ಹದಿಹರೆಯದ ತಾಯಂದಿರಿಗೆ ಹುಟ್ಟಿದ ಮಕ್ಕಳಲ್ಲಿ ಹೆಚ್ಚು ಅಪೌಷ್ಠಿಕತೆ: ಅಧ್ಯಯನ ವರದಿ

Update: 2019-05-18 15:05 GMT

ಹೊಸದಿಲ್ಲಿ, ಮೇ.18: ಹದಿಹರೆಯದ ತಾಯಂದಿರಿಗೆ ಜನಿಸುವ ಮಕ್ಕಳು ಹೆಚ್ಚು ಅಪೌಷ್ಠಿಕತೆಯನ್ನು ಹೊಂದಿರುತ್ತಾರೆ ಎಂದು ಅಂತರ್‌ರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ (ಐಎಫ್‌ಪಿಆರ್‌ಐ) ನಡೆಸಿದ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ವಯಸ್ಕ ತಾಯಂದಿರ ಮಕ್ಕಳಿಗೆ ಹೋಲಿಸಿದರೆ ಹದಿಹರೆಯದ ತಾಯಂದಿರ ಮಕ್ಕಳು ಶೇ.10 ಹೆಚ್ಚು ಅಪೌಷ್ಠಿಕತೆಗೆ ತುತ್ತಾಗುತ್ತಾರೆ ಎಂದು ವರದಿ ತಿಳಿಸಿದೆ. ಹದಿಹರೆಯದ ಗರ್ಭಧಾರಣೆ ಅತೀಹೆಚ್ಚಾಗಿರುವ ಹತ್ತು ರಾಷ್ಟ್ರಗಳ ಪೈಕಿ ಭಾರತವೂ ಎಂಬ ಆಘಾತಕಾರಿ ಅಂಶವೂ ಈ ಅಧ್ಯಯನದಲ್ಲಿ ಬಯಲಾಗಿದೆ.

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಮಕ್ಕಳ ವಿವಾಹಕ್ಕೆ ಭಾರತದಲ್ಲಿ ನಿಷೇಧವಿದ್ದರೂ 2016ರ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ-4ರ ವರದಿಯ ಪ್ರಕಾರ, ಶೇ.27 ಹೆಣ್ಮಕ್ಕಳು ವಯಸ್ಸಿಗೆ ಬರುವ ಮೊದಲೇ ವಿವಾಹಿತರಾಗುತ್ತಾರೆ ಮತ್ತು ಇವರಲ್ಲಿ ಶೇ.31 ಹೆಣ್ಮಕ್ಕಳು 18 ವರ್ಷಕ್ಕೂ ಮೊದಲೇ ಮಕ್ಕಳನ್ನು ಹೆರುತ್ತಾರೆ. ಭಾರತದಲ್ಲಿ ಕಿರಿಯ ವಯಸ್ಸಿನಲ್ಲಿ ಮದುವೆ ಮತ್ತು ಗರ್ಭಧಾರಣೆ ಒಂದು ಆಯ್ಕೆಯಾಗಿಲ್ಲ ಬದಲಿಗೆ ಆಯ್ಕೆಗಳ ಕೊರತೆ ಫಲವಾಗಿದೆ ಮತ್ತು ಹೆಣ್ಣಿನ ನಿಯಂತ್ರಣಕ್ಕೆ ಸಿಗದ ಸ್ಥಿತಿಯಾಗಿರುವುದು ದುರದೃಷ್ಟಕರ ಎಂದು ಐಎಫ್‌ಪಿಆರ್‌ಐ ಸದಸ್ಯೆ ಪೂರ್ಣಿಮಾ ಮೆನನ್ ವಿಷಾದ ವ್ಯಕ್ತಪಡಿಸಿದ್ದಾರೆ.

ಒಳ್ಳೆಯ ಸುದ್ದಿಯೆಂದರೆ ಭಾರತ ಸರಕಾರ ಕಿರಿವಯಸ್ಸಿನ ಮದುವೆಯನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಹೆಣ್ಮಕ್ಕಳ ಶಿಕ್ಷಣ ಮತ್ತು ಹೆಣ್ಮಕ್ಕಳ ಮೇಲಿನ ಮಾನವ ಬಂಡವಾಳ ಹೂಡಿಕೆ ಪ್ರೋತ್ಸಾಹ ನೀಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಂಟಿಯಾಗಿ ಹಣಕಾಸು ನೆರವು ನೀಡುತ್ತಿದೆ ಎಂದು ಮೆನನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News