“ಜಿನ್ನಾರನ್ನು ಹೊಗಳಿದ ಬಿಜೆಪಿ ಅಭ್ಯರ್ಥಿ ಪರ ಪ್ರಧಾನಿಯಿಂದ ಪ್ರಚಾರ”
ಹೊಸದಿಲ್ಲಿ,ಮೇ.13: ಜವಾಹರ್ ಲಾಲ್ ನೆಹರೂ ಅವರು ಮುಹಮ್ಮದಲಿ ಜಿನ್ನಾ ಅವರು ಭಾರತದ ಪ್ರಧಾನಿಯಾಗಲು ಅವಕಾಶ ನೀಡುತ್ತಿದ್ದರೆ ಭಾರತದ ವಿಭಜನೆಯಾಗುವುದನ್ನು ತಪ್ಪಿಸಬಹುದಿತ್ತು ಎಂದು ಬಿಜೆಪಿ ಲೋಕಸಭಾ ಅಭ್ಯರ್ಥಿ ನೀಡಿದ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಬಿಜೆಪಿಯನ್ನು ಭಾರತೀಯ ಜಿನ್ನಾ ಪಕ್ಷ ಎಂದು ಜರಿದಿದೆ.
ಮಧ್ಯ ಪ್ರದೇಶದ ರತ್ಲಮ್ ಜಬುವಾ ಲೋಕಸಭಾ ಅಭ್ಯರ್ಥಿ ಗುಮನ್ ಸಿಂಗ್ ದಾಮೊರ್ ಅವರ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿರುವ ಕಾಂಗ್ರೆಸ್, ಸೋಮವಾರ ಪ್ರಧಾನಿ ರತ್ಲಮ್‌ಗೆ ತೆರಳಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರುವುದಕ್ಕೆ ಕಿಡಿಕಾರಿದೆ. ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಸ್ವಾತಂತ್ರದ ಸಮಯದಲ್ಲಿ ಹಠ ಹಿಡಿಯದೆ ಇದ್ದಿದ್ದರೆ ಈ ದೇಶ ಎರಡಾಗಿ ವಿಭಜನೆಯಾಗುತ್ತಿರಲಿಲ್ಲ ಎಂದು ಶನಿವಾರ ಮಧ್ಯ ಪ್ರದೇಶದ ರಾಣಾಪುರದಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡುವ ವೇಳೆ ದಾಮೊರ್ ತಿಳಿಸಿದ್ದರು.
ಜಿನ್ನಾ ಓರ್ವ ನ್ಯಾಯವಾದಿ ಮತ್ತು ಸುಶಿಕ್ಷಿತ ವ್ಯಕ್ತಿಯಾಗಿದ್ದರು ಎಂದೂ ದಾಮೊರ್ ಅಭಿಪ್ರಾಯಿಸಿದ್ದರು. ದಾಮೊರ್ ಹೇಳಿಕೆಯ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ವಕ್ತಾರ ಪವನ್ ಖೆರ, ಈ ಹಿಂದೆ ಅಲಿಘಡ್ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಜಿನ್ನಾರ ಭಾವಚಿತ್ರ ಹಾಕಿದ್ದಕ್ಕೆ ಕೋಲಾಹಲವೆಬ್ಬಿಸಿದ್ದ ಅದೇ ಜನರು ಇಂದು ಜಿನ್ನಾನ ಪ್ರಶಂಸಕನ ಪರ ಅಭಿಯಾನ ನಡೆಸುತ್ತಿದ್ದಾರೆ. ದಾಮೊರ್ ಹೇಳಿಕೆಯಿಂದ ಸಂಘಪರಿವಾರ ಮತ್ತು ಬಿಜೆಪಿ ಮಾನಸಿಕತೆ ಬಯಲಾಗಿದೆ ಎಂದು ತಿಳಿಸಿದ್ದಾರೆ. ಇದೀಗ ಮೋದಿ ಜಿನ್ನಾ ಬೆಂಬಲಿಗನ ಪರ ಪ್ರಚಾರ ನಡೆಸುತ್ತಿದ್ದಾರೆ. ಮೋದಿ ಅವರು ಯಾಕೆ ತಮ್ಮ ಪ್ರತಿಜ್ಞಾವಿಧಿ ಸಮಾರಂಭಕ್ಕೆ ನವಾಝ್ ಶರೀಫ್‌ರನ್ನು ಆಹ್ವಾನಿಸಿದ್ದರು. ಯಾಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮೋದಿಯವರೇ ಮತ್ತೊಮ್ಮೆ ಭಾರತದ ಪ್ರಧಾನಿಯಾಗಬೇಕೆಂದು ಬಯಸುತ್ತಿದ್ದಾರೆ ಎನ್ನುವುದು ಈಗ ಸ್ಪಷ್ಟವಾಗುತ್ತಿದೆ. ಇದು ನಿಜವಾಗಿ ಭಾರತೀಯ ಜಿನ್ನಾ ಪಾರ್ಟಿಯಾಗಿದೆ ಎಂದು ಖೆರ ವ್ಯಂಗ್ಯವಾಡಿದ್ದಾರೆ.