ಐಸಿಐಸಿಐ ಬ್ಯಾಂಕ್ ವಂಚನೆ ಹಗರಣ: ಇ.ಡಿ.ಯಿಂದ ಚಂದಾ ಕೊಚ್ಚರ್ ವಿಚಾರಣೆ

Update: 2019-05-13 16:45 GMT

ಹೊಸದಿಲ್ಲಿ, ಮೇ 13: ಬ್ಯಾಂಕ್ ಸಾಲ ವಂಚನೆ ಹಾಗೂ ಕಪ್ಪುಹಣ ಬಿಳುಪು ಪ್ರಕರಣಗಳಿಗೆ ಸಂಬಂಧಿಸಿ ಐಸಿಐಸಿಐ ಬ್ಯಾಂಕ್‌ನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದಾ ಕೊಚ್ಚರ್ ಅವರು ಸೋಮವಾರ ಜಾರಿ ನಿರ್ದೇಶನಾಲಯ(ಇ.ಡಿ.)ದ ಮುಂದೆ ವಿಚಾರಣೆಗೆ ಹಾಜರಾದರು.

ಕೊಚ್ಚರ್ ಅವರು ಹೊಸದಿಲ್ಲಿಯ ಖಾನ್ ಮಾರ್ಕೆಟ್ ಪ್ರದೇಶದಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಆಗಮಿಸಿದರೆಂದು ಅಧಿಕೃತ ಮೂಲಗಳು ತಿಳಿಸಿವೆ.

ತನಿಖೆಯನ್ನು ಮುಂದಕ್ಕೊಯ್ಯಲು ಕೊಚ್ಚರ್ ಅವರ ನೆರವು ಅಗತ್ಯವಿತ್ತು ಹಾಗೂ ಕಪ್ಪುಹಣ ಬಿಳುಪು ಕಾಯ್ದೆ (ಪಿಎಂಎಲ್‌ಎ)ಯಡಿ ಅವರ ಹೇಳಿಕೆಯನ್ನು ದಾಖಲಿಸಿ ಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದೇ ಪ್ರಕರಣಕ್ಕೆ ಸಂಬಂಧಿಸಿ ಚಂದಾ ಕೊಚ್ಚರ್ ಅವರ ಪತಿ ದೀಪಕ್ ಕೊಚ್ಚರ್ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ಕಳುಹಿಸಿದೆ. ಕೆಲವು ದಿನಗಳ ಹಿಂದೆ ಚಂದಾ ಕೊಚ್ಚರ್ ಅವರ ಬಾವ(ದೀಪಕ್ ಅವರ ಸಹೋದರ) ರಾಜೀವ್ ಕೊಚ್ಚಾರ್ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೊಳಪಡಿಸಿತ್ತು.

ಈ ಹಿಂದೆ, ಮಾರ್ಚ್ 1ರಂದು ಮುಂಬೈ ಮತ್ತು ಔರಂಗಾಬಾದ್‌ನಲ್ಲಿ ಚಂದಾ ಕೊಚ್ಚರ್ ಹಾಗೂ ಅವರ ಕುಟುಂಬದ ಸದಸ್ಯರ ಹಾಗೂ ಮುಂಬೈ ಮತ್ತು ಔರಂಗಾಬಾದ್‌ನ ವಿಡಿಯೋಕೋನ್ ಗ್ರೂಪ್‌ನ ವೇಣುಗೋಪಾಲ್ ದೂತ್ ಅವರ ನಿವಾಸಗಳಲ್ಲಿ ಜಾರಿನಿರ್ದೇಶನಾಲಯದ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದರು.

ವಿಡಿಯೊಕೋನ್ ಉದ್ಯಮ ಸಮೂಹದ ಸಂಸ್ಥೆಗಳಿಗೆ 1875 ಕೋಟಿ ಸಾಲವನ್ನು ಮಂಜೂರು ಮಾಡುವಲ್ಲಿ ಅಕ್ರಮ ಹಾಗೂ ವಂಚನೆಗಳನ್ನು ಎಸಗಿದ ಆರೋಪದಲ್ಲಿ ಜಾರಿ ನಿರ್ದೇಶನಾಲಯವು ಚಂದಾ ಕೊಚ್ಚಾರ್, ದೀಪಕ್ ಕೊಚ್ಚಾರ್ ಹಾಗೂ ವೇಣುಗೋಪಾಲ್ ಧೂತ್ ಮತ್ತಿತರರ ವಿರುದ್ಧ ಈ ವರ್ಷದ ಆರಂಭದಲ್ಲಿ ಕಪ್ಪುಹಣ ಬಿಳುಪು ತಡೆ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News