ಪ್ರಜಾತಂತ್ರ ಮತ್ತು ವಿನಯ

Update: 2019-05-16 06:13 GMT

2019ರ ಲೋಕಸಭಾ ಚುನಾವಣಾ ಪ್ರಚಾರಗಳನ್ನು ಅಹಂಕಾರ ಮತ್ತು ದ್ವೇಷದ ಧೋರಣೆಗಳು ಆವರಿಸಿಕೊಂಡಿವೆ. ಇಂತಹ ಧೋರಣೆಗಳು ಬೇರೆಬೇರೆ ಪಕ್ಷಗಳ ಪ್ರಚಾರಕರ ಧೋರಣೆಗಳಲ್ಲಿ ಬೇರೆಬೇರೆ ಮಟ್ಟದಲ್ಲಿ ವ್ಯಕ್ತವಾಗಿದೆಯಾದರೂ, ಆಳುವಪಕ್ಷದ ಮತ್ತು ಆಳುವಕೂಟಕ್ಕೆ ಸೇರಿದ ನಾಯಕರ ಮತ್ತು ಬೆಂಬಲಿಗರ ಧೋರಣೆಗಳಲ್ಲಿ ಮಾತ್ರ ಅದು ನಿರಂತರವಾಗಿ ಮತ್ತು ಅತಿಯಾಗಿ ವ್ಯಕ್ತವಾಗುತ್ತಾ ಹೋಗಿದೆ. ಚುನಾವಣಾ ಆಯೋಗವು ಕಾಲಕಾಲಕ್ಕೆ ಮಧ್ಯಪ್ರವೇಶ ಮಾಡಿ ತಪ್ಪಿತಸ್ಥರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರೂ ಈ ಪ್ರವೃತ್ತಿ ಮಾತ್ರ ನಿಂತಿಲ್ಲ. ಇಂತಹ ನೈತಿಕವಾಗಿ ಆಕ್ರಮಣಕಾರಿಯಾಗಿರುವ ಪ್ರವೃತ್ತಿಗಳನ್ನು ತಡೆಗಟ್ಟಲು ಚುನಾವಣಾ ಅಯೋಗವು ತೆಗೆದುಕೊಂಡ ಕ್ರಮಗಳೂ ಸಹ ತುಂಬಾ ಸೀಮಿತವಾಗಿದ್ದವು ಮತ್ತು ತಾರತಮ್ಯದಿಂದ ಕೂಡಿದ್ದವು. ಅದು ತನ್ನ ಅಧಿಕಾರವನ್ನು ಚಲಾಯಿಸುವಲ್ಲಿ ಅಸಹಾಯಕತೆಯನ್ನು ಮತ್ತು ನಿರಾಸಕ್ತಿಯನ್ನು ಪ್ರದರ್ಶಿಸಿತು ಮತ್ತು ಅದರಿಂದಾಗಿ ಅದು ಭಾರತದ ರಾಜಕೀಯದಲ್ಲಿ ಹೆಚ್ಚಾಗುತ್ತಲೇ ಇರುವ ಆಕ್ರಮಣಕಾರಿ ಭಾಷಾ ಬಳಕೆಯನ್ನು ನಿಗ್ರಹಿಸುವಲ್ಲಿ ಯಾವುದೇ ಪರಿಣಾಮವನ್ನು ಬೀರಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಗಡಿಗಳನ್ನು ಕಾವಲು ಕಾಯುವ ತನ್ನ ಕರ್ತವ್ಯವನ್ನು ಕೆಲವರ ಪ್ರಚಾರವನ್ನು ಕೆಲ ಸಮಯ ನಿಷೇಧಿಸುವ ಮೂಲಕವೂ ಮತ್ತು ಹೆಚ್ಚು ಬಲಶಾಲಿಗಳ ಬಗ್ಗೆ ಪದೇಪದೇ ಕ್ಲೀನ್ ಚಿಟ್ (ನಿರ್ದೋಷಿಗಳೆಂಬ ಪ್ರಮಾಣ ಪತ್ರವನ್ನು) ನೀಡುವ ಮೂಲಕವೂ ಚುನಾವಣಾ ಆಯೋಗವು ನಿಭಾಯಿಸುತ್ತಿದೆ.

