ಮಸೀದಿಗಳ ಮೇಲೆ ದಾಳಿ: ಶ್ರೀಲಂಕಾದಲ್ಲಿ ಫೇಸ್ ಬುಕ್, ಟ್ವಿಟರ್ ಗೆ ತಾತ್ಕಾಲಿಕ ನಿಷೇಧ

Update: 2019-05-13 10:54 GMT

ಕೊಲಂಬೋ, ಮೇ 13: ಶ್ರೀಲಂಕಾದಲ್ಲಿ ಈಸ್ಟರ್ ರವಿವಾರದಂದು ಸಂಭವಿಸಿದ ಸರಣಿ ಸ್ಫೋಟಗಳ ಬಳಿಕ ರವಿವಾರ ಹಲವು ಮಸೀದಿಗಳ ಮೇಲೆ ಹಾಗೂ ಮುಸ್ಲಿಮರ ಒಡೆತನದ ಮಳಿಗೆಗಳ ಮೇಲೆ ದಾಳಿ ನಡೆದಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರ ಫೇಸ್ ಬುಕ್, ವಾಟ್ಸ್ಯಾಪ್ ಸಹಿತ ಹಲವಾರು ಸಾಮಾಜಿಕ ಜಾಲತಾಣಗಳು ಹಾಗೂ ಮೆಸೇಜಿಂಗ್ ಆ್ಯಪ್ ಗಳ ಮೇಲೆ ತಾತ್ಕಾಲಿಕ ನಿಷೇಧ ಹೇರಿದೆ.

ದೇಶದಲ್ಲಿ ಶಾಂತಿ ಸ್ಥಾಪನೆಗೆ ಇದೊಂದು ತಾತ್ಕಾಲಿಕ ಕ್ರಮವಾಗಿದೆ ಎಂದು ಸರಕಾರದ ಮಾಹಿತಿ ಇಲಾಖೆಯ ಮಹಾನಿರ್ದೇಶಕರು ಹೇಳಿದ್ದಾರೆ. ಶ್ರೀಲಂಕಾದ ಪ್ರಮುಖ ಮೊಬೈಲ್ ಫೋನ್ ಆಪರೇಟರ್ ಡೈಲಾಗ್ ಟ್ವೀಟ್ ಮಾಡಿ ತನಗೆ ಫೇಸ್ ಬುಕ್, ಟ್ವಿಟರ್ ಹೊರತಾಗಿ ವೈಬರ್, ಐಎಂಒ, ಸ್ನ್ಯಾಪ್ ಚ್ಯಾಟ್, ಇನ್‍ಸ್ಟಾಗ್ರಾಂ ಹಾಗೂ ಯುಟ್ಯೂಬ್ ಅನ್ನು ಮುಂದಿನ ಆದೇಶದ ತನಕ  ನಿಷೇಧಿಸುವಂತೆ ಸೂಚನೆ ದೊರಕಿದೆ ಎಂದು ಹೇಳಿದೆ.

ರವಿವಾರ ಪಶ್ಚಿಮ ಶ್ರೀಲಂಕಾದ ಕ್ರೈಸ್ತ ಬಾಹುಳ್ಯದ ಚಿಲಾವ್ ಪಟ್ಟಣದಲ್ಲಿ  ಹಲವಾರು ಮಸೀದಿಗಳು ಹಾಗೂ ಮುಸ್ಲಿಮರ ಮಳಿಗೆಗಳ ಮೇಲೆ ದಾಳಿ ನಡೆದು ಒಬ್ಬ ವ್ಯಕ್ತಿಯನ್ನು ಥಳಿಸಲಾಗಿತ್ತು. ಫೇಸ್ ಬುಕ್ ನಲ್ಲಿ ಆರಂಭಗೊಂಡ ಜಗಳವೊಂದು ಈ ದಾಳಿಗಳಲ್ಲಿ ಪರ್ಯವಸಾನಗೊಂಡಿದೆ ಎಂದು ಹೇಳಲಾಗಿದೆ.

ಈ ಘಟನೆಗಳ ಸಂಬಂಧ ನೆರೆಯ ಕುರುನೇಗಲ ಜಿಲ್ಲೆಯ ಕೆಲ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಈ ಬಂಧನಗಳ ಬೆನ್ನಲ್ಲೇ ಬಂಧಿತರನ್ನು ಬಿಡುಗಡೆಗೊಳಿಸಬೇಕೆಂದು ಹೆಚ್ಚಾಗಿ ಬೌದ್ಧ ಧರ್ಮೀಯರು ವಾಸಿಸುವ ಈ ಜಿಲ್ಲೆಯ ಜನರು ಆಗ್ರಹಿಸಿದ್ದು, ಪರಿಸ್ಥಿತಿಯನ್ನು  ನಿಯಂತ್ರಣಕ್ಕೆ ತರಲು ರಾತ್ರಿ ಕರ್ಫ್ಯೂ ವಿಧಿಸಲಾಗಿತ್ತು ಎಂದು ಮಿಲಿಟರಿ ವಕ್ತಾರ ಸುಮಿತ್ ಅಟಪಟ್ಟು ಹೇಳಿದ್ದಾರೆ.

ರವಿವಾರ ಎಷ್ಟು ಮಸೀದಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿಲ್ಲ. ಆದರೆ ಮುಸ್ಲಿಂ ಸಮುದಾಯದ ಮಂದಿಗೆ ಕಿರುಕುಳ ನೀಡಿಲಾಗಿದೆಯೆನ್ನಲಾದ ಹಲವಾರು ದೂರುಗಳು ತಮಗೆ ಬಂದಿವೆ ಎಂದು ಮುಸ್ಲಿಂ ಸಂಘಟನೆಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News