿ, ಅದರ ಸೆಳೆಮಿಂಚುಗಳನ್ನು ಕಂಡು ತೃಪ್ತರಾದ ಕೆ.ಹಿರಣ್ಣಯ್ಯನವರು 1953ರಲ್ಲಿ ನಿಧನ ಹೊಂದಿದಾಗ ಮಗನಿಗೆ ಬಿಟ್ಟುಹೋದ ಆಸ್ತಿ ಎಂದರೆ ನಾಲ್ಕು ನಾಟಕಗಳ ಹಸ್ತಪ್ರತಿ ಮಾತ್ರ. ದಿಕ್ಕು ಕಾಣದಂತಹ ಪರಿಸ್ಥಿತಿ. ಆಗ ನೆರವಿಗೆ ಬಂದವರು ಸುಪ್ರಸಿದ್ಧ ಕಾದಂಬರಿಕಾರ ಅ.ನ.ಕೃ. ತಂದೆಯ ರಂಗಭೂಮಿಯಲ್ಲೇ ಮುಂದುವರಿಯುವಂತೆ ಸಲಹೆ ಮಾಡಿದ ಅವರು ಹಿರಣ್ಣಯ್ಯ ಮಿತ್ರ ಮಂಡಲಿಯನ್ನು ಪುನುರುಜ್ಜೀವಗೊಳಿಸಲು ನಾಲ್ಕು ಸಾವಿರ ರೂಪಾಯಿ ಬಂಡವಾಳವನ್ನೂ ಒದಗಿಸಿಕೊಟ್ಟರು. ಹಿರಣ್ಣಯ್ಯ ಮಿತ್ರ ಮಂಡಲಿಯಲ್ಲಿ ಹಿಂದೆ ನಟಿಸುತ್ತಿದ್ದ ಬಿ.ಎನ್.ಚಿನ್ನಪ್ಪ, ಮುನಿರಂಗಪ್ಪ, ನಾಗರತ್ನಮ್ಮ ಮೊದಲಾದವರು ಬಂದು ಸೇರಿಕೊಂಡರು. ತಂದೆಯವರ ಜನಪ್ರಿಯ ನಾಟಕಗಳಾದ ‘ದೇವದಾಸಿ’, ‘ಮಕ್ಮಲ್ ಟೋಪಿ’, ‘ಎಚ್ಚಮ ನಾಯಕ’, ‘ಸದಾರಮೆ’ ನಾಟಕಗಳ ತಾಲೀಮು ನಡೆಸಿ ಮಾಸ್ಟರ್ ಹಿರಣ್ಣಯ್ಯನವರು ಕಾನಕಾನಹಳ್ಳಿಯಲ್ಲಿ ಹಿರಣ್ಣಯ್ಯ ಮಿತ್ರ ಮಂಡಲಿಯನ್ನು ಪುನರಾರಂಭಿಸಿದರು. ‘ದೇವದಾಸಿ’ ನಾಟಕದಲ್ಲಿ ಮಾಸ್ಟರ್ ಹಿರಣ್ಣಯ್ಯ-ಬಳ್ಳಾರಿ ಲಲಿತಮ್ಮ ಜೋಡಿ ಜನಪ್ರಿಯವಾಯಿತು. ಹೊಸಪೇಟೆ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮುಂತಾದೆಡೆ ಈ ನಾಟಕಗಳು ಪ್ರಚಂಡ ಯಶಸ್ಸುಗಳಿಸಿದವು. ಕಂಪೆನಿಗೆ ಸ್ವಲ್ಪಆರ್ಥಿಕ ಬಲವೂ ಬಂತು.

