ಎಲೆಕ್ಷನ್ ಕಮಿಷನ್ ಈಗ ‘ಎಲೆಕ್ಷನ್ ಒಮಿಷನ್’ ಆಗಿದೆ: ಕಾಂಗ್ರೆಸ್

Update: 2019-05-18 16:03 GMT

 ಹೊಸದಿಲ್ಲಿ,ಮೇ 18: ಚುನಾವಣಾ ಆಯೋಗದಲ್ಲಿ ಬಿರುಕುಂಟಾಗಿದೆ ಎಂಬ ವರದಿಗಳ ನಡುವೆಯೇ ಆಯೋಗವನ್ನು ಟೀಕಿಸಿರುವ ಕಾಂಗ್ರೆಸ್,ಎಲೆಕ್ಷನ್ ಕಮಿಷನ್ ಈಗ ‘ಎಲೆಕ್ಷನ್ ಒಮಿಷನ್(ಬಿಟ್ಟುಬಿಡುವ)’ ಆಗಿದೆ ಎಂದು ಹೇಳಿದೆ.

ತನ್ನ ಅಲ್ಪಮತದ ನಿರ್ಧಾರಗಳನ್ನು ದಾಖಲಿಸಿಕೊಳ್ಳುತ್ತಿಲ್ಲ ಎಂಬ ಕಾರಣದಿಂದಾಗಿ ಚುನಾವಣಾ ಆಯುಕ್ತ ಅಶೋಕ ಲವಾಸಾ ಅವರು ಮಾದರಿ ನೀತಿ ಸಂಹಿತೆ ಉಲ್ಲಂಘನೆಗಳನ್ನು ನಿರ್ಧರಿಸುವ ಆಯೋಗದ ಸಭೆಗಳಿಂದ ದೂರವುಳಿದಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಈ ಹೇಳಿಕೆ ಹೊರಬಿದ್ದಿದೆ.

ಇದು ಸಾಂವಿಧಾನಿಕ ನಿಯಮಗಳು,ಸ್ಥಾಪಿತ ಸಂಪ್ರದಾಯಗಳು ಮತ್ತು ಔಚಿತ್ಯದ ಹಾಡಹಗಲೇ ನಡೆಯುತ್ತಿರುವ ಕೊಲೆಯಾಗಿದೆ ಎಂದು ಹೇಳಿದ ಕಾಂಗ್ರೆಸ್‌ನ ಮುಖ್ಯವಕ್ತಾರ ರಣದೀಪ ಸಿಂಗ್ ಸುರ್ಜೆವಾಲಾ ಅವರು,ಚುನಾವಣಾ ಆಯೋಗದ ನಿಯಮಗಳು ಸರ್ವಾನುಮತದ ಅಭಿಪ್ರಾಯಕ್ಕೆ ಆದ್ಯತೆಯನ್ನು ನೀಡಿವೆ,ಆದರೆ ಸರ್ವಾನುಮತದ ಅನುಪಸ್ಥಿತಿಯಲ್ಲಿ ಬಹುಮತದ ನಿರ್ಧಾರಕ್ಕೆ ಅವಕಾಶ ನೀಡಿವೆ. ಸಾಂವಿಧಾನಿಕ ಸಂಸ್ಥೆಯಾಗಿರುವ ಆಯೋಗದಲ್ಲಿ ಅಲ್ಪಮತದ ಅಭಿಪ್ರಾಯವನ್ನು ದಾಖಲಿಸಬೇಕು,ಆದರೆ ಪ್ರಧಾನಿ ನರೇಂದ್ರ ಮೋದಿ-ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜೋಡಿಯ ರಕ್ಷಣೆಗಾಗಿ ಇದನ್ನು ದಮನಿಸಲಾಗುತ್ತಿದೆ ಎಂದರು.

ನೀತಿಸಂಹಿತೆ ಉಲ್ಲಂಘನೆಗಳಲ್ಲಿ ಮೋದಿ ಮತ್ತು ಶಾ ಅವರಿಗೆ ಚುನಾವಣಾ ಆಯೋಗವು ನೀಡಿರುವ ಐದು ಕ್ಲೀನ್ ಚಿಟ್‌ಗಳನ್ನು ಲವಾಸಾ ವಿರೋಧಿಸಿದ್ದರು ಎಂದು ಈ ಹಿಂದೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆಯೋಗವು ಒಟ್ಟು ಇಂತಹ ಆರು ಪ್ರಕರಣಗಳಲ್ಲಿ ಮೋದಿಯರಿಗೆ ಕ್ಲೀನ್ ಚಿಟ್ ನೀಡಿದೆ,ಆದರೆ ಆಯೋಗದ ಆದೇಶಗಳಲ್ಲಿ ಲವಾಸಾರ ಭಿನ್ನಾಭಿಪ್ರಾಯಗಳನ್ನು ದಾಖಲಿಸಿರಲಿಲ್ಲ.

ಇದು ಮೋದಿ ಸರಕಾರವು ಆಯೋಗದ ಮೇಲೆ ಹೇರುತ್ತಿರುವ ಒತ್ತಡದ ಪ್ರಮಾಣವನ್ನು ತೋರಿಸುತ್ತದೆ ಮತ್ತು ಇದು ಚುನಾವಣಾ ಆಯೋಗದ ಸಮಗ್ರತೆಗೆ ತೀವ್ರ ಕಳಂಕವನ್ನುಂಟು ಮಾಡಿದೆ ಎಂದ ಸುರ್ಜೆವಾಲಾ,ಸಾಂಸ್ಥಿಕ ಸಮಗ್ರತೆಗೆ ಚ್ಯುತಿ ತರುವುದು ಬಿಜೆಪಿ ಸರಕಾರದ ಪ್ರಮುಖ ಗುರುತು ಆಗಿದೆ ಮತ್ತು ಮೋದಿ ಅವರೇ ಸ್ವತಃ ಭಾರತದಲ್ಲಿಯ ಎಲ್ಲ ಸಂಸ್ಥೆಗಳನ್ನು ನಾಶಗೊಳಿಸುವ ಹೊಣೆಯನ್ನು ವಹಿಸಿಕೊಂಡಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News