ಬಾಂಬ್ ದಾಳಿ ಸಂಚಿನಿಂದ ಬಾಳ್ ಠಾಕ್ರೆ ಕುಟುಂಬವನ್ನು ರಕ್ಷಿಸಿದ್ದು ಶರದ್ ಪವಾರ್!

Update: 2019-05-15 16:39 GMT

  ಹೊಸದಿಲ್ಲಿ,ಮೇ 15: ಭಯೋತ್ಪಾದಕರು 1989ರಲ್ಲಿ ಮುಂಬೈನಲ್ಲಿರುವ ಶಿವಸೇನೆಯ ಸ್ಥಾಪಕ ಬಾಳ್ ಠಾಕ್ರೆಯವರ ನಿವಾಸ ‘ಮಾತೋಶ್ರೀ’ಯನ್ನು ಸ್ಫೋಟಿಸಲು ಸಂಚು ನಡೆಸಿದ್ದರು ಮತ್ತು ಕೆಲವು ದಿನಗಳ ಮಟ್ಟಿಗೆ ಸುರಕ್ಷಿತ ಸ್ಥಳವೊಂದನ್ನು ಕಂಡುಕೊಳ್ಳುವಂತೆ ಠಾಕ್ರೆ ಅವರು ತನ್ನ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಸೂಚಿಸಿದ್ದರು ಎಂದು ಮಾಜಿ ಶಿವಸೇನಾ ಸದಸ್ಯ ಹಾಗೂ ಹಾಲಿ ಬಿಜೆಪಿ ಬೆಂಬಲಿತ ರಾಜ್ಯಸಭಾ ಸದಸ್ಯ ನಾರಾಯಣ ರಾಣೆ ತನ್ನ ಜೀವನ ಚರಿತ್ರೆ ‘ನೋ ಹೋಲ್ಡ್ಸ್ ಬಾರ್ಡ್‌:ಮೈ ಇಯರ್ಸ್ ಇನ್ ಪಾಲಿಟಿಕ್ಸ್’ನಲ್ಲಿ ಹೇಳಿದ್ದಾರೆ.

 ಆಗ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಶರದ್ ಪವಾರ್ ಅವರು ಠಾಕ್ರೆಯವರ ಕಿರಿಯ ಪುತ್ರ ಉದ್ಧವ್ ಠಾಕ್ರೆಯನ್ನು ಕರೆಸಿಕೊಂಡು ಅವರಿಗೆ ಬಾಂಬ್ ಬೆದರಿಕೆಯ ಮಾಹಿತಿ ನೀಡಿದ್ದರು ಎಂದಿರುವ ರಾಣೆ,ಠಾಕ್ರೆ ಮುಂಬೈನಲ್ಲಿ ಬೆಂಬಲವನ್ನು ಹೊಂದಿದ್ದ ಖಲಿಸ್ತಾನಿ ಉಗ್ರರ ಹಿಟ್-ಲಿಸ್ಟ್‌ನಲ್ಲಿದ್ದರು ಎಂದೂ ತಿಳಿಸಿದ್ದಾರೆ.

 1988,ಮಾ.19ರಂದು ಸುದ್ದಿಗೋಷ್ಠಿಯೊಂದನ್ನು ಕರೆದಿದ್ದ ಠಾಕ್ರೆ, ತಾವು ಖಲಿಸ್ತಾನ್ ಚಟುವಟಿಕೆಗಳಿಗೆ ಆರ್ಥಿಕ ನೆರವು ಒದಗಿಸುತ್ತಿಲ್ಲ ಎಂದು ಮುಂಬೈನಲ್ಲಿಯ ಸಿಖ್ ಸಮುದಾಯದ ಮುಖಂಡರಿಂದ ಭರವಸೆಗಳನ್ನು ಬಯಸಿ ಪ್ರಶ್ನಾವಳಿಯೊಂದನ್ನು ವಿತರಿಸಿದ್ದರು ಎಂದಿರುವ ರಾಣೆ,ಸಿಕ್ಖರು ಉಗ್ರಗಾಮಿಗಳಿಗೆ ಹಣಕಾಸು ನೆರವನ್ನು ಮುಂದುವರಿಸಿದರೆ ನಗರದಲ್ಲಿ ಅವರ ವಿರುದ್ಧ ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರ ಹೇರುವುದಾಗಿ ಎಚ್ಚರಿಕೆಯನ್ನು ನೀಡಿದ್ದರು ಎಂದಿದ್ದಾರೆ.

1989ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆಯು ಸೋತಿತ್ತು ಮತ್ತು ರಾಜ್ಯದ ಭದ್ರತಾ ವ್ಯವಸ್ಥೆ ಕಾಂಗ್ರೆಸ್‌ನ ನಿಯಂತ್ರಣದಲ್ಲಿದ್ದರಿಂದ ಈ ಸೋಲು ಠಾಕ್ರೆಯವರನ್ನು ಇನ್ನಷ್ಟು ಅಭದ್ರ ಸ್ಥಿತಿಗೆ ತಳ್ಳಿತ್ತು ಎಂದಿರುವ ರಾಣೆ,ಠಾಕ್ರೆ ಮಾತೋಶ್ರಿಯಲ್ಲಿ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಿದ್ದರು ಮತ್ತು ಪ್ರತಿಯೊಬ್ಬರೂ ಕಟ್ಟೆಚ್ಚರದಲ್ಲಿದ್ದರು. ಇವೆಲ್ಲ ಉದ್ವಿಗ್ನತೆಗಳ ನಡುವೆಯೇ ಶರದ್ ಪವಾರ್ ಅವರು ಆಗಷ್ಟೇ ಮದುವೆಯಾಗಿದ್ದ ಉದ್ಧವ್‌ರನ್ನು ಕರೆಸಿಕೊಂಡು ಸಂಚಿನ ಬಗ್ಗೆ ಮಾಹಿತಿ ನೀಡಿದ್ದರು ಎಂದಿದ್ದಾರೆ. ಸಂಚಿನಲ್ಲಿ ಒಳಗಿನವರು,ಅಂದರೆ ಮಾತೋಶ್ರೀಯಲ್ಲಿದ್ದವರು,ರಾಜ್ಯ ಪೊಲೀಸ್ ಪಡೆ ಮತ್ತು ಗೃಹ ಸಚಿವಾಲಯದಲ್ಲಿದ್ದವರೂ ಭಾಗಿಯಾಗಿರುವುದು ತನಗೆ ಕಳವಳವನ್ನುಂಟು ಮಾಡಿದೆ ಎಂದು ಪವಾರ್ ತಿಳಿಸಿದ್ದಾಗಿ ರಾಣೆ ಹೇಳಿದ್ದಾರೆ.

 ನಿಗದಿತ ಬಾಂಬ್ ದಾಳಿಗೆ ಎರಡು ದಿನಗಳು ಬಾಕಿಯಿವೆ ಎಂದು ತಿಳಿಸಿದ್ದ ಪವಾರ್,ಠಾಕ್ರೆಯವರಿಗೆ ಹೆಚ್ಚಿನ ಪೊಲೀಸ್ ರಕ್ಷಣೆಯ ಭರವಸೆಯನ್ನು ನೀಡಿದ್ದರು ಮತ್ತು ಈ ಮಾಹಿತಿ ಕುಟುಂಬದೊಳಗೇ ಇರಲಿ ಎಂದು ಸೂಚಿಸಿದ್ದರು ಎಂದು ರಾಣೆ ನೆನಪಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News