ಈ ಯಶಸ್ಸಿನ ಬೆನ್ನಿಗೇ ಅತೃಪ್ತಿಯೂ ಮಾಸ್ಟರ್ ಹಿರಣ್ಣಯ್ಯನವರನ್ನು ಕಾಡತೊಡಗಿತು. ಎಷ್ಟು ದಿನ ಹಳೆಯ ನಾಟಕಗಳ ಬಂಡವಾಳವನ್ನೇ ನೆಚ್ಚಿಕೊಂಡಿರುವುದು? ಪ್ರೇಕ್ಷಕರು ಹೊಸದನ್ನು ಬಯಸುತ್ತಾರೆ ಎಂಬ ಆಲೋಚನೆ ತಲೆಯಲ್ಲಿ ಹೊಕ್ಕಿದ್ದೇ ಹೊಸ ನಾಟಕಗಳತ್ತ ಗಮನಹರಿಸಿದರು. ಈ ಮಧ್ಯೆ ಬೀಚಿಯಂಥವರು ‘‘ಎಷ್ಟು ದಿನಾಂತ ಅಪ್ಪನ ಬೂಟಿನಲ್ಲೇ ನಡೆಯುತ್ತಿಯ? ರಂಗಭೂಮಿಯಲ್ಲಿ ನಿನ್ನ ಅಸ್ಮಿತೆ ಛಾಪಿಸುವುದು ಯಾವಾಗ?’’ ಎಂದು ಕಿಚಾಯಿಸಿದ್ದು ಹೊಸ ನಾಟಕಗಳ ಬಗ್ಗೆ ತೀವ್ರವಾಗಿ ಯೋಚಿಸಲು ಕಾರಣವಾಯಿತು. ವಿಶ್ವವ್ಯಾಪಿಯಾದ ಲಂಚ ಕುರಿತು ನಾಟಕ ರಚಿಸಬಾರದೇಕೆ ಎನ್ನುವ ಪ್ರೇರಣೆಯೂ ಬೀಚಿಯವರಿಂದಲೇ. ಸಂಗಾತಿಗಳಾದ ಯೋಗಾನಾರಸಿಂಹ, ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರ ಜೊತೆ ಸಮಾಲೋಚಿಸಿದರು.

ಕಣಗಾಲ್ ಪ್ರಭಾಕರ ಶಾಸ್ತ್ರಿಯವರು ‘ಲಂಚಾವತಾರ’ಕ್ಕೆ ಒಂದು ಕಥಾ ಹಂದರವನ್ನು ರೂಪಿಸಿಕೊಟ್ಟರು. ಸಂಭಾಷಣೆ ಮಾಸ್ಟರ್ ಹಿರಣ್ಣಯ್ಯನವರದೇ. ಹೀಗೆ ಹುಟ್ಟಿತು ‘ಲಂಚಾವತಾರ’. 1959ರ ಡಿಸೆಂಬರ್ 30ರಂದು ಶಿವಮೊಗ್ಗೆಯಲ್ಲಿ ‘ಲಂಚಾವತಾರ’ ಮೊದಲ ಪ್ರದರ್ಶನವಾಯಿತು. ಮಾಸ್ಟರ್ ಹಿರಣ್ಣಯ್ಯನವರೇ ಇದರ ಕೇಂದ್ರಬಿಂದು. ಚಾಟಿ ಏಟಿನ ಮಾತುಗಳು ಮತ್ತು ಆ ಮಾತಿನ ಓಘಕ್ಕೆ ಅನುಗುಣವಾದಂಥ ಪಾದರಸದಂತಹ ಚುರುಕಿನ ಅಭಿನಯಗಳಿಂದ ‘ಲಂಚಾವತಾರ’ಕ್ಕೆ ಜೀವ ತುಂಬಿದರು. ‘‘ರಾಜಕಾರಣದ ಬಗ್ಗೆ ತಮ್ಮ ಮನಸ್ಸಿನಲ್ಲಿರುವ ಅನಿಸಿಕೆಗಳನ್ನು ವ್ಯಕ್ತಪಡಿಸಲು ಹೆದರಿ ಮೌನಿಗಳಾಗಿರುವ ಜನಸಾಮಾನ್ಯರ ದನಿಯಾಗಿರುವೆ ನಾನು’’ ಎಂಬುದು ಮಾಸ್ಟರ್ ಹಿರಣ್ಣಯ್ಯನವರದೇ ಮಾತು. ಲಂಚ ರುಷುವತ್ತು, ಭ್ರಷ್ಟ ರಾಜಕಾರಣಿಗಳ ಬಗೆಗಿನ ತಮ್ಮ ಭಾವನೆಗಳಿಗೆ ಮಾತುಕೊಟ್ಟ ಮಾಸ್ಟರ್ ಹಿರಣ್ಣಯ್ಯನವರನ್ನೂ ‘ಲಂಚಾವತಾರ’ ನಾಟಕವನ್ನೂ ಅಭಿಮಾನಿ ಪ್ರೇಕ್ಷಕರು ಯಶಸ್ಸಿನ ಶೃಂಗಕ್ಕೆ ತಲುಪಿಸಿದ್ದರು. ‘ಲಂಚಾವತಾರ’ ನೋಡಿ ಹೆಗಲು