ಆದರೆ ತಮ್ಮ ವಿರೋಧಿಗಳಲ್ಲಿ ಮಾತ್ರವಲ್ಲದೆ ಒಂದು ಸಭ್ಯ ಸಮಾಜವು ಪಸರಿಸಬೇಕೆಂಬ ಆಶಯವುಳ್ಳವರಲ್ಲೂ ಸಹ ಒಂದು ಬಗೆಯ ಹತಾಷ ಭಾವಗಳನ್ನು ಹುಟ್ಟಿಸುವಂಥ ತೀವ್ರ ದ್ವೇಷದ ಮತ್ತು ಅಹಂಕಾರದ ಭಾವನೆಗಳ ಬಗ್ಗೆ ಏಕೆ ಕೆಲವು ನಾಯಕರು ಯಾವುದೇ ನೈತಿಕ ಹೊಣೆಗಾರಿಕೆಯನ್ನು ತೋರುವುದಿಲ್ಲ ಎಂಬ ಪ್ರಶ್ನೆ ಮಾತ್ರ ಕೇಳಲೇಬೇಕಿದೆ. ಇಲ್ಲಿ ವಿನಯದ ಮೌಲ್ಯವೇನು ಮತ್ತು ಅದು ದ್ವೇಷ ಹಾಗೂ ಅಹಮಿಕೆಯೆಂಬ ಸಾಮಾಜಿಕ ಕೆಡುಕುಗಳನ್ನು ನಿಯಂತ್ರಿಸುವಲ್ಲಿ ಯಾವ ಪಾತ್ರವನ್ನು ನಿಭಾಯಿಸಬಲ್ಲದು?

ವಿನಯವೆಂದರೆ ತನ್ನನ್ನು ತಾನು ಸರಿಯಾದ ಮೌಲ್ಯಮಾಪನ ಮಾಡಿಕೊಳ್ಳಲು ಬೇಕಾದ ನೈತಿಕ ಸಾಮರ್ಥ್ಯವೆಂದು ಅರ್ಥಮಾಡಿಕೊಳ್ಳ ಲಾಗುತ್ತದೆ. ಸ್ವಮೌಲ್ಯಮಾಪನವು ಅಧಿಕಾರವನ್ನು ಉಳಿಸಿಕೊಳ್ಳಬೇಕೆಂಬ ಲಾಲಸೆಯಿಂದ ಹುಟ್ಟುವ ಸ್ವಪ್ರತಿಷ್ಠೆಯ ಜ್ವಾಲೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ವಿನಯವೆಂಬ ಮೌಲ್ಯಕ್ಕೆ ದ್ವೇಷದಿಂದ ಕೂಡಿದ ಕೆಟ್ಟ ಭಾಷಣಗಳನ್ನು ನಿಯಂತ್ರಿಸುವ ಶಕ್ತಿಯೂ ಇದೆ. ಅದು ದ್ವೇಷಾಭಿವ್ಯಕ್ತಿಗಳು ಕೂಡಿಕೊಳ್ಳುತ್ತಾ ಹೋಗದಂತೆ ನೋಡಿಕೊಳ್ಳುತ್ತದೆ. ಭಾರತದ ಸಂದರ್ಭದಲ್ಲಿ ವಿನಯವಂತಿಕೆಯನ್ನು ಪಡೆದುಕೊಳ್ಳಬೇಕೆಂದರೆ ಭಿನ್ನಾಭಿಪ್ರಾಯ ಮತ್ತು ಭಿನ್ನತೆಗಳನ್ನು ಗೌರವಿಸುವ ಮತ್ತು ಭಿನ್ನಭಿನ್ನ ಅಭಿಪ್ರಾಯಗಳ ಬಹುತ್ವದ ಬಗ್ಗೆ ಸಹನೆಯನ್ನು ಹೊಂದಿರುವ ಮನಸ್ಥಿತಿಯನ್ನು ಗಳಿಸಿಕೊಳ್ಳಬೇಕು. ಅದು ರಾಜಕೀಯದಲ್ಲಿ ನಾಯಕರಿಗೆ ಸಂಬಂಧಿಸಿದ ವಿಚಾರಗಳನ್ನು ಬಿಟ್ಟು ಜನರಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಆರೋಗ್ಯಕರ ಚರ್ಚೆಗಳಲ್ಲಿ ತೊಡಗಿಕೊಳ್ಳುವಂತಹ ರಾಜಕೀಯ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ. ಅಭಿಪ್ರಾಯಗಳ ಬಹುತ್ವವನ್ನು ಗೌರವಿಸುವ ಮೂಲಕ ತನ್ನ ಅಭಿವ್ಯಕ್ತಿಯನ್ನು ಮಾಡಲು ಸಾಧ್ಯವಾಗುವ ಪರಿಸ್ಥಿತಿಯನು್ನ ಪ್ರಜಾತಂತ್ರವು ಸೃಷ್ಟಿಸುತ್ತದೆ.

