ರಾಮ್ ರಮೇಶ್ ಕುಟುಂಬದಲ್ಲಿ 82 ಸದಸ್ಯರು, 66 ಮತದಾರರು !

Update: 2019-05-12 09:06 GMT

ಲಕ್ನೋ: ಯಾವುದೇ ಅಭ್ಯರ್ಥಿಗಳಿಗೆ ಈ ಕುಟುಂಬ ಆಪ್ಯಾಯಮಾನ. ಚುನಾವಣೆಗೆ ಸ್ಪರ್ಧಿಸಿದ ಎಲ್ಲ ಅಭ್ಯರ್ಥಿಗಳು ಈ ಮನೆಗೆ ಭೇಟಿ ನೀಡಿ ಮತ ಯಾಚಿಸುತ್ತಾರೆ. ಏಕೆ ಗೊತ್ತೇ? ಒಂದೇ ಮನೆಯಲ್ಲಿ 66 ಮತಗಳು ಬೇರೆಲ್ಲಿ ಸಿಗುತ್ತವೆ ಹೇಳಿ.

ಅಲಹಾಬಾದ್‍ನ ಬಹರೀಚಾ ಗ್ರಾಮದ ರಾಮ್ ನರೇಶ್ ಭುರ್ತಿಯಾ ಅವರ ಕುಟುಂಬದಲ್ಲಿ 82 ಮಂದಿ ಇದ್ದು, ಈ ಪೈಕಿ 66 ಅರ್ಹ ಮತದಾರರು. ಕೃಷಿಯನ್ನೇ ನೆಚ್ಚಿಕೊಂಡಿರುವ ಈ ಕುಟುಂಬದಲ್ಲಿ ಇಬ್ಬರು ಮಾತ್ರ ಮುಂಬೈನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಗಳು. ಆರ್ಥಿಕವಾಗಿಯೂ ಈ ಕುಟುಂಬ ಸದೃಢ.

ಇಡೀ ಕುಟುಂಬಕ್ಕೆ ಒಂದೇ ಅಡುಗೆಮನೆ ಎಂದು ಕುಟುಂಬದ ಮುಖ್ಯಸ್ಥ ರಾಮ್ ನರೇಶ್ (98) ಹೆಮ್ಮೆಯಿಂದ ಹೇಳುತ್ತಾರೆ. ದಿನಕ್ಕೆ 20 ಕೆ.ಜಿ. ತರಕಾರಿ, 15 ಕೆಜಿ ಅಕ್ಕಿ, 10 ಕೆಜಿ ಗೋಧಿ ಇವರ ಆಹಾರಕ್ಕೆ ಬೇಕಾಗುತ್ತದೆ. ಅಡುಗೆಮನೆಯ ಜವಾಬ್ದಾರಿ ಕುಟುಂಬದ ಹೆಣ್ಣುಮಕ್ಕಳದ್ದು.

"ಕುಟುಂಬದಲ್ಲಿ ಯಾರು ಕೂಡಾ ತಾವು ಪ್ರತ್ಯೇಕವಾಗಿ ವಾಸಿಸುತ್ತೇವೆ ಎಂದು ಹೇಳಿಲ್ಲ. ದೇಶವನ್ನು ಒಗ್ಗಟ್ಟಾಗಿ ಹೇಗೆ ಇರಿಸಿಕೊಳ್ಳಬೇಕು ಎನ್ನುವುದಕ್ಕೆ ನಮ್ಮ ಕುಟುಂಬವನ್ನು ನಿದರ್ಶನವಾಗಿ ತೆಗೆದುಕೊಳ್ಳಬೇಕು" ಎನ್ನುವುದು ಅವರ ಅಂಬೋಣ.

ಸಾಮಾನ್ಯವಾಗಿ ಮಧ್ಯಾಹ್ನದ ಬಳಿಕ ಮತಗಟ್ಟೆಯಲ್ಲಿ ದಟ್ಟಣೆ ಕಡಿಮೆ ಇರುತ್ತದೆ ಎಂಬ ಕಾರಣಕ್ಕೆ ಇವರ ಕುಟುಂಬ ಮಧ್ಯಾಹ್ನದ ಊಟದ ಬಳಿಕ ಮತಗಟ್ಟೆಗೆ ತೆರಳುತ್ತದೆ. ನಮ್ಮ ಎಲ್ಲ ಮತಗಳೂ ಒಂದೇ ಮತಗಟ್ಟೆಯಲ್ಲಿದ್ದು, ಚುನಾವಣಾ ಅಧಿಕಾರಿಗಳು ಕೂಡಾ ನಾವು ಮತದಾನಕ್ಕೆ ಹೋದಾಗ ನಮ್ಮನ್ನು ಸ್ವಾಗತಿಸುತ್ತಾರೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಹಿರಿಯರನ್ನು ದ್ವಿಚಕ್ರ ವಾಹನದಲ್ಲಿ ಕರೆದೊಯ್ದರೆ ಉಳಿದ ಎಲ್ಲರೂ ಮತಗಟ್ಟೆಗೆ ನಡೆದೇ ಹೋಗುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News