ಮುಟ್ಟಿಕೊಂಡ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಲೆಕ್ಕವಿಲ್ಲ. ಒಮ್ಮೆ ಸಚಿವರೊಬ್ಬರನ್ನು ನಾಟಕಕ್ಕೆ ಆಮಂತ್ರಿಸಿದ ಮಾಸ್ಟರ್ ಹಿರಣ್ಣಯ್ಯ, ಸಚಿವರ ಸಮ್ಮುಖದಲ್ಲೇ ರಂಗದ ಮೇಲೆ ಅವರ ರಾಜಕೀಯ ಜಾತಕವನ್ನು ಜಾಲಾಡಿದರಂತೆ. ಮಾಸ್ಟರ್ ಹಿರಣ್ಣಯ್ಯನವರ ಕಟುಟೀಕೆಯಿಂದ ತಾವು ಪಾಠ ಕಲಿತು ತಿದ್ದುಕೊಂಡಿರುವುದಾಗಿ ನಂತರ ಅವರು ಹೇಳಿದರೆಂದು ವರದಿಯಾಗಿದೆ. ಹತ್ತು ಸಾವಿರ ಪ್ರದರ್ಶನಗಳನ್ನು ಕಂಡಿರುವ ‘ಲಂಚಾವತಾರ’ ಆ ಕಾಲದ ರಾಜಕಾರಣಿಗಳಿಗೆ ಮತ್ತು ಭ್ರಷ್ಟ ಅಧಿಕಾರಿಗಳಿಗೆ ಮಗ್ಗುಲು ಮುಳ್ಳಾಗಿತ್ತು.

1962ರಲ್ಲಿ ಹಿರಣ್ಣಯ್ಯ ಮಿತ್ರ ಮಂಡಲಿ ಮೈಸೂರಿನಲ್ಲಿ ಮೊಕ್ಕಾಂ ಮಾಡಿದ್ದಾಗ ಒಂದು ದಿನ ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರನ್ನು ಮಾಸ್ಟರ್ ಹಿರಣ್ಣಯ್ಯನವರು ಮುಖ್ಯ ಅತಿಥಿಯಾಗಿ ಆಮಂತ್ರಿಸಿದರು. ಮುಖ್ಯ ಮಂತ್ರಿಯವರನ್ನು ಮುಂದೆ ಕೂಡಿಸಿಕೊಡು ರಾಜ್ಯದ ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್‌ನ ಆಡಳಿತವನ್ನು ಕಟುವಾಗಿ ಟೀಕಿಸಿದರು. ತಮ್ಮ ಪಕ್ಷದ ಮೇಲೆ ಮಾಸ್ಟರ್ ಹಿರಣ್ಣಯ್ಯನವರ ಉಗ್ರಟೀಕೆ, ವಾಗ್ದಾಳಿಗಳಿಂದ ಎಸ್ಸೆನ್ ಅವರಿಗೆ ಮುಜುಗರವಾಗಿರಬೇಕು. ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ‘‘ನಾಟಕ ಹೇಗೆ ಮುಂದುವರಿಸುತ್ತಿಯೋ ನೋಡುತ್ತೇನೆ’’ ಎಂದರಂತೆ ಎಸ್ಸೆನ್. ‘‘ನಾಟಕ ನಿಲ್ಲಿಸುವುದು ನಿಮ್ಮಿಂದ ಸಾಧ್ಯವಾದಲ್ಲಿ ನಾನು ರಂಗಭೂಮಿಯಿಂದಲೇ ನಿವೃತ್ತಿ ಹೊಂದುವೆ, ಇಲ್ಲವಾದಲ್ಲಿ ನೀವು ರಾಜಕಾರಣದಿಂದ ನಿವೃತ್ತರಾಗಬೇಕು’’ ಎಂದು ಹಿರಣ್ಣಯ್ಯನವರು ಸವಾಲುಹಾಕಿದರು. (ಇದು ಮಾಸ್ಟರ್ ಹಿರಣ್ಣಯ್ಯನವರ ‘ರಂಗ ಸಮ್ಮಾನ’ ಪುಸ್ತಕದಲ್ಲಿನ ಮಾತು). ‘ಲಂಚಾವತಾರ’ ನಾಟಕದಿಂದ ಸಮಾಜದ ಕೋಮುಸಾಮರಸ್ಯಕ್ಕೆ ಧಕ್ಕೆಯಾಗಲಿದೆ ಎಂದು ನಿಜಲಿಂಗಪ್ಪನವರ ಸರಕಾರ ನಾಟಕದ ಪ್ರದರ್ಶನವನ್ನು ನಿಷೇಧಿಸುವ ಉದ್ದೇಶ ಹೊಂದಿತ್ತು. ಈ ವಿಷಯ ವಿಧಾನ ಸಭೆಯಲ್ಲಿ ಚರ್ಚೆಯಾಗಿತ್ತು.