 ಆದರೆ ನಾಯಕರು ಚುನಾವಣೆಯಲ್ಲಿ ಸಂಭವಿಸಬಹುದಾದ ಅಪಾಯಗಳನ್ನು ಮನಗಂಡ ನಂತರದಲ್ಲಿ ಮಾತ್ರ ವಿನಯವಂತಿಕೆಯನ್ನು ಪ್ರದರ್ಶಿಸುವಂತಾಗಬಾರದು. ಬದಲಿಗೆ ತಮ್ಮ ಪಕ್ಷ ಅಥವಾ ನಾಯಕರು ಸಾರ್ವಜನಿಕರ ಒಳಿತಿಗೆ ಮಾಡಿರುವ ಕೆಲಸ ಕಾರ್ಯಗಳಿಂದ ಗಳಿಸಿಕೊಂಡ ಆತ್ಮ ವಿಶ್ವಾಸದಿಂದ ವಿನಯವಂತಿಕೆಯು ಸ್ಪುರಿಸಬೇಕು. ನೈಜ ವಿನಯವಂತಿಕೆಯು ಚುನಾವಣಾ ಸಮಯದಲ್ಲಿ ಮಾತ್ರ ಹುಟ್ಟಬಾರದು. ಅದು ಸದಾ, ಚುನಾವಣೆ ಇದ್ದರೂ ಇಲ್ಲದಿದ್ದರೂ ತಮ್ಮಾಳಗೆ ಕಾಪಿಟ್ಟುಕೊಳ್ಳಬೇಕಾದ ಮೌಲ್ಯವಾಗಿದೆ. ನೈಜವಲ್ಲದ ವಿನಯವಂತಿಕೆಯನ್ನು ಸಂದರ್ಭೋಚಿತವಾಗಿ ಅಳವಡಿಸಿಕೊಂಡಾಗ ಅದು ಪ್ರಯೋಜನದ ಉದ್ದೇಶವುಳ್ಳ ಸಾಧನವಷ್ಟೇ ಆಗಿಬಿಡುತ್ತದೆ. ಈ ರೀತಿ ವಿನಯವಂತಿಕೆಯನ್ನು ಸದ್ಯದ ಪ್ರಯೋಜನದ ಸಾಧನವಾಗಿ ಬಳಸುವುದರಿಂದ ವಿರೋಧ ಪಕ್ಷಗಳನ್ನು ಹಂಗಿಸುವುದಕ್ಕೆ ಮತ್ತು ಅಪಮಾನಿಸುವುದಕ್ಕೆ ಅದರ ಬಳಕೆಯಾಗುತ್ತದೆ. ಕಳೆದ ಎರಡು ತಿಂಗಳಿಂದ ಕೆಲವು ನಾಯಕರು ಮಾಧ್ಯಮಗಳಲ್ಲಿ ಈ ರೀತಿ ವಿನಯವಂತಿಕೆಯನ್ನು ಪ್ರಯೋಜನ ಸಾಧನವನ್ನಾಗಿ ಮಾತ್ರ ಬಳಸುತ್ತಿರುವುದನ್ನು ನೋಡುತ್ತಿದ್ದೇವೆ.

