ಇವಿಎಂ-ವಿವಿಪ್ಯಾಟ್ ವ್ಯತ್ಯಾಸದ ಬಗ್ಗೆ ದೂರಿದ್ದಕ್ಕೆ ಅಕ್ರಮ ಬಂಧನ: ಮತದಾರನ ಆರೋಪ

Update: 2019-05-13 16:13 GMT

ಹೊಸದಿಲ್ಲಿ,ಮೇ 13: ಇವಿಎಮ್‌ನಲ್ಲಿ ತಾನು ಚಲಾಯಿಸಿದ್ದ ಮತ ಮತ್ತು ವಿವಿಪ್ಯಾಟ್ ಸ್ಲಿಪ್ ತೋರಿಸಿದ್ದ ಮತ ತಾಳೆಯಾಗಿರಲಿಲ್ಲ ಎಂದು ದಿಲ್ಲಿಯ ಮಿಲನ್ ಗುಪ್ತಾ ಎನ್ನುವವರು ದೂರಿಕೊಂಡಿದ್ದು, ಈ ಬಗ್ಗೆ ವಿಚಾರಣೆ ನಡೆಸುವಂತೆ ದಿಲ್ಲಿಯ ಮುಖ್ಯ ಚುನಾವಣಾಧಿಕಾರಿ ರಣಬೀರ್ ಸಿಂಗ್ ಅವರಿಗೆ ನಿರ್ದೇಶ ನೀಡಲಾಗಿದೆ ಎಂದು ಚುನಾವಣಾ ಆಯುಕ್ತ ಅಶೋಕ ಲವಾಸಾ ಅವರು ಸೋಮವಾರ ಇಲ್ಲಿ ತಿಳಿಸಿದರು. ದಿಲ್ಲಿಯ ಏಳು ಲೋಕಸಭಾ ಕ್ಷೇತ್ರಗಳಲ್ಲಿ ರವಿವಾರ ಮತದಾನ ನಡೆದಿತ್ತು.

ದಿಲ್ಲಿಯ ಮತಿಯಾಲಾದ ಬೂತ್ ಸಂಖ್ಯೆ 96ರಲ್ಲಿ ಈ ಘಟನೆ ನಡೆದಿದ್ದು,ತಾನು ಈ ಬಗ್ಗೆ ಮತಗಟ್ಟೆ ಅಧಿಕಾರಿಗೆ ದೂರಿಕೊಂಡಿದ್ದೆ. ಅವರು ನೋಡಲ್ ಅಧಿಕಾರಿಗಳ ಬಳಿಗೆ,ಅವರು ಸೆಕ್ಟರ್ ಅಧಿಕಾರಿಯ ಬಳಿಗೆ ತನ್ನನ್ನು ಕಳುಹಿಸಿದ್ದರು. ಈ ಬಗ್ಗೆ ದೂರು ಸಲ್ಲಿಸದಂತೆ ಅವರೆಲ್ಲ ತನಗೆ ಸೂಚಿಸಿದ್ದರು. ಸರಕಾರಿ ನೌಕರರಿಗೆ ತಪ್ಪು ಮಾಹಿತಿಯನ್ನು ನೀಡಿದ್ದಕ್ಕಾಗಿ ಐಪಿಸಿಯ ಕಲಂ 177ರಡಿ ತನ್ನನ್ನು ಬಂಧಿಸಲಾಗುವುದು ಎಂದು ಈ ಅಧಿಕಾರಿಗಳು ತಿಳಿಸಿದ್ದರು. ನ್ಯಾಯಾಲಯದ ಆದೇಶವಿಲ್ಲದೆ ಬಂಧಿಸಲು ಈ ಕಲಮ್‌ನಲ್ಲಿ ಅವಕಾಶವಿಲ್ಲ,ಹೀಗಾಗಿ ಅವರು ಹೇಳಿದ್ದು ತನಗೆ ಅಚ್ಚರಿಯನ್ನುಂಟು ಮಾಡಿತ್ತು ಎಂದು ಗುಪ್ತಾ ತಿಳಿಸಿದರು.

 ಅನುಸೂಚಿ 6ರಡಿ ದೂರು ಸಲ್ಲಿಸುವಂತೆ ಅಧಿಕಾರಿಗಳು ತನಗೆ ಸೂಚಿಸಿದ್ದರು ಮತ್ತು ಇದನ್ನು ಈ ಮೊದಲು ಯಾರೂ ಮಾಡಿರಲಿಲ್ಲ. ಪರೀಕ್ಷಾ ಮತದಾನ ನಡೆಸಿದಾಗ ತನ್ನ ಮೂಲಮತವನ್ನು ಬಯಲುಗೊಳಿಸಲು ತಾನು ಒಪ್ಪಿರಲಿಲ್ಲ ಮತ್ತು ಯಾದೃಚ್ಛಿಕವಾಗಿ ಇವಿಎಂ ಬಟನ್ ಒತ್ತಿದ್ದೆ. ತನ್ನ ಆರೋಪ ಸುಳ್ಳು ಎನ್ನುವುದು ಸಾಬೀತಾಗಿದೆ ಎಂದು ತಿಳಿಸಿದ ಅಧಿಕಾರಿಗಳು ತನ್ನನ್ನು ಪೊಲಿಸ್ ಠಾಣೆಗೆ ಕರೆದೊಯ್ದು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದ್ದರು. ಏನು ಮಾಡಬೇಕು ಎನ್ನುವುದು ತಿಳಿಯದೆ ಪೊಲೀಸರು ಚುನಾವಣಾಧಿಕಾರಿಗಳಿಗೆ ಕರೆ ಮಾಡುವುದರಲ್ಲಿ ನಿರತರಾಗಿದ್ದರು,ತನ್ನನ್ನು ನಾಲ್ಕು ಗಂಟೆಗಳ ಕಾಲ ಅಕ್ರಮ ಬಂಧನದಲ್ಲಿರಿಸಿ ಕೊನೆಗೂ ಬಿಡುಗಡೆ ಮಾಡಲಾಗಿತ್ತು ಎಂದು ಗುಪ್ತಾ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News