ನಾಟಕ ಪ್ರದರ್ಶನ ನಿಷೇಧಗೊಳ್ಳಬಹುದೆಂದು ಹೆದರಿದ ಮಾಸ್ಟರ್ ಹಿರಣ್ಣಯ್ಯ ಕೂಡಲೇ ನ್ಯಾಯಾಲಯದ ಮೊರೆಹೊಕ್ಕು ತಮ್ಮ ವಾದ ಆಲಿಸದೇ ನಿಷೇಧಾಜ್ಞೆ ಜಾರಿಗೆ ಕೊಡಬಾರದು ಎಂದು ಮನವಿ ಮಾಡಿಕೊಂಡರು. ನ್ಯಾಯಾಲಯ ಸಂಭವನೀಯ ದಿಢೀರ್ ನಿಷೇಧಕ್ಕೆ ತಡೆಯಾಜ್ಞೆ ನೀಡಿತು. ಕೋರ್ಟಿನಲ್ಲಿ ಎರಡು ಮೂರು ತಿಂಗಳು ಖಟ್ಲೆ ನಡೆದು ನಾಟಕದಲ್ಲಿ ಕೋಮುಸಾಮರಸ್ಯ ಹದಗೆಡಿಸುವಂತಹದ್ದು ಏನೂ ಇಲ್ಲವೆಂದು ಹೈಕೋರ್ಟ್ ತೀರ್ಪು ನೀಡಿತು. ‘ಲಂಚಾವತಾರ’ ನಿಷೇಧಾಜ್ಞೆಯ ನೇಣಿನಿಂದ ಪಾರಾಯಿತು. ‘ಲಂಚಾವತಾರ’ ಅಡತಡೆಯಿಲ್ಲದೆ ಮುಂದುವರಿಯಿತು. ಮಾಸ್ಟರ್ ಹಿರಣ್ಣಯ್ಯನವರು ಸರಕಾರವನ್ನು ನೇರವಾಗಿ ಎದುರು ಹಾಕಿಕೊಂಡ ಇನ್ನೊಂದು ಪ್ರಸಂಗ ತುರ್ತುಪರಿಸ್ಥಿತಿಯಲ್ಲಿ ಜರುಗಿತು. ಇಂದಿರಾಗಾಂಧಿಯವರು ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದ್ದನ್ನು ಉಗ್ರವಾಗಿ ಖಂಡಿಸಿದ ನಾಟಕ ‘ಕಪಿಮುಷ್ಟಿ’. ಇಂದಿರಾಗಾಂಧಿಯವರೇ ಖಳನಾಯಕಿಯಾಗಿದ್ದ ಈ ನಾಟಕದಲ್ಲಿ ಅಂದಿನ ರಾಜಕಾರಣಿಗಳ ದಿಲ್ಲಿಯ ದೇವಮಾನವ ಧೀರೇಂದ್ರ ಬ್ರಹ್ಮಚಾರಿಯನ್ನು ಹೋಲುವ ಒಂದು ಪಾತ್ರವೂ ಇತ್ತು. ದಿಲ್ಲಿಯ ಆಣತಿಯಂತೆ ರಾಜ್ಯ ಸರಕಾರ ಈ ನಾಟಕದ ಪ್ರದರ್ಶನವನ್ನು ನಿಷೇಧಿಸಿತು. ಸರಕಾರ ಚಾಪೆ ಕೆಳಗೆ ತೂರಿದರೆ ಹಿರಣ್ಣಯ್ಯನವರು ರಂಗೋಲಿ ಕೆಳಗೆ ತೂರಿಕೊಂಡರು. ಥಿಯೇಟರ್ ಮುಂದೆ ‘ದೇವದಾಸಿ’, ‘ಎಚ್ಚಮ ನಾಯಕ’ ನಾಟಕಗಳ ಬೋರ್ಡು, ಬ್ಯಾನರುಗಳು, ಒಳಗೆ ನಡೆಯುತ್ತಿದ್ದುದು ‘ಕಪಿಮುಷ್ಟಿ’.