ಆದರೆ ‘ಗಳಿಕೆ-ಸಾಧನೆ’ಗಳ ಭಾಷೆಯಿಂದ ಮತ್ತು ‘ಹೆಮ್ಮೆ’ಯ ಕುರಿತಾದ ವಿಕೃತವಾದ ತಿಳವಳಿಕೆಯಿಂದ ತುಂಬಿಹೋಗಿರುವ ಚುನಾವಣಾ ರಾಜಕೀಯದೆದುರು ವಿನಯವಂತಿಕೆಯು ಗೆಲ್ಲುವುದು ಕಷ್ಟವೇ. ದೇಶವಾಸಿಗಳ ಬದುಕಿನ ಸ್ಥಿತಿಗತಿಗಳು ಉತ್ತಮಗೊಳ್ಳುತ್ತಿರುವ ಸೂಚ್ಯಂಕವನ್ನು ಆಧರಿಸಿಕೊಂಡು ಮಾತ್ರ ಒಂದು ದೇಶದ ಏಳಿಗೆಯ ಬಗೆಗಿನ ಮೆಚ್ಚುಗೆಯು ‘ಹೆಮ್ಮೆ’ಯಾಗಿ ಅಭಿವ್ಯಕ್ತಗೊಳ್ಳಲು ಸಾಧ್ಯ. ಗಡಿಗಳಲ್ಲಿ ಸಾಧಿಸಿದ ಸೈನಿಕ ಸಾಧನೆಯೂ ಸಹ ದೇಶದ ಬಗೆಗಿನ ಹೆಮ್ಮೆಯ ಒಂದು ಮಾನದಂಡವಾಗಬಹುದು. ಆದರೆ ದೇಶದ ಬಗೆಗಿನ ಹೆಮ್ಮೆಯನ್ನು ಒಂದೇ ಒಂದು ಮಾನದಂಡಕ್ಕೆ ಸೀಮಿತಗೊಳಿಸುವುದರಿಂದ ‘ದುರಭಿಮಾನಿ ರಾಷ್ಟ್ರೀಯತೆ’ಯು ಹುಟ್ಟಿಕೊಳ್ಳುತ್ತದೆ. ಹೆಮ್ಮೆಯು ಮಾತ್ರ ನಮ್ಮ ರಾಷ್ಟ್ರೀಯತೆಯ ಸಾರದ ಮಾನದಂಡವಾಗುವುದರಿಂದ ಒಂದು ವಿನಯವಂತ ಪ್ರಜಾತಾಂತ್ರಿಕ ಪರಿಕಲ್ಪನೆ ಮತ್ತು ಆಚರಣೆಗಳ ಸಾಧ್ಯತೆಗೆ ಬೇಕಿರುವ ಭೂಮಿಕೆಯು ಹಾಾಗುತ್ತದೆ.

