3ರ ಹರೆಯದ ಬಾಲಕಿಯ ಅತ್ಯಾಚಾರ: ಕಾಶ್ಮೀರದಲ್ಲಿ ಭುಗಿಲೆದ್ದ ಪ್ರತಿಭಟನೆ

Update: 2019-05-13 16:10 GMT

ಸಂಬಲ್(ಜ-ಕಾ),ಮೇ 13: ಬಂಡಿಪೋರ ಜಿಲ್ಲೆಯ ಸಂಬಲ್ ಪ್ರದೇಶದ ತ್ರಿಗಾಮ್ ಗ್ರಾಮದಲ್ಲಿ ಕಳೆದ ವಾರ ಮೂರರ ಹರೆಯದ ಬಾಲಕಿಯ ಮೇಲೆ ನಡೆದ ಅತ್ಯಾಚಾರದ ಘಟನೆಗೆ ಜಮ್ಮು-ಕಾಶ್ಮೀರದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರಿಂದ ಬಂಧಿಸಲ್ಪಟ್ಟಿರುವ ಆರೋಪಿ ತಾನು ಅಪ್ರಾಪ್ತ ವಯಸ್ಕ ಎಂದು ಹೇಳಿಕೊಂಡಿರುವುದು ಜನರನ್ನು ಇನ್ನಷ್ಟು ರೊಚ್ಚಿಗೆಬ್ಬಿಸಿದೆ. ಕಾಶ್ಮೀರ ಕಣಿವೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿ ಗುಂಪುಗಳು,ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ ಸಂಘಟನೆಗಳು ಆರೋಪಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿವೆ.

ಆರೋಪಿಯು ಬಾಲಕಿಗೆ ಸಿಹಿತಿಂಡಿ ನೀಡಿ ನಿರ್ಜನ ಸ್ಥಳಕ್ಕೊಯ್ದು ಆಕೆಯ ಮೆಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಬಾಲಕಿಯ ತಂದೆ ಈ ಬಗ್ಗೆ ಪೊಲೀಸ್ ದೂರು ದಾಖಲಿಸಿದ್ದು,ಅತ್ಯಾಚಾರ ನಡೆದಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ.

ತಾನು ಅಪ್ರಾಪ್ತ ವಯಸ್ಕನೆಂದು ತೋರಿಸುವ ಖಾಸಗಿ ಶಾಲೆಯೊಂದರ ಪ್ರಮಾಣಪತ್ರವೊಂದನ್ನು ಆರೋಪಿಯು ಹಾಜರು ಪಡಿಸಿದ್ದು,ಇದು ವಿವಾದವನ್ನು ಸೃಷ್ಟಿಸಿದೆ. ಶಾಲೆಗೆ ಬೀಗ ಹಾಕುವಂತೆ ಕುಪಿತ ಗ್ರಾಮಸ್ಥರು ಆಗ್ರಹಿಸಿದ್ದರೆ,ಕೆಲವರು ಶಾಲೆಗೆ ಬೆಂಕಿ ಹಚ್ಚಲೂ ಪ್ರಯತ್ನಿಸಿದ್ದರು. ಸಂತ್ರಸ್ತ ಬಾಲಕಿಯ ನಿಕಟ ಸಂಬಂಧಿ ಎನ್ನಲಾಗಿರುವ ಶಾಲಾ ಪ್ರಾಂಶುಪಾಲರು ಗ್ರಾಮಸ್ಥರ ಕೋಪಕ್ಕೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಅವರ ಮೇಲೆ ದಾಳಿ ನಡೆಯಬಹುದೆಂಬ ಭೀತಿಯಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ಅವರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಶಾಲಾ ಪ್ರಾಂಶುಪಾಲರು ನೀಡಿರುವ ಪ್ರಮಾಣಪತ್ರವನ್ನು ನಾವು ಅಂಗೀಕರಿಸಿಲ್ಲ. ವೈದ್ಯಕೀಯ ಮಂಡಳಿಯೊಂದು ಆರೋಪಿಯ ವಯಸ್ಸನ್ನು ನಿರ್ಧರಿಸಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

ಪ್ರತಿಭಟನಾನಿರತ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಘರ್ಷಣೆಗಳು ನಡೆದ ಹಿನ್ನೆಲೆಯಲ್ಲಿ ಹಲವಾರು ಶಾಲಾಕಾಲೇಜುಗಳನ್ನು ಮುಚ್ಚಲಾಗಿದೆ. ಘಟನೆಯನ್ನು ಖಂಡಿಸಿರುವ ಎಲ್ಲ ರಾಜಕೀಯ ಪಕ್ಷಗಳು,ಧಾರ್ಮಿಕ ಮತ್ತು ಸಾಮಾಜಿಕ ಗುಂಪುಗಳು ತ್ವರಿತ ತನಿಖೆಗೆ ಆಗ್ರಹಿಸಿವೆ. ಪ್ರತಿಭಟನೆಗಳು ಹೆಚ್ಚುವುದನ್ನು ತಡೆಯಲು ಅಧಿಕಾರಿಗಳು ಮೊಬೈಲ್ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News