ಹಿರಣ್ಣಯ್ಯ ತಂದೆ ಮಕ್ಕಳಿಬ್ಬರೂ ರಂಗಭೂಮಿಯನ್ನು ಒಂದು ಸುಧಾರಣಾ ಮಾಧ್ಯಮವಾಗಿ ಬಳಸಿಕೊಂಡದ್ದೇ ಹೆಚ್ಚು. ಕೆ. ಹಿರಣ್ಣಯ್ಯನವರ ‘ದೇವದಾಸಿ’,‘ಮಕ್ಮಲ್ ಟೋಪಿ’ ನೇರ ಸಾಮಾಜಿಕ ವಿಮರ್ಶೆಗಳಾಗಿದ್ದವು. ತಂದೆಯ ನಾಟಕಗಳು, ಮೌಢ್ಯ, ಬೂಟಾಟಿಕೆ, ಹೆಣ್ಣಿನ ಶೋಷಣೆ, ವೇಶ್ಯಾವೃತ್ತಿ, ವರ್ಗಭೇದ, ಜಾತಿಭೇದಗಳಂತಹ ಸಮಾಜದ ಕರಾಳ ಮುಖಗಳನ್ನು ಬಿಂಬಿಸಿದರೆ, ಮಗನ ನಾಟಕಗಳು ಸಮಾಜದ ಮುಖ್ಯ ಅಂಗವಾದ ರಾಜಕಾರಣದ ಸುಡು ವಿಮರ್ಶೆ, ವಿಡಂಬನೆ. ಒಂದು ಕಾಲಕ್ಕೆ ಮಾಸ್ಟರ್ ಹಿರಣ್ಣಯ್ಯನವರ ನಾಟಕಗಳೇ ವಿರೋಧ ಪಕ್ಷದ ಕಾರ್ಯವನ್ನು ನಿರ್ವಹಿಸುತ್ತಿದ್ದವು ಎಂದು ಹೇಳಲಾಗುತ್ತಿತ್ತು. ಲಂಚರುಷುವತ್ತು ಮತ್ತು ಭ್ರಷ್ಟಾಚಾರಗಳು, ರಾಜಕೀಯ ಅನಾಚಾರಗಳು ಇವಿಷ್ಟೇ ಮಾಸ್ಟರ್ ಹಿರಣ್ಣಯ್ಯನವರ ರಂಗಭೂಮಿಯ ಕಾಳಜಿಯಾಗಿದ್ದು, ತಮ್ಮ ಕಾಲದ ಇತರ ಸಾಮಾಜಿಕ ಚಳವಳಿಗಳು ಅವರನ್ನು ಕಾಡಿದಂತಿಲ್ಲ ಎಂಬ ಟೀಕೆಗಳೂ ಕೇಳಿ ಬಂದಿರು ವುದುಂಟು. ಇದರಲ್ಲಿ ಹುರುಳಿಲ್ಲದೇ ಇಲ್ಲ. ಆದರೆ ಸಾಮಾನ್ಯ ಪ್ರೇಕ್ಷಕರೇ ಅವರ ಗಮನಬಿಂದುವಾಗಿದ್ದುದರಿಂದ ಆ ಪ್ರೇಕ್ಷಕವರ್ಗವನ್ನು ತೃಪ್ತಿಪಡಿಸುವುದಕ್ಕೇ ಅವರ ಪ್ರತಿಭೆ-ಸಾಮರ್ಥ್ಯಗಳು ಮುಡಿಪಾಗಿದ್ದವು. ‘ಭ್ರಷ್ಟಾಚಾರ’, ‘ನಡುಬೀದಿ ನಾರಾಯಣ’, ‘ಅತ್ಯಾಚಾರ’ ಜನಮನಗೆದ್ದ ಮಾಸ್ಟರ್ ಅವರ ಇತರ ನಾಟಕಗಳು.