  ಅಹಂಕಾರದ ಎದುರು ವಿನಯವಂತಿಕೆಯು ಏಕೆ ಯಶಸ್ಸು ಕಾಣುವುದಿಲ್ಲ? ಏಕೆಂದರೆ ಈ ನಾಯಕರು ಒಂದು ಸಭ್ಯ ಸಮಾಜದ ತಳಹದಿಯಾಗಿರುವ ಸಾರ್ವಜನಿಕ ಒಳಿತಿನ ಭಾಷೆಯನ್ನು ಬಿಟ್ಟು ತಮ್ಮ ಶಕ್ತಿ ಸಾಧನೆಗಳ ಮಾತಿಗೆ ಪ್ರಾಧಾನ್ಯತೆಯನ್ನು ನೀಡುತ್ತಾರೆ. ವಾಸ್ತವವಾಗಿ ಹಕ್ಕು ಮತ್ತು ಅಧಿಕಾರದ ಭಾಷೆಗಳು ವಿನಯವಂತಿಕೆಗೆ ಬೇಕಾದ ತಳಹದಿಯನ್ನು ನಾಶಗೊಳಿಸುವಂತೆ ವರ್ತಿಸುತ್ತದೆ. ಇಲ್ಲಿ ನಾವು ಸಮಾಜದ ಒಂದು ವರ್ಗವು ಏಕಪಕ್ಷೀಯವಾಗಿ ಪ್ರತಿಪಾದಿಸುವ ಹಕ್ಕುಗಳ ಬಗ್ಗೆ ಮಾತನಾಡುತ್ತಿದ್ದೇವೆ. ಅದು ಅಕಾರಣ ಅಹಂಕಾರವನ್ನು ಮತ್ತು ಆಧಾರವಿಲ್ಲದ ಹೆಮ್ಮೆಗಳನ್ನು ಪುನರುತ್ಪಾದಿಸುತ್ತದೆ. ಹಕ್ಕುಗಳ ಬಗೆಗಿನ ಈ ಬಗೆಯ ಪಕ್ಷಪಾತಿ ಪರಿಕಲ್ಪನೆಗಳೇ ಒಂದು ನಿರ್ದಿಷ್ಟ ಪಕ್ಷ ಅಥವಾ ಒಂದು ಸಾಮಾಜಿಕ ಗುಂಪಿಗೆ ರಾಷ್ಟ್ರದ ಬಗ್ಗೆ ವಿಶೇಷ ಹಕ್ಕುಸ್ವಾಮ್ಯವಿದೆಯೆಂಬ ಧೋರಣೆಯನ್ನು ಹುಟ್ಟುಹಾಕುತ್ತದೆ. ಇದು ಎನ್‌ಡಿಎ ಸರಕಾರದ ಬೆಂಬಲಿಗರಲ್ಲಿ ಸ್ಪಷ್ಟವಾಗಿ ಎದ್ದುಕಾಣುತ್ತದೆ. ಭಾರತದ ಬಗ್ಗೆ ತಮಗಿರುವ ವಿಶೇಷವಾದ ಅಧಿಕಾರವನ್ನು ಪ್ರತಿಪಾದನೆ ಮಾಡುವ ಹೊತ್ತಿನಲ್ಲಿ ಇತರರಿಗೂ ಈ ದೇಶದ ಮೇಲಿರುವ ಹಕ್ಕನ್ನು ಅವರು ನಿರಾಕರಿಸುತ್ತಿರುತ್ತಾರೆ. ಭಾರತದ ಪ್ರಜಾತಾಂತ್ರಿಕ ಸಂಸ್ಕೃತಿಯನ್ನು ಹಾಳುಗೆಡವಲು ಯತ್ನಿಸುತ್ತಿರುವ ಬಗ್ಗೆ ಹಿಂದುತ್ವ ಬ್ರಿಗೇಡಿನ ವಕ್ತಾರರನ್ನು ಯಾರಾದರೂ ಪ್ರಶ್ನಿಸಿದರೆೆ ‘‘ಪಾಕಿಸ್ತಾನಕ್ಕೆ ತೊಲಗಿ’’ ಎಂಬುದು ಅವರು ನೀಡುವ ಸಾಮಾನ್ಯ ಪ್ರತ್ಯುತ್ತರವಾಗಿರುತ್ತದೆ. ಈ ದೇಶವನ್ನು ಆಳಲು ಇತರರಿಗೂ ಹಕ್ಕಿದೆಯೆಂಬುದನ್ನೇ ಅವರು ಮಾನ್ಯ ಮಾಡದಿರುವಾಗ ವಿನಯವಂತಿಕೆಯ ಅಗತ್ಯವೇ ಇರುವುದಿಲ್ಲ. ತನ್ನ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಎದುರಾಳಿಯು ಈ ಹಿಂದೆ ಮಾಡಿದ ತಪ್ಪುಗಳನ್ನು ಎತ್ತಾಡುವ ಧೋರಣೆಯು ತನ್ನ ತಪ್ಪಿಗಾಗಿ ಪಶ್ಚಾತಾಪ ಪಡುವ ಸಾಮರ್ಥ್ಯವನ್ನೂ ನಾಶಗೊಳಿಸುತ್ತದೆ. ಈ ಪಶ್ಚಾತಾಪರಹಿತ ಧೋರಣೆಯು ಒಂದು ಸಭ್ಯ ಸಮಾಜವನ್ನು ಸಾಕಾರಗೊಳಿಸಲು ಬೇಕಾದ ಹೊಸ ರಾಜಕೀಯದ ಹೊಸ ನಿಯಮಗಳನ್ನು ಸೃಷ್ಟಿಸಲು ಅಗತ್ಯವಿರುವ ನೈತಿಕ ನಾಯಕತ್ವವನ್ನು ಒದಗದಂತೆ ಮಾಡುತ್ತದೆ. ಒಟ್ಟಾರೆಯಾಗಿ ಭಾರತದ ಬಹುತ್ವರೂಪಿ ರಾಜಕೀಯ ಸಂಸ್ಕೃತಿಯು ಎದುರಿಸುತ್ತಿರುವ ಮೂಲಭೂತ ಸವಾಲೆಂದರೆ ರಾಜಕಾರಣದಲ್ಲಿ ವಿನಯವಂತಿಕೆಯ ಕುಸಿತವೇ ಆಗಿದೆ. ಕೆಟ್ಟ ಭಾಷಣಗಳ ನಿಯಂತ್ರಣವು ಸಾರ್ವಜನಿಕ ಸಂಸ್ಥೆಗಳ ನಿಯಂತ್ರಣಗಳಿಗಿಂತ ಹೆಚ್ಚಾಗಿ ವಿನಯವಂತಿಕೆಯ ಮೌಲ್ಯದ ಪ್ರಜಾತಾಂತ್ರೀಕರಣದ ಪರಿಣಾಮವಾಗಬೇಕು ಎಂಬುದನ್ನು ನಾವು ಅರಿತುಕೊಳ್ಳಬೇಕಿದೆ.

Writer - ಕೃಪೆ: Economic and Political Weekly

contributor

Editor - ಕೃಪೆ: Economic and Political Weekly

contributor

Similar News