ವಿವಾಹ ವಿಚಾರ: ಪ್ರಧಾನಿಗೆ ಮಾಯಾವತಿ ತರಾಟೆ

Update: 2019-05-13 16:03 GMT

ಲಕ್ನೋ,ಮೇ.13: ಪ್ರಧಾನಿ ಮೋದಿಯನ್ನು ತಮ್ಮ ಪತಿಯಂದಿರುವ ಭೇಟಿ ಮಾಡಿದರೆ ಅವರೂ ತಮ್ಮನ್ನು ತೊರೆಯಬಹುದು ಎಂಬ ಭಯ ಬಿಜೆಪಿಯಲ್ಲಿರುವ ಮಹಿಳಾ ನಾಯಕಿಯರಿಗೆ ಕಾಡುತ್ತಿದೆ ಎಂದು ಹೇಳುವ ಮೂಲಕ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಪ್ರಧಾನಿ ಮೋದಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.

ನನಗೆ ತಿಳಿದುಬಂದಿರುವ ವಿಷಯದ ಪ್ರಕಾರ, ಬಿಜೆಪಿಯಲ್ಲಿರುವ ಮಹಿಳೆಯರು ತಮ್ಮ ಪತಿಯಂದಿರು ಪ್ರಧಾನಿ ಮೋದಿಯನ್ನು ಭೇಟಿಯಾಗುವುದನ್ನು ಕಂಡರೆ ಭೀತಿಗೊಳಗಾಗುತ್ತಾರೆ. ತಮ್ಮ ಪತಿಯಂದಿರೂ ಮೋದಿಯಂತೆ ತಮ್ಮನ್ನು ತೊರೆಯಬಹುದು ಎಂಬ ಭಯ ಅವರನ್ನು ಕಾಡುತ್ತಿದೆ ಎಂದು ಮಾಯಾವತಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ, ನಾನು ಈ ಮಹಿಳೆಯರಿಗೆ ಮನವಿ ಮಾಡುವುದೆಂದರೆ ನೀವು ಅಂಥ ವ್ಯಕ್ತಿಗೆ ಮತ ಹಾಕಬೇಡಿ. ಇದರಿಂದ ಅವರು ಮೋದಿಯ ಪರಿತ್ಯಕ್ತ ಪತ್ನಿಗೆ ನಿಜವಾದ ರೂಪದಲ್ಲಿ ಗೌರವ ನೀಡಿದಂತಾಗುತ್ತದೆ ಎಂದು ಮಾಯಾವತಿ ತಿಳಿಸಿದ್ದಾರೆ.

ಅಲ್ವಾರ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಪ್ರಧಾನಿ ಹೇಳಿಕೆಯ ಬಗ್ಗೆ ಮಾತನಾಡಿದ ಮಾಯಾವತಿ, ಮೋದಿ ಅವರು ಅತ್ಯಾಚಾರದಂತಹ ಘಟನೆಗಳ ಬಗ್ಗೆಯೂ ಕೊಳಕು ರಾಜಕೀಯ ಮಾಡುತ್ತಾರೆ. ಆಮೂಲಕ ತಮ್ಮ ಪಕ್ಷಕ್ಕೆ ಲಾಭವಾಗುತ್ತದೆಯೇ ಎಂದು ನೋಡುತ್ತಾರೆ. ಇದು ನಿಜವಾಗಿಯೂ ನಾಚಿಕೆಗೇಡು. ತನ್ನ ಸ್ವಂತ ಪತ್ನಿಯನ್ನು ತೊರೆದಿರುವ ಮೋದಿ ಅದು ಹೇಗೆ ಇತರರ ಸಹೋದರಿಯರು ಮತ್ತು ಪತ್ನಿಯರನ್ನು ಗೌರವಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News