ಮಾತು ಮಾಸ್ಟರ್ ಹಿರಣ್ಣಯ್ಯನವರ ಬತ್ತಳಿಕೆಯ ಪ್ರಮುಖ ಅಸ್ತ್ರವಾಗಿತ್ತು. ಗೇರುಸೊಪ್ಪೆಯ ಆ ವಾಗ್ಝರಿ ಮತ್ತು ಅದರ ಶಾಖೋತನ್ನಕ್ಕೆ ಜನ ಮರುಳಾಗಿಹೋಗಿದ್ದರು. ಈ ಪ್ರತಿಭಾ ಸಾಮರ್ಥ್ಯ ಇಪ್ಪತ್ತನೆಯ ಶತಮಾನದ ಕೊನೆಯ ವೃತ್ತಿ ರಂಗಭೂಮಿಗೆ ವರದಂತೆ ಶಾಪವೂ ಆಗಿತ್ತು. ಬರಬರುತ್ತಾ ಹಿರಣ್ಣಯ್ಯ ಮಿತ್ರ ಮಂಡಲಿಯ ನಾಟಕಗಳು ಮಾಸ್ಟರ್ ಹಿರಣ್ಣಯ್ಯನವರ ಏಕವ್ಯಕ್ತಿ ಪ್ರದರ್ಶನಗಳಾದವು. ಉಳಿದ ಪಾತ್ರಗಳು ಮತ್ತು ರಂಗಭೂಮಿಯ ಉಳಿದ ಅಂಗಗಳು ಅನುಷಂಗಿಕವಾದುವು. ಮಾಸ್ಟರ್ ಹಿರಣ್ಣಯ್ಯನವರಿದ್ದರೆ ಸಾಕು ನಾಟಕ ನಡೆಯುತ್ತದೆ, ಸಂಪಾದನೆಯಾಗುತ್ತದೆ ಎನ್ನುವಂತಹ ಪರಿಸ್ಥಿತಿಯನ್ನು ಮುಟ್ಟತು. 2012ರಲ್ಲಿ ಅವರು ಅನಾರೋಗ್ಯದಿಂದಾಗಿ ರಂಗಭೂಮಿಗೆ ವಿದಾಯ ಹೇಳಿದರು. ಇದಕ್ಕೆ ವಿನಾಯಿತಿ ಎಂಬಂತೆ 2015ರಲ್ಲಿ ‘ಲಂಚಾವತಾರ’ದ ಒಂದು ಸಹಾಯಾರ್ಥ ಪ್ರದರ್ಶನ ನೀಡಿದ್ದರು. ಮಾಸ್ಟರ್ ನಿವೃತ್ತಿಯೊಂದಿಗೆ ವೃತ್ತಿ ರಂಗಭೂಮಿಯ ಪಳೆಯುಳಿಕೆಯ ಅಂಕದ ಪರದೆಯೂ ಇಳಿಯಿತು.

ಗುಬ್ಬಿ ವೀರಣ್ಣ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಮೈಸೂರು ಮಹಾರಾಜರಿಂದ ‘ನಟರತ್ನಾಕರ’ ಬಿರುದು(1962), ಗೌರವ ಡಾಕ್ಟರೇಟ್- ಹೀಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಮಾಸ್ಟರ್ ಹಿರಣ್ಣಯ್ಯನವರನ್ನು ಅರಸಿ ಬಂದಿವೆ. ಇವೆಲ್ಲದಕ್ಕೂ ಮಿಗಿಲಾಗಿ ಅವರು ಗಳಿಸಿರುವ ಜನರ ಪ್ರೀತಿ ಅತಿಶಯವಾದುದು. ಮಾಸ್ಟರ್ ಹಿರಣ್ಣಯ್ಯನವರು ಇನ್ನಿಲ್ಲ. ಅವರೊಂದಿಗೆ ಅವರದೇ ಶೈಲಿಯ ‘ವಾಗ್ವಿಲಾಸಿ ರಂಗಭೂಮಿ’ಯೂ ಕೊನೆಗೊಂಡಂತಾಗಿದೆ. ಮಾಸ್ಟರ್ ಹಿರಣ್ಣಯ್ಯ ಇನ್ನಿಲ್ಲ ಎನ್ನಲುಂಟೆ? ಅವರೀಗ ಕನ್ನಡ ರಂಗಭೂಮಿಯ ಇತಿಹಾಸದ ಒಂದಷ್ಟು ಪುಟಗಳಲ್ಲಿ ವಿರಾಜಮಾನರು.

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News