ಅರ್ಹತಾ ಪರೀಕ್ಷೆಗಳಲ್ಲಿ ಮೀಸಲಾತಿ ಸಾಧ್ಯವಿಲ್ಲ: ಸರ್ವೋಚ್ಚ ನ್ಯಾಯಾಲಯ

Update: 2019-05-13 16:15 GMT

ಹೊಸದಿಲ್ಲಿ,ಮೇ.13: ಅರ್ಹತಾ ಪರೀಕ್ಷೆಗಳಲ್ಲಿ ಮೀಸಲಾತಿಗೆ ಅವಕಾಶವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಸೋಮವಾರ ಸ್ಪಷ್ಟಪಡಿಸಿದೆ. ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ (ಸಿಟಿಇಟಿ)-2019ನಲ್ಲಿ ಆರ್ಥಿಕವಾಗಿ ದುರ್ಬಲ ಸಮುದಾಯಕ್ಕೆ ಶೇ.10 ಮೀಸಲಾತಿ ನೀಡಬೇಕೆಂಬ ಮನವಿಯ ವಿಚಾರಣೆ ವೇಳೆ ಶ್ರೇಷ್ಠ ನ್ಯಾಯಾಲಯ ಈ ಸ್ಪಷ್ಟನೆ ನೀಡಿದೆ.

ಯಾವುದೇ ವರ್ಗಗಳಿಗೆ ಮೀಸಲಾತಿ ಕೇವಲ ದಾಖಲಾತಿಯ ಸಮಯದಲ್ಲಿ ಮಾತ್ರ ಅನ್ವಯವಾಗುತ್ತದೆ ಎಂದು ನ್ಯಾಯಾಧೀಶರಾರ ಇಂದಿರಾ ಬ್ಯಾನರ್ಜಿ ಮತ್ತು ಸಂಜೀವ್ ಖನ್ನಾ ಅವರ ರಜಾ ಸಮಯದ ನ್ಯಾಯಪೀಠ ತಿಳಿಸಿದೆ. ಅರ್ಹತಾ ಪರೀಕ್ಷೆಗಳಲ್ಲ ಮೀಸಲಾತಿ ನೀಡಲು ಸಾಧ್ಯವಿಲ್ಲ. ಇದನ್ನು ಸಂಪೂರ್ಣವಾಗಿ ತಪ್ಪಾಗಿ ಅರ್ಥೈಸಲಾಗಿದೆ. ಸಿಟಿಎಇಟಿ ಕೇವಲ ಒಂದು ಅರ್ಹತಾ ಪರೀಕ್ಷೆಯಾಗಿದೆ. ಮೀಸಲಾತಿಯ ವಿಷಯ ಬರುವುದು ದಾಖಲಾತಿ ಸಮಯದಲ್ಲಿ ಮಾತ್ರ ಎಂದು ಪೀಠ ತಿಳಿಸಿದೆ.

ಜುಲೈ 7ರಂದು ನಡೆಯಲಿರುವ ಸಿಟಿಇಟಿ ಪರೀಕ್ಷೆಯ ಅಧಿಸೂಚನೆ ಬಗ್ಗೆ ರಜನೀಶ್ ಕುಮಾರ್ ಹಾಗೂ ಇತರರ ಮನವಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದಾಗ ಪ್ರತಿಕ್ರಿಯಿಸಿದ ಪೀಠ, ಪರೀಕ್ಷೆಯ ಅಧಿಸೂಚನೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೂ ಮೀಸಲಾತಿ ನೀಡಲಾಗಿಲ್ಲ ಎನ್ನುವುದನ್ನು ಬೆಟ್ಟು ಮಾಡಿದೆ. ಹೇಳಿಕೆ ನಂತರ ಮನವಿಯನ್ನು ತಳ್ಳಿ ಹಾಕಿದ ನ್ಯಾಯಾಲಯ ನಂತರ, ಈ ವಿಷಯವನ್ನು ಪರಿಗಣಿಸುವಂತೆ ಮನವಿದಾರರ ಪರ ವಕೀಲರು ಒತ್ತಾಯಿಸಿದಾಗ ಅದರ ವಿಚಾರಣೆಯನ್ನು ಮೇ 16ರಂದು ನಡೆಸುವುದಾಗಿ ತಿಳಿಸಿದೆ. ತಮ್ಮನ್ನು ಆರ್ಥಿಕ ದುರ್ಬಲ ಸಮುದಾಯಕ್ಕೆ ಸೇರಿದವರು ಎಂದು ಹೇಳಿಕೊಂಡಿರುವ ಮನವಿದಾರರು ಸಿಟಿಇಟಿ-2019 ಪರೀಕ್ಷೆಯ ಅಭ್ಯರ್ಥಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News