ಇಂದಿರಾ ಗಾಂಧಿ ರೀತಿಯಲ್ಲೇ ನನ್ನ ಹತ್ಯೆಗೆ ಬಿಜೆಪಿಯಿಂದ ಸಂಚು: ಕೇಜ್ರಿವಾಲ್ ಗಂಭೀರ ಆರೋಪ

Update: 2019-05-18 17:29 GMT

ಹೊಸದಿಲ್ಲಿ, ಮೇ 18: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಹತ್ಯೆಗೈದಂತೆ ನನ್ನನ್ನು ನನ್ನ ಖಾಸಗಿ ಭದ್ರತಾ ಅಧಿಕಾರಿಯೇ ಹತ್ಯೆ ಮಾಡಬಹುದು ಎಂದು ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್‌ನ ವರಿಷ್ಠ ಅರವಿಂದ ಕೇಜ್ರಿವಾಲ್ ಶನಿವಾರ ಆರೋಪಿಸಿದ್ದಾರೆ.

  ಬಿಜೆಪಿ ನನ್ನ ಹತ್ಯೆಗೆ ಸಂಚು ರೂಪಿಸುತ್ತಿದೆ. ಒಂದು ದಿನ ಬಿಜೆಪಿ ನನ್ನ ಖಾಸಗಿ ಭದ್ರತಾ ಅಧಿಕಾರಿಯಿಂದಲೇ ನನ್ನನ್ನು ಕೊಲ್ಲಿಸಬಹುದು ಎಂದು ಕೇಜ್ರಿವಾಲ್ ಪಂಜಾಬ್‌ನ ಸ್ಥಳೀಯ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

ಪಂಜಾಬ್‌ನ ಎಲ್ಲ ಕ್ಷೇತ್ರಗಳಲ್ಲಿ ತನ್ನ ಪಕ್ಷ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಇಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ.

ಈ ತಿಂಗಳ ಆರಂಭದಲ್ಲಿ ಹೊಸದಿಲ್ಲಿಯ ಮೋತಿ ನಗರದಲ್ಲಿ ಪ್ರಚಾರ ನಡೆಸುತ್ತಿರುವ ಸಂದರ್ಭ ವ್ಯಕ್ತಿಯೋರ್ವ ಅರವಿಂದ್ ಕೇಜ್ರಿವಾಲ್ ಅವರಿಗೆ ಕಪಾಳಕ್ಕೆ ಹೊಡೆದಿದ್ದ. ಅತೃಪ್ತ ಆಪ್ ಕಾರ್ಯಕರ್ತನೇ ಕೇಜ್ರಿವಾಲ್ ಅವರ ಕೆನ್ನೆಗೆ ಹೊಡೆದಿದ್ದಾನೆ ಎಂದು ದಿಲ್ಲಿ ಪೊಲೀಸರು ಪ್ರತಿಪಾದಿಸಿದ್ದರು. ಆದರೆ, ಆಪ್ ಇದನ್ನು ಬಿಜೆಪಿ ನಡೆಸಿದ ದಾಳಿ ಎಂದು ಆರೋಪಿಸಿತ್ತು.

“ನಾನು ಕೊಲೆಯಾದರೂ ಅದು ಪಕ್ಷದ ಅಸಂತುಷ್ಟ ಕಾರ್ಯಕರ್ತ ಮಾಡಿರುವುದು ಎಂದು ಪೊಲೀಸರು ಹೇಳಬಹುದು. ಇದರ ಅರ್ಥ ಏನು ? ಒಂದು ವೇಳೆ ಕಾಂಗ್ರೆಸ್ ಕಾರ್ಯಕರ್ತ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಬಗ್ಗೆ ಆಕ್ರೋಶಿತನಾಗಿ ಅವರಿಗೆ ಹೊಡೆಯಲು ಸಾಧ್ಯವೇ ? ಬಿಜೆಪಿ ಕಾರ್ಯಕರ್ತ ಪ್ರಧಾನಿ ಮೋದಿ ಅವರ ಬಗ್ಗೆ ಆಕ್ರೋಶಿತನಾಗಿ ಅವರಿಗೆ ಹೊಡೆಯಲು ಸಾಧ್ಯವೇ ?” ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News