×
Ad

ಮೋಡವಿದ್ದರೆ ಯುದ್ಧ ವಿಮಾನಗಳು ರೇಡಾರ್ ನಿಂದ ತಪ್ಪಿಸಿಕೊಳ್ಳಬಹುದು ಎಂದ ನರೇಂದ್ರ ಮೋದಿ !

Update: 2019-05-12 11:37 IST

ಹೊಸದಿಲ್ಲಿ: ಬಾಲಾಕೋಟ್ ವಾಯುದಾಳಿಯ ವೇಳೆ ಮೋಡ ಹಾಗೂ ಮಳೆ, ಭಾರತೀಯ ಯುದ್ಧ ವಿಮಾನಗಳನ್ನು ಪಾಕಿಸ್ತಾನ ರಾಡಾರ್‍ಗಳು ಪತ್ತೆ ಮಾಡದಂತೆ ತಡೆದವು ಎಂಬ ಅರ್ಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿರುವುದು ದೊಡ್ಡ ಚರ್ಚೆಗೆ ಕಾರಣವಾಗದೆ. ಹಲವರು ಇದನ್ನು ಟೀಕಿಸಿದ್ದರೆ, ಮತ್ತೆ ಕೆಲವು ಮಂದಿ ಇದನ್ನು ತಿರಸ್ಕರಿಸಿದ್ದಾರೆ.

‘ನ್ಯೂಸ್ ನೇಷನ್’ ಸುದ್ದಿವಾಹಿನಿಗೆ ಶನಿವಾರ ನೀಡಿದ ಸಂದರ್ಶನದಲ್ಲಿ ಮೋದಿ, "ಹವಾಮಾನ ದಿಢೀರನೇ ಪ್ರತೀಕೂಲವಾಗಿ ಬದಲಾಯಿತು. ಮೋಡಗಳಿದ್ದವು...ಭಾರಿ ಮಳೆ ಬಂತು. ನಾವು ಮೋಡದಲ್ಲಿ ಹೋಗುವುದು ಸಾಧ್ಯವೇ ಎಂಬ ಸಂದೇಹ ಮೂಡಿತು. ಬಾಲಾಕೋಟ್ ಯೋಜನೆ ಬಗೆಗಿನ ಪರಾಮರ್ಶೆಯ ವೇಳೆ ಬಹುತೇಕ ತಜ್ಞರ ಅಭಿಪ್ರಾಯವೆಂದರೆ, ದಿನಾಂಕ ಬದಲಾದರೆ ಏನು ಎನ್ನುವುದಾಗಿತ್ತು. ನನ್ನ ಮನಸ್ಸಿನಲ್ಲಿ ಎರಡು ವಿಚಾರವಿತ್ತು. ಒಂದು ರಹಸ್ಯ ಕಾಪಾಡುವುದು.. ಎರಡನೆಯದು ನಾನು ವಿಜ್ಞಾನದ ಬಗ್ಗೆ ಹೆಚ್ಚಿನ ಅರಿವು ಇಲ್ಲ ಎಂದು ನಾನು ಹೇಳಿದೆ. ಭಾರಿ ಮೋಡ ಹಾಗೂ ಮಳೆ ಇದೆ. ಇದರಿಂದಲೂ ನಮಗೆ ಲಾಭವಿದೆ. ಮೋಡ ಕೂಡಾ ನಮಗೆ ಪ್ರಯೋಜನ ಎಂದು ಹೇಳಿದೆ. ಇದರಿಂದಾಗಿ ನಾವು ರಾಡಾರ್‍ನಿಂದ ತಪ್ಪಿಸಿಕೊಳ್ಳಬಹುದು. ಪ್ರತಿಯೊಬ್ಬರಲ್ಲೂ ಗೊಂದಲ ಆರಂಭವಾಯತು. ಅಂತಿಮವಾಗಿ ನಾನು ದಟ್ಟ ಮೋಡವಿದೆ.. ಮುಂದುವರಿಸೋಣ ಎಂದು ಹೇಳಿದೆ" ಎಂಬುದಾಗಿ ವಿವರಿಸಿದ್ದರು.

ಮೋದಿಯವರ ಅಭಿಪ್ರಾಯವನ್ನು ಬಿಜೆಪಿ ಅಧಿಕೃತ ಹ್ಯಾಂಡಲ್‍ನಿಂದ ಟ್ವೀಟ್ ಮಾಡಲಾಗಿದೆ. ಆದರೆ ಈ ಟ್ವೀಟ್ ಈಗ ಬಿಜೆಪಿ ಟೈಮ್‍ಲೈನ್‍ನಲ್ಲಿಲ್ಲ. ಆದರೆ ದ ಸ್ಟೋರಿ ಆಫ್ ಏರ್‍ಸ್ಟ್ರೈಕ್ ಎಂಬ ಶೀರ್ಷಿಕೆಯ ಒಂದು ನಿಮಿಷದ ವಿಡಿಯೊ ಪೋಸ್ಟ್ ಮಾಡಲಾಗಿದ್ದು, ಅದು ಇನ್ನೂ ಉಳಿದುಕೊಂಡಿದೆ.

ಮೂಲ ಟ್ವೀಟನ್ನು ಕಮ್ಯುನಿಸ್ಟ್ ಪಕ್ಷದ ಮುಖಂಡ ಸೀತಾರಾಂ ಯಚೂರಿ ಟೀಕಿಸಿದ್ದು, "ದೇಶದ ಭದ್ರತೆಯನ್ನು ಕೇವಲವಾಗಿ ಪರಿಗಣಿಸಬಾರದು. ಮೋದಿಯವರಿಂದ ಇಂಥ ವಿವೇಚನಾರಹಿಒತ ಹೇಳಿಕೆ ಹಾನಿಕಾರಕ. ಇಂಥವರು ದೇಶದ ಪ್ರಧಾನಿಯಾಗಿ ಉಳಿಯಬಾರದು" ಎಂದು ಟ್ವೀಟಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಕೂಡಾ ಮೋದಿಯನ್ನು ಅಣಕಿಸಿದ್ದು, "ಐದು ವರ್ಷದಿಂದ ದೊಡ್ಡದಾಗಿ ಮಾತನಾಡುತ್ತಾ ಬಂದರು. ಮೋಡ ಮುಸುಕಿರುವುದರಿಂದ ರಾಡಾರ್‍ನಂದ ತಪ್ಪಿಸಿಕೊಳ್ಳಬಹುದು ಎಂದು ಯೋಚಿಸಿದರು" ಎಂದು ಹೇಳಿದೆ.

ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಒಮರ್ ಅಬ್ದುಲ್ಲಾ ಕೂಡಾ ವ್ಯಂಗ್ಯದಲ್ಲಿ ಹಿಂದೆ ಬಿದ್ದಿಲ್ಲ. "ಪಾಕಿಸ್ತಾನಿ ರಾಡಾರ್‍ಗಳು ಮೋಡ ಭೇದಿಸಲಾರವು. ಇದು ಭವಿಷ್ಯದ ವಾಯುದಾಳಿಗಳಿಗೆ ಯೋಜನೆ ರೂಪಿಸುವಲ್ಲಿ ಅತ್ಯಂತ ಮಹತ್ವದ ಮಾಹಿತಿ" ಎಂದು ಚುಚ್ಚಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News