ಸಿಪಿಎಂ ಕಾರ್ಯಕರ್ತನ ಹತ್ಯೆ: ಬಿಜೆಪಿ, ಆರೆಸ್ಸೆಸ್‌ ನ 7 ಕಾರ್ಯಕರ್ತರಿಗೆ ಜೀವಾವಧಿ

Update: 2019-05-16 17:01 GMT

ಕಣ್ಣೂರು, ಮೇ 16: ಸಿಪಿಎಂ ಕಾರ್ಯಕರ್ತ ಪರಕ್ಕಂಡಿ ಪವಿತ್ರನ್ ಅವರನ್ನು ತಲಶ್ಶೇರಿಯ ಪೊನ್ನಿಯಮ್‌ ನಲ್ಲಿರುವ ಅವರ ಮನೆಯ ಸಮೀಪ ಹತ್ಯೆಗೈದ ಪ್ರಕರಣದಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್‌ನ 7 ಮಂದಿ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ ನೀಡಿ ತಲಶ್ಶೇರಿಯ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

ಈ 7 ಮಂದಿಯನ್ನು ಆರೋಪಿಗಳು ಎಂದು ಪರಿಗಣಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಪಿ.ಎನ್. ವಿನೋದ್ ಬುಧವಾರ ಈ ತೀರ್ಪು ನೀಡಿದ್ದಾರೆ. ಅಲ್ಲದೆ ಪ್ರತಿಯೊಬ್ಬರಿಗೂ ತಲಾ 1 ಲಕ್ಷ ರೂ. ದಂಡ ವಿಧಿಸಿದ್ದಾರೆ.

ಪ್ರಕರಣದಲ್ಲಿ ಸಿ.ಕೆ. ಪ್ರಶಾಂತ್, ಲಿಜೇಶ್ ಆಲಿಯಾಸ್ ಲಿಜು, ಪರಯಕಂಡಿ ವಿನೇಶ್, ಪ್ರಶಾಂತ್ ಆಲಿಯಾಸ್ ಮುತ್ತು, ಕೆ.ಸಿ. ಅನಿಲ್ ಕುಮಾರ್, ಕಿಝಿಕ್ಕಯಿಲ್ ವಿಜಿಲೇಶ್ ಹಾಗೂ ಕೆ. ಮಹೇಶ್‌ರನ್ನು ಆರೋಪಿ ಎಂದು ಪರಿಗಣಿಸಲಾಗಿತ್ತು. ಪ್ರಕರಣದ ಇನ್ನೋರ್ವ ಆರೋಪಿ ವಲಿಯಪರಂಬತ್ ಜ್ಯೋತಿಶ್ ಮೃತಪಟ್ಟಿದ್ದಾನೆ.

ಪ್ರಾಸಿಕ್ಯೂಷನ್ ಪ್ರಕಾರ, 2007 ನವೆಂಬರ್ 6ರಂದು ಬೆಳಗ್ಗೆ 5,45ಕ್ಕೆ ಪರಕ್ಕಂಡಿ ಪವಿತ್ರನ್ ಹಾಲು ತರಲು ಪೊನ್ನಿಯಂನಲ್ಲಿರುವ ತನ್ನ ಮನೆಯಿಂದ ಹೊರಗೆ ಬಂದ ಸಂದರ್ಭ ಬಿಜೆಪಿ ಹಾಗೂ ಆರೆಸ್ಸೆಸ್‌ನ 8 ಮಂದಿ ಕಾರ್ಯಕರ್ತರ ಗುಂಪೊಂದು ಅವರ ಮೇಲೆ ದಾಳಿ ನಡೆಸಿತ್ತು. ದಾಳಿಯಿಂದ ತಪ್ಪಿಸಿಕೊಳ್ಳಲು ಪವಿತ್ರನ್ ಸಮೀಪದ ಮನೆಯ ಕಂಪೌಂಡ್‌ನ ಒಳಗೆ ಓಡಿದ್ದರು. ಬೆನ್ನಟ್ಟಿ ಬಂದ ಗುಂಪು ಅವರಿಗೆ ಇರಿದಿತ್ತು. ಗಂಭೀರ ಗಾಯಗೊಂಡಿದ್ದ ಪವಿತ್ರನ್ ಕೋಝಿಕ್ಕೋಡ್‌ನ ಆಸ್ಪತ್ರೆಯೊಂದರಲ್ಲಿ ನವೆಂಬರ್ 10ರಂದು ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News