ವಾರಣಾಸಿಯಲ್ಲಿ ಹೊರಗಿನವರಿಂದ ಮತದಾರರಿಗೆ ಬೆದರಿಕೆ: ಮಾಯಾವತಿ
Update: 2019-05-17 23:12 IST
ಲಕ್ನೋ,ಮೇ.17: ವಾರಣಾಸಿಯಲ್ಲಿ ಪ್ರಧಾನಿ ಮೋದಿ ಗೆಲುವನ್ನು ಖಚಿತಪಡಿಸಿಕೊಳ್ಳಲು ಮತದಾರರನ್ನು ಓಲೈಸಲು ಮತ್ತು ಬೆದರಿಸಲು ಹೊರಗಿನವರನ್ನು ಬಳಸಲಾಗುತ್ತಿದೆ ಎಂದು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಆರೋಪಿಸಿದ್ದಾರೆ. ವಿಷಯಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿರುವ ಬಿಎಸ್‌ಪಿ ನಾಯಕಿ, ಆಯೋಗ ಯಾಕೆ ಪಶ್ಚಿಮ ಬಂಗಾಳದಲ್ಲಿ ಮಾಡಿದಂತೆ ವಾರಣಾಸಿಯಲ್ಲೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ ಮಾಯಾವತಿ, ವಾರಣಾಸಿಯಲ್ಲಿ ಮೋದಿ ಗೆಲುವಿಗಾಗಿ ಮತದಾರರನ್ನು ಓಲೈಸಲು ಮತ್ತು ಬೆದರಿಸಲು ಹೊರಗಿನವರನ್ನು ಬಳಸಲಾಗುತ್ತಿದೆ. ಈತಹ ಪರಿಸ್ಥಿತಿಯಲ್ಲಿ ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆ ನಡೆಯಲು ಹೇಗೆ ಸಾಧ್ಯ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ವಾರಣಾಸಿಯಲ್ಲಿ ಮೇ 19ರಂದು ಚುನಾವಣೆ ನಡೆಯಲಿದೆ.