ಮತದಾನದ ಸಮಯ ವಿಸ್ತರಣೆ ಮನವಿ ತಳ್ಳಿ ಹಾಕಿದ ಸುಪ್ರೀಂ ಕೋರ್ಟ್

Update: 2019-05-13 16:02 GMT

ಹೊಸದಿಲ್ಲಿ,ಮೇ.13: ಹೆಚ್ಚುತ್ತಿರುವ ಬಿಸಿಲು ಮತ್ತು ರಮಝಾನ್ ತಿಂಗಳಾಗಿರುವ ಕಾರಣ ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನದ ಸಮಯವನ್ನು ಮುಂಜಾನೆ 5.30ರಿಂದ ಸಂಜೆ 7 ಗಂಟೆಯವರೆಗೆ ವಿಸ್ತರಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸುವಂತೆ ಕೋರಿ ಹಾಕಲಾಗಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ತಳ್ಳಿಹಾಕಿದೆ.

ಮತದಾನದ ಸಮಯದ ಬಗ್ಗೆ ನ್ಯಾಯಾಲಯ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಮತ್ತು ಲೋಕಸಭಾ ಚುನಾವಣೆಯ ಬಹುತೇಕ ಎಲ್ಲ ಹಂತಗಳು ಮುಗಿದಿವೆ ಎಂದು ನ್ಯಾಯಾಧೀಶರಾದ ಇಂದಿರಾ ಬ್ಯಾನರ್ಜಿ ಮತ್ತು ಸಂಜೀವ ಖನ್ನಾ ಅವರನ್ನೊಳಗೊಂಡ ರಜಾ ಸಮಯದ ಪೀಠ ತಿಳಿಸಿದೆ. ಚುನಾವಣೆಯ ವಿಷಯಗಳಲ್ಲಿ ನಾವು ಏನೂ ಮಾಡಲು ಸಾಧ್ಯವಿಲ್ಲ. ಅದು ಚುನಾವಣಾ ಆಯೋಗದ ಕೆಲಸ. ಅದಲ್ಲದೆ ಚುನಾವಣೆಯ ಬಹುತೇಕ ಹಂತಗಳು ಮುಗಿದಿದ್ದು ಇನ್ನು ಕೇವಲ ಒಂದು ಹಂತ ಮಾತ್ರ ಬಾಕಿಯಿದೆ ಎಂದು ಮನವಿದಾರ ನ್ಯಾಯವಾದಿ ಮುಹಮ್ಮದ್ ನಿಝಾಮುದ್ದೀನ್ ಪಾಶಾ ಅವರಿಗೆ ನ್ಯಾಯಾಪೀಠ ತಿಳಿಸಿದೆ. ಮನವಿದಾರರು, ದೇಶದಲ್ಲಿ, ಮುಖ್ಯವಾಗಿ ಮಧ್ಯಾಹ್ನ 12ರಿಂದ ಸಂಜೆ 3ರವರೆಗೆ ವಿಪರೀತ ಬಿಸಿಲು ಇರುವ ಕಾರಣ ನೀಡಿದಾಗ ಪ್ರತಿಕ್ರಿಯಿಸಿದ ನ್ಯಾಯಪೀಠ, ಜನರು ಮತಹಾಕಲು ಬೆಳಗ್ಗಿನ ಸಮಯದಲ್ಲಿ ಬರಬಹುದಲ್ಲವೇ ಎಂದು ಮರುಪ್ರಶ್ನಿಸಿದೆ.

ಮತದಾನದ ಅವಧಿಯನ್ನು ವಿಸ್ತರಿಸುವಂತೆ ಕೋರಿ ಪಾಶಾ ಹಾಕಿದ್ದ ಮನವಿಯ ಬಗ್ಗೆ ಅಗತ್ಯ ಆದೇಶಗಳನ್ನು ನೀಡುವಂತೆ ಚುನಾವಣಾ ಆಯೋಗಕ್ಕೆ ಸರ್ವೋಚ್ಚ ನ್ಯಾಯಾಲಯ ಮೇ 2ರಂದು ಸೂಚಿಸಿತ್ತು. ಆದರೆ ಈ ಮನವಿಯನ್ನು ಆಯೋಗ ಮೇ 5ರಂದು ತಳ್ಳಿಹಾಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News