ಭದೇರ್ವಾ ಹತ್ಯೆ ತನಿಖೆಗೆ ವಿಶೇಷ ತಂಡ ರಚನೆ: 3ನೇ ದಿನಕ್ಕೆ ಕರ್ಫ್ಯೂ ಮಂದುವರಿಕೆ

Update: 2019-05-18 14:53 GMT

ಭದೇರ್ವಾ(ಜ-ಕಾ),ಮೇ 18: ಬದೇರ್ವಾದಲ್ಲಿ ಗುಂಡಿಟ್ಟು ವ್ಯಕ್ತಿಯೋರ್ವನನ್ನು ಹತ್ಯೆಗೈದ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ(ಸಿಟ್)ವನ್ನು ರಚಿಸಲಾಗಿದೆ. ನಯೀಂ ಶಾ ಹತ್ಯೆಯ ಬಳಿಕ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದ ಬಳಿ ಈ ಕೋಮುಸೂಕ್ಷ್ಮ ಪಟ್ಟಣದಲ್ಲಿ ಹೇರಲಾಗಿರುವ ಕರ್ಫ್ಯೂ ಮೂರನೇ ದಿನವಾದ ಶನಿವಾರವೂ ಮುಂದುವರಿದಿದೆ.

 ಶಾ ಹತ್ಯೆಯ ಹಿಂದೆ ಗೋರಕ್ಷಕರ ಕೈವಾಡವಿದೆ ಎಂಬ ವರದಿಗಳನ್ನು ತಳ್ಳಿಹಾಕಿರುವ ದೋಡಾ ಜಿಲ್ಲಾಡಳಿತವು,ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಲು ಕೆಲವರು ಘಟನೆಗೆ ಕೋಮುಬಣ್ಣ ನೀಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದೆ.

ಭದೇರ್ವಾ ಎಸ್‌ಪಿ ರಾಜಸಿಂಗ್ ಗೌರಿಯಾ ನೇತೃತ್ವದ ಸಿಟ್ ಶನಿವಾರ ಘಟನೆ ನಡೆದ ಇಲ್ಲಿಯ ಕಚ್ಚಿ ನಾಲ್ತಿ ಗ್ರಾಮಕ್ಕೆ ಭೇಟಿ ನೀಡಿ ತಾಜಾ ಸಾಕ್ಷಾಧಾರಗಳನ್ನು ಸಂಗ್ರಹಿಸಿದೆ.

ಹತ್ಯೆಗೆ ಬಳಸಲಾಗಿತ್ತೆನ್ನಲಾದ 12-ಬೋರ್ ಬಂದೂಕನ್ನು ಪೊಲೀಸರು ವಶಪಡಿಸಿಕೊಂಡಿದ್ದು,ಅದನ್ನು ಪರೀಕ್ಷೆಗಾಗಿ ಜಮ್ಮವಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹತ್ಯೆಗೆ ಸಂಬಂಧಿಸಿದಂತೆ ಎಂಟು ಜನರನ್ನು ಈವರೆಗೆ ಬಂಧಿಸಲಾಗಿದೆ.

ಘಟನೆಯ ಬಳಿಕ ನಡೆದ ಕಲ್ಲುತೂರಾಟದಲ್ಲಿ ಹಲವಾರು ಹೊರಗಿನವರು ಭಾಗಿಯಾಗಿದ್ದರು ಮತ್ತು ಈ ಪೈಕಿ ಮೂವರನ್ನು ಬಂಧಿಸಲಾಗಿದೆ. ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಎಲ್ಲ ಜನರನ್ನು ಗುರುತಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನಗಳಾಗುವ ನಿರೀಕ್ಷೆಯಿದೆ ಎಂದು ದೋಡಾ ಜಿಲ್ಲಾಧಿಕಾರಿಗಳು ತಿಳಿಸಿದರು.

ಪಟ್ಟಣದಲ್ಲಿ,ವಿಶೇಷವಾಗಿ ಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚಿನ ಬಂದೋಬಸ್ತ್ ಏರ್ಪಡಿಸಲಾಗಿದೆ. ತನ್ಮಧ್ಯೆ ಶಾ ಹತ್ಯೆಯನ್ನು ಪ್ರತಿಭಟಿಸಿ ನೆರೆಯ ಕಿಶ್ತವಾರ್ ಜಿಲ್ಲಾ ಕೇಂದ್ರದಲ್ಲಿ ಬಹುಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಸೇರಿದ ಅಂಗಡಿ -ಮುಂಗಟ್ಟುಗಳನ್ನು ಮುಚ್ಚಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News