‘ಕೇರಳ ಮಾದರಿಯ ಆರ್ಥಿಕ ಪ್ರಗತಿ’ ಅಧ್ಯಯನ: ಭಾರತಕ್ಕೆ ಆಗಮಿಸಲಿರುವ ಫ್ರಾನ್ಸ್ ಆರ್ಥಿಕ ತಜ್ಞ
ತಿರುವನಂತಪುರ, ಮೇ 17: ಕೇರಳದ ಆರ್ಥಿಕ ಬೆಳವಣಿಗೆಯ ಮಾದರಿ ಬಗ್ಗೆ ಅಧ್ಯಯನ ನಡೆಸಲು ಫ್ರಾನ್ಸ್ ಆರ್ಥಿಕ ತಜ್ಞ ಥೋಮಸ್ ಪಿಕೆಟ್ಟಿ ಆಸಕ್ತಿ ವ್ಯಕ್ತಪಡಿಸಿದ್ದಾರೆ ಹಾಗೂ ರಾಜ್ಯದ ಆರ್ಥಿಕತೆಯನ್ನು ಸುದೃಢಗೊಳಿಸಲು ಪ್ರಸ್ತಾವ ಸಲ್ಲಿಸಿದ್ದಾರೆ.
ಪಿಕೆಟ್ಟಿ ಅವರು ಈ ಪ್ರಸ್ತಾವವನ್ನು ಪ್ಯಾರಿಸ್ ಪ್ರವಾಸದಲ್ಲಿ ಇರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮುಂದೆ ಇರಿಸಿದ್ದಾರೆ. ಪಿಣರಾಯಿ ವಿಜಯನ್ ಅವರು ಪಿಕೆಟ್ಟಿಯೊಂದಿಗೆ ಗಂಟೆಗಳ ಕಾಲ ಚರ್ಚೆ ನಡೆಸಿದರು. ಭಾರತದಲ್ಲಿ ಆರ್ಥಿಕ ಅಸಮಾನತೆಯ ಬಗ್ಗೆ ಪ್ರಮುಖ ಸಂಶೋಧನೆ ನಡೆಸಿರುವ ಪ್ಯಾರಿಸ್ ಸ್ಕೂಲ್ ಆಫ್ ಇಕನಾಮಿಕ್ಸ್‌ನ ಪ್ರಾಧ್ಯಾಪಕ ಲುಕಾಸ್ ಚಾನ್ಸೆಲ್ ಕೂಡ ಈ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಸರಕಾರ ಎಲ್ಲ ಒಳಗೊಳ್ಳುವಿಕೆಯ ಅಭಿವೃದ್ಧಿ ಕಾರ್ಯತಂತ್ರವನ್ನು ಅನುಷ್ಠಾನಗೊಳಿಸುತ್ತಿದೆ. ಸಾಮಾನ್ಯ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಗುಣಮಟ್ಟವನ್ನು ವೃದ್ಧಿಸಲು ಶ್ರಮಿಸಲಾಗುತ್ತಿದೆ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.
ಸರಕಾರ ಮಧ್ಯಪ್ರವೇಶಿಸಿದ ಬಳಿಕ ಸರಕಾರಿ ಶಾಲೆಗೆ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಕಲ್ಯಾಣ ಪಿಂಚಣಿ ದೇಶಕ್ಕೇ ಮಾದರಿ ಎಂದು ಅವರು ತಿಳಿಸಿದರು. ಆರ್ಥಿಕ ಅಸಮಾನತೆ ಬಗ್ಗೆ ಸರಕಾರಕ್ಕೆ ಆತಂಕ ಇದೆ. ಆದುದರಿಂದ ಸರಕಾರ ದುರ್ಬಲರ ಆರ್ಥಿಕ ಹಾಗೂ ಸಾಮಾಜಿಕ ಹಕ್ಕುಗಳ ಬಗ್ಗೆ ಗಮನ ಕೇಂದ್ರೀಕರಿಸಿದೆ. ಅವರನ್ನು ಮುಖ್ಯವಾಹಿನಿಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಿಣರಾಯಿ ವಿಜಯನ್ ಹೇಳಿದರು.